ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಗುಡ್ಡಳ್ಳಿಯ ಜನರಿಗೆ ಸಿಗದ ‘ಬೆಳಕು’

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಹಿಂದುಳಿದ ಪ್ರದೇಶಕ್ಕೆ ತೊಡಕಾದ ನಿಯಮಾವಳಿ
Last Updated 21 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ನಗರಸಭೆಯ ವ್ಯಾಪ್ತಿಯಲ್ಲಿದ್ದರೂ ಕುಗ್ರಾಮದಂತಿರುವ ಗುಡ್ಡಳ್ಳಿಯಲ್ಲಿ, ಸರ್ಕಾರದ ‘ಬೆಳಕು’ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯುವ ನಿರೀಕ್ಷೆ ಹೊಂದಿದ್ದ ಬಡವರಿಗೆ ನಿರಾಸೆಯಾಗಿದೆ. ಕೇವಲ ಗ್ರಾಮೀಣ ಭಾಗದವರಿಗೆಂದು ಯೋಜನೆ ರೂಪಿಸಿರುವ ಕಾರಣ ಗುಡ್ಡಳ್ಳಿಯ ಹಲವರು ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಾಗುತ್ತಿಲ್ಲ.

ನಗರಸಭೆಯ 31ನೇ ವಾರ್ಡ್ ಆಗಿರುವ ಗುಡ್ಡಳ್ಳಿಯು ಕಾಡಿನ ನಡುವೆ, ಬೆಟ್ಟದ ಮೇಲಿದೆ. ನಗರ ಪ್ರದೇಶದ ಯಾವುದೇ ಗಂಧಗಾಳಿಯೂ ಇಲ್ಲದ ಈ ಊರು, ಹೆಸರಿಗಷ್ಟೇ ‘ನಗರ’ವಾಗಿದೆ. ಇಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿವೆ. ಅಂಥ ಎಂಟು ಕುಟುಂಬಗಳು ‘ಬೆಳಕು’ ಯೋಜನೆಯಡಿ ವಿದ್ಯುತ್ ಸಂಪರ್ಕ ಬಯಸಿ ಹೆಸ್ಕಾಂಗೆ ಅರ್ಜಿ ಸಲ್ಲಿಸಿದ್ದವು. ಆದರೆ, ಯೋಜನೆಯ ನಿಯಮದಲ್ಲಿ ‘ನಗರ ವ್ಯಾಪ್ತಿ’ಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲು ಅವಕಾಶವಿಲ್ಲ. ಹಾಗಾಗಿ, ಆ ಕುಟುಂಬಗಳ ಅರ್ಜಿಗಳು ಸ್ವೀಕಾರವಾಗಲಿಲ್ಲ.

ಎಂಟು ಅರ್ಜಿಗಳಿದ್ದವು: ‘ಗುಡ್ಡಳ್ಳಿ ವಾರ್ಡ್‌ನಿಂದ ಎಂಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಯೋಜನೆಯು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಮಾತ್ರ ಎಂಬ ಮಾಹಿತಿ ಅವರಿಗೆ ಇರಲಿಲ್ಲ. ಅವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು ಮತ್ತು ಕೆಲವರು ಸರ್ಕಾರದ ಪಿಂಚಣಿ ಸಹಾಯಧನವನ್ನು ಆಧರಿಸಿ ಜೀವನ ನಡೆಸುತ್ತಿದ್ದಾರೆ. ಕತ್ತಲೆಯಲ್ಲಿದ್ದು ಬೇಸತ್ತು, ವಿದ್ಯುತ್ ಸಂಪರ್ಕದ ಭಾರಿ ನಿರೀಕ್ಷೆಯಲ್ಲಿ ದಾಖಲೆಗಳನ್ನು ಒಟ್ಟುಗೂಡಿಸಿ ಅರ್ಜಿ ಸಲ್ಲಿಸಿದ್ದರು. ಆದರೆ, ಇಂಥ ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ನಗರಸಭೆಯ ವಾರ್ಡ್ ಸದಸ್ಯೆ ರುಕ್ಮಿಣಿ ಗೌಡ ಬೇಸರಿದರು.

ಮೊದಲು ಸಂಪರ್ಕವಿತ್ತು: ‘ಬೆಳಕು ಯೋಜನೆಯಡಿ ಅರ್ಜಿ ಸಲ್ಲಿಸಿದ ಬಡವರಲ್ಲಿ ಇಬ್ಬರ ಮನೆಗಳಿಗೆ ಈ ಹಿಂದೆ ವಿದ್ಯುತ್ ಸಂಪರ್ಕವಿತ್ತು. ಆದರೆ, ಅವರಿಗೆ ವಿದ್ಯುತ್ ಬಳಕೆಯ ಶುಲ್ಕ ಪಾವತಿಸಲು ಸಾಧ್ಯವಾಗದೇ ಸಂಪರ್ಕ ಕಡಿತಗೊಂಡಿತ್ತು. ಅವರು ಹೊಸ ಯೋಜನೆಯಲ್ಲಾದರೂ ಫಲಾನುಭವಿಗಳಾಗುವ ನಿರೀಕ್ಷೆಯಲ್ಲಿದ್ದರು’ ಎಂದು ವಿವರಿಸಿದರು.

‘ಈ ಹಿಂದೆ ನಗರ ಭಾಗದ ಬಡವರ ಮನೆಗಳಿಗೂ ಉಚಿತ ವಿದ್ಯುತ್ ಸಂಪರ್ಕ ನೀಡುವಂಥ ಯೋಜನೆಯಿತ್ತು. ಅದನ್ನು ಮುಂದುವರಿಸಬೇಕು. ಸಮಸ್ಯೆಯ ಕುರಿತು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಅವರ ಗಮನಕ್ಕೆ ತಂದಿದ್ದೇನೆ. ಶಾಸಕಿ ರೂಪಾಲಿ ನಾಯ್ಕ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಪರಿಶೀಲನೆಯ ಭರವಸೆ

‘ಬೆಳಕು ಯೋಜನೆಯ ನಿಯಮದ ಪ್ರಕಾರ, ನಗರ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿಲ್ಲ. ಗುಡ್ಡಳ್ಳಿಯಿಂದ ಬೆಳಕು ಯೋಜನೆಯಡಿ ಸಂಪರ್ಕಕ್ಕೆ ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ಪರಿಶೀಲಿಸಲಾಗುವುದು. ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಗಮನ ಹರಿಸುತ್ತೇವೆ. ಮಾನವೀಯ ನೆಲೆಯಲ್ಲಿ ಅರ್ಜಿಗಳನ್ನು ಪರಿಗಣಿಸಲು ಅವಕಾಶವಿದೆಯೇ ಎಂದು ನೋಡುತ್ತೇವೆ’ ಎಂದು ಹೆಸ್ಕಾಂ ಕಾರವಾರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರೋಶನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

----

ನಗರಸಭೆ ವ್ಯಾಪ್ತಿಯಲ್ಲಿದ್ದರೂ ಹಿಂದುಳಿದಿರುವ ಗುಡ್ಡಳ್ಳಿಯಂಥ ಪ್ರದೇಶಗಳಿಗೆ ‘ಬೆಳಕು’ ಯೋಜನೆಯ ಫಲ ಸಿಗುವಂತೆ ಸರ್ಕಾರವು ನಿಯಮಾವಳಿ ತಿದ್ದುಪಡಿ ಮಾಡಬೇಕು.

- ರುಕ್ಮಿಣಿ ಗೌಡ, ನಗರಸಭೆ ಸದಸ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT