ಬುಧವಾರ, ಡಿಸೆಂಬರ್ 11, 2019
25 °C

ಗದ್ದಲದ ಮಧ್ಯೆ ಉಳಿತಾಯ ಬಜೆಟ್ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದ್ದಲದ ಮಧ್ಯೆ ಉಳಿತಾಯ ಬಜೆಟ್ ಮಂಡನೆ

ಕಾರವಾರ: ಗೊಂದಲ, ಗದ್ದಲದ ಹಾಗೂ 11 ಮಂದಿ ಸದಸ್ಯರ ಉಪಸ್ಥಿತಿಯಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ 2018– 19ನೇ ಸಾಲಿನ ₹ 79.61 ಲಕ್ಷದ ಉಳಿತಾಯ ಬಜೆಟ್ ಅನ್ನು ಬುಧವಾರ ಮಂಡಿಸಿದರು.

31 ವಾರ್ಡ್‌ ಸದಸ್ಯರಲ್ಲಿ 20 ಮಂದಿ ಬಜೆಟ್ ಮಂಡನೆಗೂ ಮುನ್ನ ನಡೆದ ಗದ್ದಲದಿಂದಾಗಿ ಹೊರ ನಡೆದಿದ್ದರಿಂದ ಕೋರಂ ಕೊರತೆಯಾಗಿತ್ತು.

ದೀರ್ಘ ಕಾಲದ ಆರೋಪ– ಪ್ರತ್ಯಾರೋಪ, ಸಮಾಧಾನಪಡಿಸುವ ಕೆಲ ಬೆಳವಣಿಗೆ ಬಳಿಕ ಮಹಿಳಾ ಸದಸ್ಯರ ಸಮ್ಮುಖದಲ್ಲಿ ಬಜೆಟ್‌  ಮಂಡಿಸಲಾಯಿತು.

‘ಸಾರ್ವಜನಿಕರಿಗೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ವೆಚ್ಚಗಳಿಗಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಜನರಿಗೆ ಉತ್ತಮ ಸೇವೆ ನೀಡಲು ಸರ್ಕಾರದ ಮಾರ್ಗಸೂಚಿಯಂತೆ ಬಜೆಟ್ ಮಂಡಿಸಲಾಗುತ್ತಿದೆ’ ಎಂದು ಬಜೆಟ್ ಭಾಷಣ ಪ್ರಾರಂಭಿಸಿದ ಗಣಪತಿ ನಾಯ್ಕ, ಹತ್ತು ನಿಮಿಷದಲ್ಲಿ ಬಜೆಟ್ ಪ್ರತಿಯನ್ನು ಯಥಾವತ್ತಾಗಿ ಓದಿ ಮುಗಿಸಿದರು.

‘2018– 19ನೇ ಸಾಲಿನ ಬಜೆಟ್‌ನ ವಾರ್ಷಿಕ ಆದಾಯ ಸೇರಿದಂತೆ ವಿವಿಧ ಮೂಲಗಳಿಂದ ನಗರಸಭೆಗೆ ₹ 30.85 ಕೋಟಿ ಆದಾಯ ಕ್ರೋಢೀಕರಣ ನಿರೀಕ್ಷಿಸಲಾಗಿದ್ದು, ಅದರಲ್ಲಿ ₹ 30.5 ಕೋಟಿಯನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡಬಹುದಾಗಿದೆ’ ಎಂದು ಹೇಳಿದರು.

ಮೂಲಸೌಕರ್ಯಕ್ಕೆ ಒತ್ತು: ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ನೀರು ಪೂರೈಕೆಗೆ ಹೊಸ ಪೈಪ್‌ಲೈನ್ ಅಳವಡಿಸಲು, ರಸ್ತೆಗಳ ನಿರ್ಮಾಣ ಹಾಗೂ ನವೀಕರಣಕ್ಕಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ.

ನಗರ ವ್ಯಾಪ್ತಿಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಜನರ ಕಲ್ಯಾಣಕ್ಕಾಗಿ ₹ 77.14 ಲಕ್ಷ, ರಸ್ತೆ ಬದಿ ಚರಂಡಿ ನಿರ್ಮಾಣ ಹಾಗೂ ನಿರ್ವಹಣೆಗಾಗಿ ₹ 76 ಲಕ್ಷ, ಬೀದಿ ದೀಪ ನಿರ್ವಹಣೆಗಾಗಿ ₹ 72 ಲಕ್ಷ, ಮೀನು ಮಾರುಕಟ್ಟೆ ನಿರ್ಮಾಣಕ್ಕೆ ₹ 50 ಲಕ್ಷ ಹಾಗೂ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹ 50 ಲಕ್ಷವನ್ನು ಈ ಬಾರಿ ನಿಗದಿಪಡಿಸಲಾಗಿದೆ.

ಉಳಿದಂತೆ ಜಲಮಂಡಳಿಯಿಂದ ನೀರು ಖರೀದಿಗೆ ₹ 50 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ₹ 44 ಲಕ್ಷ, ಸ್ಮಶಾನ ಅಭಿವೃದ್ಧಿ ಹಾಗೂ ದುರಸ್ತಿಗಾಗಿ, ಚರಂಡಿ ಹೂಳು ತೆಗೆಯಲು ತಲಾ ₹ 30 ಲಕ್ಷ ಮೀಡಲಿಡಲಾಗಿದೆ. ಬೀದಿ ದೀಪಗಳ ಜೋಡಣೆಗಾಗಿ ₹ 42 ಲಕ್ಷ, ಒಳಚರಂಡಿ ನಿರ್ಮಾಣಕ್ಕಾಗಿ ₹ 35 ಲಕ್ಷವನ್ನು ಕಾಯ್ದಿರಿಸಲಾಗಿದೆ.

ಸಿಬ್ಬಂದಿ ವೇತನ ಪಾವತಿಗಾಗಿ ₹ 3.92 ಕೋಟಿ, ಬೀದಿ ದೀಪದ ವಿದ್ಯುತ್ ಬಿಲ್ ಪಾವತಿಗಾಗಿ ₹ 3.84 ಕೋಟಿ, ಕಚೇರಿ ಕಟ್ಟಡ ನಿರ್ಮಾಣಕ್ಕೆ ₹ 2 ಕೋಟಿ, ಹೊರಗುತ್ತಿಗೆ ಬೀದಿ ಗುಡಿಸಲು ಪೌರಕಾರ್ಮಿಕರ ಹಾಗೂ ವಾಹನ ಚಾಲಕರ ಪೂರೈಕೆಗೆ ₹ 1.67 ಕೋಟಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮಕ್ಕೆ ಸಾಲ ಪಾವತಿಗೆ ₹ 1 ಕೋಟಿಯನ್ನು ಈ ಬಾರಿಯ ನಗರಸಭೆಯ ಬಜೆಟ್‌ನಲ್ಲಿ ಇಡಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಸಾವಂತ ಇದ್ದರು.

ಸದಸ್ಯರಿಂದ ಸಭೆ ಬಹಿಷ್ಕಾರ

ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಯಾವ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಇಲ್ಲಿನ ಸಭೆಗಳಲ್ಲಿ ನಿರ್ಣಯಿಸಿದ ಯಾವುದೇ ಕಾಮಗಾರಿಗಳನ್ನು ಅಧಿಕಾರಿಗಳು ಪೂರ್ಣಗೊಳಿಸುತ್ತಿಲ್ಲ ಎಂದು ಸದಸ್ಯರಾದ ರಮೇಶ್ ಗೌಡ, ಮಹೇಶ್ ಥಾಮ್ಸೆ, ರತ್ನಾಕರ ನಾಯ್ಕ,ಪ್ರೇಮಾನಂದ ಗುನಗಾ, ರಂಜು ಮಾಸಳಕರ್, ರವಿ ಕುಡ್ತರಕರ್, ಪ್ರಶಾಂತ ಹರಿಕಂತ್ರ, ಪಾಂಡುರಂಗ ರೇವಣ್‌ಡಿಕರ್, ರವೀಂದ್ರ ಬಾನಾವಳಿ ಸಭೆಯಲ್ಲಿ ಗದ್ದಲ ಎಬ್ಬಿಸಿ ಹೊರ ನಡೆದರು. ಕೆಲ ಹೊತ್ತಿನ ಬಳಿಕ ಅಧ್ಯಕ್ಷರ ಎದುರು ಕುಳಿತು ಬಜೆಟ್ ಮಂಡಿಸದಂತೆ ಪ್ರತಿಭಟಿಸಿದರು.

ಕುಡಿಯುವ ನೀರು ಪೂರೈಕೆ, ಅಕ್ರಮ ಕಟ್ಟಗಳ ತೆರವು ಸೇರಿದಂತೆ ವಿವಿಧ ವಿವಿಧ ವಿಷಯಗಳ ಕುರಿತಾಗಿ ಸಭೆಯಲ್ಲಿ ನಿರ್ಣಯಿಸಿ ಅದೆಷ್ಟೋ ತಿಂಗಳು ಗತಿಸಿದರೂ ಯಾವುದೂ ಕಾರ್ಯಗತವಾಗಿಲ್ಲ. ಸದಸ್ಯರ ಮಾತಿಗೆ ಹಾಗೂ ನಿರ್ಣಯಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.

‘ಈಗ ಬಜೆಟ್ ಮಂಡಿಸದಿದ್ದರೆ ಮಾರ್ಚ್‌ನಲ್ಲಿ ನಗರಸಭೆ ಖರ್ಚುವೆಚ್ಚಗಳಿಗೆ ಹಣಕಾಸು ವ್ಯವಸ್ಥೆ ಮಾಡಿಕೊಳ್ಳುವುದರಲ್ಲಿ ಸಮಸ್ಯೆಯಾಗುತ್ತದೆ. ಆದ್ದರಿಂದ ಸದಸ್ಯರು ಬಜೆಟ್ ಮಂಡನೆಗೆ ಅವಕಾಶ ನೀಡಬೇಕು. ಕಾನೂನಿನ ಪ್ರಕಾರ ನೀವು ಪ್ರತಿಭಟಿಸುತ್ತಿರುವುದು ತಪ್ಪು. ಕಾನೂನಿನ ಚೌಕಟ್ಟನ್ನು ಮೀರಿ ನಾವು ಕೆಲಸ ಮಾಡಿಲ್ಲ’

ಎಂದು ಪೌರಾಯುಕ್ತ ಎಸ್. ಯೋಗೇಶ್ವರ ಸದಸ್ಯರ ಮನವೊಲಿಸಲು ಯತ್ನಿಸಿದರು. ಆದರೂ, ಕೂಬಹುತೇಕ ಸದಸ್ಯರು ಸಭೆಯಿಂದ ಹೊರ ನಡೆದರು. ಬಳಿಕ ಕೆಲವರನ್ನು ಸಮಾಧಾನಪಡಿಸಿ ವಾಪಸ್ ಕರೆ ತರಲಾಯಿತು.

* * 

ಬಜೆಟ್ ಮಂಡನೆಗೂ ಮುಂಚೆ ನಡೆದಿರುವುದು ವೈಯಕ್ತಿಕ ಜಗಳ. ಅದಕ್ಕಾಗಿ ನಗರದ ಅಭಿವೃದ್ಧಿಗೆ ತಡೆ ಮಾಡುವುದು ಸರಿಯಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ

ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ 

 

ಪ್ರತಿಕ್ರಿಯಿಸಿ (+)