ಶುಕ್ರವಾರ, ಆಗಸ್ಟ್ 19, 2022
25 °C
ಮರಳು ಅಕ್ರಮ ಸಾಗಣೆ ವಿರುದ್ಧ ಕ್ರಮ

ನೆಪ ಮಾಡಿಕೊಂಡು ಮರಳು ಸಾಗಿಸಿದರೆ ಶಿಕ್ಷೆ ಖಚಿತ: ಜಿಲ್ಲಾಧಿಕಾರಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಾರ್ವಜನಿಕರಿಗೆ ಅಗತ್ಯ ಕಾಮಗಾರಿಗಳಿಗೆ ಮರಳು ದೊರೆಯುತ್ತಿಲ್ಲ ಎಂದು ನೆಪ ಮಾಡಿಕೊಂಡು ಅಕ್ರಮವಾಗಿ ಮರಳು ತೆಗೆದು ಸಾಗಿಸುವುದನ್ನು ಜಿಲ್ಲಾಡಳಿತ ಸಹಿಸುವುದಿಲ್ಲ. ಅಂತಹ ಪ್ರಕರಣಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿ ಅವರು ಮಾತನಾಡಿದದರು.

‘ಸೆ. 21ರಿಂದ ಸಾಂಪ್ರದಾಯಿಕವಾಗಿ ಸಾದಾ ಮರಳನ್ನು ತೆಗೆಯಲು ಷರತ್ತುಬದ್ಧ ಅನುಮತಿ ನೀಡಲಾಗುತ್ತಿದೆ. ಷರತ್ತುಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರಿಗೆ ಯೋಗ್ಯದರದಲ್ಲಿ ಮರಳು ಲಭಿಸುವಂತೆ ನೋಡಿಕೊಳ್ಳಬೇಕು. ಹಾಗಾಗಿ ಅಗತ್ಯವಿರುವಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಮರಳು ಬ್ಯಾಂಕ್ ಸ್ಥಾಪಿಸಬೇಕು’ ಎಂದು ಸೂಚಿಸಿದರು.

‘ಸಮಿತಿಯೇ ಹೊಣೆ’: ‘ಯಾವುದೇ ತಾಲ್ಲೂಕಿನಲ್ಲಿ ಮರಳನ್ನು ಅಕ್ರಮವಾಗಿ ತೆಗೆಯುವುದು ಮತ್ತು ಸಾಗಣೆ ಕಂಡು ಬಂದರೆ ತಾಲ್ಲೂಕು ಮರಳು ಉಸ್ತುವಾರಿ ಸಮಿತಿಯನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗುತ್ತದೆ. ಆ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವು ಕ್ರಮ ಜರುಗಿಸಲಾಗುವುದು’ ಎಂದು ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಜೊಯಿಡಾ ಮತ್ತು ದಾಂಡೇಲಿ ಚೆಕ್‌ಪೋಸ್ಟ್‌ಗಳನ್ನು ಬಲ ಪಡಿಸಲಾದ್ದು, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಹೊನ್ನಾವರ ಮತ್ತು ಕುಮಟಾ ತಾಲ್ಲೂಕುಗಳಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪದೇಪದೇ ದೂರುಗಳು ಬರುತ್ತಿವೆ. ಹಾಗಾಗಿ ಅಗತ್ಯವಿರುವ  ಸ್ಥಳಗಳಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಕೂಡಾ ಸ್ಥಾಪಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಈ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಪೊಲೀಸ್, ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅಲ್ಲದೇ ಪ್ರತಿ ದಿನದ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಆಯಾ ತಾಲ್ಲೂಕಿಗೆ ಸಂಬಂಧಿಸಿದ ಡಿ.ವೈ.ಎಸ್.ಪಿ ಹಾಗೂ ಉಪ ವಿಭಾಗಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅದರ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ನೀಡಲು ತಿಳಿಸಲಾಗಿದೆ’ ಎಂದು ಹೇಳಿದರು.

ಪ್ರತಿ ತಾಲ್ಲೂಕಿನಲ್ಲಿ ಸಂಚಾರಿ ವಿಚಕ್ಷಣಾ ದಳವನ್ನೂ ನಿಯೋಜಿಸಲಾಗಿದೆ. ಮರಳು ಅಕ್ರಮ ಸಾಗಾಣಿಕೆಯಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಗಣಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ, ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.