ಸೋಮವಾರ, ಜನವರಿ 20, 2020
21 °C
ಸಂಯುಕ್ತ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಸಭೆಯಲ್ಲಿ ಒತ್ತಾಯ

ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಆಶಾ ಕಾರ್ಯಕರ್ತೆಯರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಶೀಘ್ರ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಸಲಹೆಗಾರ ಗಂಗಾಧರ ಬಡಿಗೇರ ಹೇಳಿದರು.

ಎಐಯುಟಿಯುಸಿಗೆ ಸೇರಿದ ಸಂಯುಕ್ತ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಭಾನುವಾರ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಆರ್‌ಸಿಎಚ್ ಪೋರ್ಟಲ್ ಕಾರಣಕ್ಕೆ ಕಳೆದ 16 ತಿಂಗಳುಗಳಿಂದ ಆಶಾ ಕಾರ್ಯಕರ್ತೆಯರು ಮಾಡಿದಷ್ಟು ಕೆಲಸಕ್ಕೆ ವೇತನ ಬಿಡುಗಡೆಯಾಗಿಲ್ಲ. ಆರೋಗ್ಯ ಸಚಿವರು ನೀಡಿದ ಭರವಸೆ ಹಾಗೆಯೇ ಉಳಿದಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಪ್ರೋತ್ಸಾಹಧನ ಒಟ್ಟಿಗೆ ಸೇರಿಸಿ, ಕನಿಷ್ಠ ಮಾಸಿಕ ಗೌರವ ಧನ ₹ 12ಸಾವಿರ ನೀಡಬೇಕು ಎಂದರು.

ಈಗಾಗಲೇ ನೀಡಿದ ಭರವಸೆಯಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಆಶಾ ಕಾರ್ಯಕರ್ತೆಯರ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ, ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಪ್ರತಿ ಸರ್ವೆಗೆ ದಿನ ಭತ್ಯೆ ₹ 300 ನಿಗದಿಗೊಳಿಸಿ, ಆಯಾ ದಿನವೇ ನೀಡಬೇಕು. ಆಶಾ ಸುಗಮಗಾರರಿಗೆ ₹ 12ಸಾವಿರ ಮಾಸಿಕ ವೇತನ, ಪ್ರಯಾಣ ಭತ್ಯೆ ನಿಗದಿ ಮಾಡಬೇಕು. ದುಡಿತಕ್ಕೆ ತಕ್ಕ ಪ್ರತಿಫಲ ಪಡೆಯಲು ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಾ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣಾ, ಕವಿತಾ, ಸುವರ್ಣಾ, ಸುಷ್ಮಾ, ಕಸ್ತೂರಿ, ಜಯಾ, ಜಾನಕಿ ಇದ್ದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು