ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಡ್ಡೋಡಿ ಯೋಜನೆ ವಿರುದ್ಧ ಸಂಘಟಿತ ಹೋರಾಟ’

ಪೇಜಾವರ ಶ್ರೀ ಸಲಹೆ
Last Updated 25 ಸೆಪ್ಟೆಂಬರ್ 2013, 10:45 IST
ಅಕ್ಷರ ಗಾತ್ರ

ಉಡುಪಿ: ‘ಅವಿಭಜಿತ ದಕ್ಕಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಸ್ಥಾಪಿಸಿದ ಉದ್ದಿಮೆಗಳಿಂದ ಜನ ತೊಂದ­ರೆ ಅನುಭವಿಸುತ್ತಿದ್ದಾರೆ. ಪರಿಸರಕ್ಕೆ ಮಾರಕ­ವಾಗಿರುವ ನಿಡ್ಡೋಡಿ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಮುಂದಾದರೆ ಜನರು ಸಂಘ­ಟಿತರಾಗಿ ಹೋರಾಟ ನಡೆಸಬೇಕು’ ಎಂದು ಪೇಜಾ­ವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. 

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ನಿಡ್ಡೋಡಿ ಉಷ್ಣ ವಿದ್ಯುತ್‌ ಸ್ಥಾವರ ನಮಗೆ ಬೇಡವೇ ಬೇಡ’ ಸಾರ್ವಜನಿಕ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆ ಕೇವಲ ನಿಡ್ಡೋಡಿಗೆ ಸೀಮಿತ ಎಂದು ಜನ ತಿಳಿಯದೆ, ಯೋಜನೆಯಿಂದ ಆಗುವ  ದುಷ್ಪರಿಣಾಮಗಳ ಬಗ್ಗೆ ಜಾಗೃತರಾಗಿ ಕರಾವಳಿ ಜಿಲ್ಲೆಗಳ ಜನ ಹೋರಾಟ ನಡೆಸಬೇಕು. ನಂದಿಕೂರಿನಲ್ಲಿ ಸ್ಥಾಪಿಸಿದ ಯುಪಿಸಿಎಲ್‌ ಯೋಜ­ನೆ­­ಯಿಂದ ಪರಿಸರಕ್ಕೆ ಆಗಿರುವ ಹಾನಿ ಬಗ್ಗೆ ಸಮಿತಿ ವರದಿ ನೀಡಿದರೂ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಜನ ಸಹಿಸಿಕೊಂಡು ಸುಮ್ಮನಿದ್ದಾರೆ ಎಂದರು.

ಮಂತ್ರಿಗಳು, ಜನಪ್ರತಿನಿಧಿಗಳು ನಿಡ್ಡೋಡಿ ಯೋಜನೆ ಸ್ಥಾಪಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕೃಷಿ, ಪರಿಸರ ರಕ್ಷಣೆಯ ಉದ್ಯಮ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಹೇಳಿದರು.

‘ಪಾರಂಪರಿಕ ಕೇಂದ್ರವನ್ನು ಭೇದಿಸುವ ಕೆಲಸ ನಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡಿ ಶೇ 70ರಷ್ಟು ಜನ ಒಪ್ಪಿಗೆ ನೀಡಿದರೆ ಪರಿಸರ ಪೂರಕ ಇತರ ಉದ್ದಿಮೆಗಳನ್ನು ಸರ್ಕಾರ ಆರಂಭಿಸಬೇಕು’ ಎಂದು ಮೂಡಬಿದಿರೆ ಜೈನ ಮಠದ ಚಾರು­ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಅನು­ಸರಿಸುತ್ತಾರೆ, ನಾವು ಪಾಶ್ಚಾತ್ಯ ಸಂಸ್ಕೃತಿ ಅನು­ಕರಣೆ ಮಾಡದೆ ಆಧ್ಯಾತ್ಮಿಕ, ಜೀವವೈವಿಧ್ಯ ಹಾಗೂ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿ ಜಿಲ್ಲೆಯ ರಕ್ಷಣೆ ಮೂಲಕ ಬೆಳವಣಿಗೆಗೆ ಮುಂದಾಗಬೇಕು ಎಂದು ಅವರು ಹೇಳಿದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ.ಬಿ.ಎಂ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. 

ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್‌, ಪದಾಧಿಕಾರಿಗಳಾದ ಫೆಲಿಕ್ಸ್‌ ಡಿ ಸೋಜ, ಸುರೇಶ್‌ ಶೆಟ್ಟಿ, ಬಿ.ಡಿ.ಶೆಟ್ಟಿ, ಜಯಕರ ಹೆಜ­ಮಾಡಿ ಇದ್ದರು. ಸಮಿತಿಯ ಅಧ್ಯಕ್ಷ ಹರೀಶ್‌ ಕುಮಾರ್‌ ಎ ಶೆಟ್ಟಿ ಸ್ವಾಗತಿಸಿದರು. ಕೆ.ಪಿ. ಜಗದೀಶ್‌ ಅಧಿಕಾರಿ ಪ್ರಾಸ್ತಾವಿಕಿ ಮಾತನಾಡಿ­ದರು. ಅಶ್ವತ್‌ ಭಾರದ್ವಾಜ್‌ ನಿರೂಪಿಸಿ­ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT