ಭಾರತ ಬಂದ್: ಕಾರವಾರ ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ

7
ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಣೆಗೆ ಜಿಲ್ಲಾಧಿಕಾರಿ ನಕುಲ್ ಸೂಚನೆ

ಭಾರತ ಬಂದ್: ಕಾರವಾರ ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ

Published:
Updated:

ಕಾರವಾರ: ತೈಲ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಭಾರತ ಬಂದ್‌ಗೆ ಕರೆ ನೀಡಿರುವ ಕಾರಣ, ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

‘ಬಂದ್ ಕರೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಜತೆಗೇ ಸುರಕ್ಷತೆಯ ದೃಷ್ಟಿಯಿಂದ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ’ ಎಂದು ಹೇಳಿದ್ದಾರೆ.

ಬಂದ್ ಕರೆಗೆ ಕೆಎಸ್ಆರ್‌ಟಿಸಿ ನೌಕರರು ಮತ್ತು ಸಿಬ್ಬಂದಿ ಯೂನಿಯನ್, ಕಿರಾಣಿ ವ್ಯಾಪಾಸ್ಥರು, ಹೋಟೆಲ್ ಅಸೋಸಿಯೇಷನ್‌ಗಳು, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಸಿಪಿಐ (ಎಂ), ವಿವಿಧ ಪೆಟ್ರೋಲ್ ಬಂಕ್‌ಗಳ ಮಾಲೀಕರು, ಕೆಲವೆಡೆ ಆಟೊರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘ ಬೆಂಬಲ ಘೋಷಿಸಿವೆ. ಸೋಮವಾರ ಸಂಜೆಯವರೆಗೂ ಬಂದ್‌ನ ಬಿಸಿ ಸಾರ್ವಜನಿಕರಿಗೆ ತಟ್ಟುವ ಸಾಧ್ಯತೆ ಇದೆ.

ಗೈರಾದರೆ ಸಂಬಳ ಕಡಿತ!: ಬಂದ್‌ಗೆ ಕೆಎಸ್‌ಆರ್‌ಟಿಸಿ ನೌಕರರು ಮತ್ತು ಸಿಬ್ಬಂದಿ ಯೂನಿಯನ್ ಕೂಡ ಬೆಂಬಲ ಘೋಷಿಸಿದ್ದು, ಬಸ್‌ಗಳನ್ನು ಸಂಜೆಯವರೆಗೆ ರಸ್ತೆಗೆ ಇಳಿಸುವುದಿಲ್ಲ ಎಂದು ಯೂನಿಯನ್‌ನ ಅಧ್ಯಕ್ಷರು ತಿಳಿಸಿದ್ದಾರೆ.

ಆದರೆ, ‘ಚಾಲಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು. ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಂಬಳ ಕಡಿತ ಮಾಡಲಾಗುವುದು’ ಎಂದು ಕಾರವಾರ ಬಸ್‌ ಡಿಪೊ ವ್ಯವಸ್ಥಾಪಕ ತುಷಾರ್‌ ತಿಳಿಸಿದ್ದಾರೆ.

ಎಲ್ಲರೂ ಬೆಂಬಲಿಸುವ ವಿಶ್ವಾಸ: ‘ಈಗಾಗಲೇ ಎಲ್ಲ ಸಂಘಟನೆಗಳಿಗೆ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಜಿಲ್ಲೆಯ ಜನತೆಯೂ ಈ ಕರೆಗೆ ಬೆಂಬಲ ನೀಡುವ ವಿಶ್ವಾಸ ಇದೆ. ಸ್ವಯಂಪ್ರೇರಿತವಾಗಿ ಎಲ್ಲರೂ ಅಂಗಡಿಗಳನ್ನು ಬಂದ್ ಮಾಡಲಿದ್ದಾರೆ. ಆದರೆ, ಯಾರಿಗೂ ಒತ್ತಾಯ ಮಾಡುತ್ತಿಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದರು.

‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬೇಳೆ–ಕಾಳು ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರು, ವ್ಯಾಪಾರಸ್ಥರು, ವಾಹನಗಳ ಚಾಲಕ, ಮಾಲೀಕರು, ಸಂಘ–ಸಂಸ್ಥೆಗಳು ತತ್ತರಿಸಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಬಂದ್‌ ಅನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದರು.

‘ತಲೆ ಕೆಡಿಸ್ಕೊಂಡಿಲ್ಲ’: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ‘ಕಾಂಗ್ರೆಸ್‌ ಕರೆ ನೀಡಿರುವ ಬಂದ್ ಸಂಪೂರ್ಣ ರಾಜಕೀಯ ಪ್ರೇರಿತ. ಹೀಗಾಗಿ ಈ ಬಗ್ಗೆ ಬಿಜೆಪಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿ ಬೆಂಬಲಿಗರು ಎಂದಿನಂತೆ ಸೋಮವಾರ ತಮ್ಮ ಕೆಲಸ– ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ತಾಸು ಹೆಚ್ಚು ಕೆಲಸ ಮಾಡಿದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್‌ನವರು ಅವರ ಪಾಡಿಗೆ ಬಂದ್ ಮಾಡಿಕೊಳ್ಳಲಿ. ಅವರಿಗೆ ವಿರೋಧ ಮಾಡಲೂ ನಾವು ಹೋಗುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂತರರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯನ್ನಾಧರಿಸಿ ದೇಶದಲ್ಲಿ ತೈಲಗಳ ಬೆಲೆಯಲ್ಲಿ ಏರಿಳಿತ ಆಗುತ್ತದೆ. ಅಷ್ಟಿದ್ದರೆ, ಪೆಟ್ರೋಲ್‌ಗಳ ಮೇಲಿನ ರಾಜ್ಯದ ತೆರಿಗೆಯನ್ನು ಇಳಿಸುವಂತೆ ಕಾಂಗ್ರೆಸ್‌ನವರು ಒತ್ತಾಯಿಸಲಿ. ದರ ಇಳಿಕೆಯ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವೂ ಗಮನ ಹರಿಸುತ್ತಿದೆ’ ಎಂದರು.

ಕುತಂತ್ರ: ‘ಹಿಂದೂಗಳ ಹಬ್ಬವಾದ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬಂದ್‌ಗೆ ಕರೆ ನೀಡಿರುವುದರ ಹಿಂದೆ ಕುತಂತ್ರ ಅಡಗಿದೆ. ಹಿಂದೂಗಳಿಗೆ ತೊಂದರೆ ಉಂಟು ಮಾಡಲೆಂದೆ ಈ ರೀತಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಬಂದ್‌ ಕರೆಗೆ ಬೆಂಬಲ ನೀಡಬೇಡಿ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬೆಳಿಗ್ಗೆಯಿಂದ ಸಂಜೆ 5ರ ವರೆಗೆ ಬಂದ್‌ಗೆ ಬೆಂಬಲ ನೀಡಿ ಅಂಗಡಿಗಳ ಬಾಗಿಲು ತೆರೆಯುವುದಿಲ್ಲ. ಗಣೇಶ ಚತುರ್ಥಿ ಸಮೀಪಿಸುತ್ತಿರುವುದರಿಂದ ಬಂದ್‌ನಿಂದಾಗಿ ಜನರಿಗೂ ಸ್ವಲ್ಪ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಸಂಜೆಯ ಬಳಿಕ ಅಂಗಡಿಗಳನ್ನು ತೆರೆಯುತ್ತೇವೆ’ ಎಂದು ಕಿರಾಣಿ ಅಂಗಡಿಗಳ ಅಸೋಸಿಯೇಷನ್ ಹಾಗೂ ಹೋಟೆಲ್ ಮಾಲೀಕರ ಅಸೋಸಿಯೇಷನ್‌ನವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿ ತಾಲ್ಲೂಕಿಗೂ ಡಿಎಆರ್: ‘ಒತ್ತಾಯಪೂರ್ವಕವಾಗಿ ಬಂದ್ ಆಚರಣೆಗೆ ಯಾವುದೇ ಅವಕಾಶ ಇರುವುದಿಲ್ಲ. ಮುಂಜಾಗ್ರತೆಯಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ತುಕಡಿಯನ್ನು ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಕಳುಹಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !