ಶನಿವಾರ, ಡಿಸೆಂಬರ್ 5, 2020
25 °C
ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಎಚ್ಚರಿಕೆ

ಅಂಕೋಲಾ–ಹುಬ್ಬಳ್ಳಿ ರೈಲ್ವೆ ಯೋಜನೆ: ಪರಿಸರವಾದಿಗಳ ವಿರುದ್ಧ ಆನಂದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಂಕೋಲಾ– ಹುಬ್ಬಳ್ಳಿ ರೈಲು ಮಾರ್ಗ ಯೋಜನೆಗೆ ವಿರೋಧ ಮಾಡುವ ಪರಿಸರವಾದಿಗಳ ವಿರುದ್ಧ ಜೆ.ಡಿ.ಎಸ್ ಮುಖಂಡ ಆನಂದ ಅಸ್ನೋಟಿಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರಿಗೆ ವಿಡಿಯೊ ಸಂದೇಶ ಕಳುಹಿಸಿರುವ ಅವರು, ‘ಎಲ್ಲ ಪರಿಸರವಾದಿಗಳ ಹಿನ್ನೆಲೆ ನನಗೆ ಗೊತ್ತಿದೆ. ನ್ಯಾಯಬದ್ಧವಾಗಿ ಒಂದು ಎಕರೆ ಜಮೀನು ತಮ್ಮದಿದ್ದರೆ, ಅನಧಿಕೃತವಾಗಿ ಹತ್ತಾರು ಎಕರೆಗಳನ್ನು ಕಬಳಿಸಿದ್ದೀರಿ. ಈ ಯೋಜನೆ ವಿರುದ್ಧ ಒಂದುವೇಳೆ ನೀವು ನ್ಯಾಯಾಲಯದ ಮೆಟ್ಟಿಲೇರಿದರೆ, ನಾನು ವೈಯಕ್ತಿಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘13 ಸಾವಿರ ಸಹಿ ತೆಗೆದುಕೊಂಡು ನೀವು ಹೋರಾಟ ಮಾಡಲು ಮುಂದಾಗಿದ್ದೀರಿ. ನಾನು 13 ಲಕ್ಷ ಯುವಕರ ಸಹಿ ತೆಗೆದುಕೊಂಡು ಹೋರಾಡಲು ಸಿದ್ಧನಿದ್ದೇನೆ. ಕರಾವಳಿ ಭಾಗದ ಯುವಕರೊಂದಿಗೆ ಬೀದಿಗಿಳಿದು ಹೋರಾಡುತ್ತೇವೆ. ದಯವಿಟ್ಟು ಇದಕ್ಕೆ ಅವಕಾಶ ಕೊಡಬೇಡಿ. ನಾವು ರೈಲ್ವೆ ಯೋಜನೆಯನ್ನು ತಂದೇ ತರ್ತೇವೆ’ ಎಂದು ಸವಾಲು ಹಾಕಿದ್ದಾರೆ.

‘ಶೇ 85ರಷ್ಟು ಅರಣ್ಯ ಇರುವ ಇಷ್ಟು ದೊಡ್ಡ ಜಿಲ್ಲೆಯಲ್ಲಿ ಒಂದು ರೈಲ್ವೆ ಯೋಜನೆ ಬಂದ್ರೆ ನಿಮ್ಮ ಜಮೀನು, ನೀರಾವರಿ ಹೋಗುತ್ತಾ? ಅರಣ್ಯ ಪ್ರದೇಶ ಹೋಗುತ್ತೆ.. ಹೋಗ್ಲಿ.. ಸ್ವಲ್ಪನಾದರೂ ನಾವು ತ್ಯಾಗ ಮಾಡೋಣ. ಪರಿಸರವಾರದಿಗಳೇ ಜಿಲ್ಲೆಯ ಅಭಿವೃದ್ಧಿ ಸಂಬಂಧ ದಯವಿಟ್ಟು ಅವಲೋಕನ ಮಾಡಿ’ ಎಂದು ಮನವಿ ಮಾಡಿದ್ದಾರೆ.

‘ಅರಣ್ಯ ಇಲಾಖೆಯವರು ಸರ್ವೆ ಮಾಡಿ, ಪರಿಸರವಾದಿಗಳು ಅನಧಿಕೃತವಾಗಿ ಕಬಳಿಸಿದ ಜಮೀನನ್ನು ಹಿಂದಕ್ಕೆ ಪಡೆದುಕೊಳ್ಳಲಿ. ಎಷ್ಟು ಅರಣ್ಯ ಪ್ರದೇಶವನ್ನು ನೀವು ನಾಶ ಮಾಡಿದ್ದೀರಿ... ಎಲ್ಲ ದಾಖಲೆಗಳನ್ನೂ ನ್ಯಾಯಾಲಯದ ಮುಂದೆ ತರಬೇಕಾಗುತ್ತದೆ. ದಯವಿಟ್ಟು ಈ ಯೋಜನೆಗೆ ಕೈ ಹಾಕಲು ಹೋಗಬೇಡಿ. ಏನು ಪರಿಸರ ಹಾನಿಯಾಗ್ತದೆ’ ಎಂದು ಪ್ರಶ್ನಿಸಿದ್ದಾರೆ.

‘ಎಷ್ಟೂಂತ ನಾವು ನ್ಯಾಯ ಕೇಳಲಿ? ನೌಕಾನೆಲೆ ಮತ್ತು ಅಣುವಿದ್ಯುತ್ ಸ್ಥಾವರಕ್ಕೆ ಜಮೀನು ತ್ಯಾಗ ಮಾಡಿದ್ದರಿಂದ ನಮಗೇನು ಲಾಭ ಆಗಿದೆ? ರೈಲ್ವೆ ಯೋಜನೆ ಬರುವಾಗ ಪರಿಸರವಾದಿಗಳು ಈ ರೀತಿ ನಾಟಕ ಮಾಡ್ತೀರಿ. ನಿಮಗೇನಾದರೂ ಬುದ್ಧಿ ಇದ್ಯಾ? ಕರಾವಳಿಯವರಿಗೆ ಎಲ್ಲಿದೆ ಅಭಿವೃದ್ಧಿ? ಈ ಯೋಜನೆಯ ವಿಚಾರದಲ್ಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ಸ್ಥಳೀಯ ಶಾಸಕರಿಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು