ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ 63: ಜೀವ ಹಾನಿಯಾದರೆ ನ್ಯಾಯಾಲಯಕ್ಕೆ ದೂರು

Last Updated 4 ಜನವರಿ 2022, 12:44 IST
ಅಕ್ಷರ ಗಾತ್ರ

ಕಾರವಾರ: ‘ಸಂಪೂರ್ಣವಾಗಿ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 63ನ್ನು ತಕ್ಷಣ ದುರಸ್ತಿ ಮಾಡಬೇಕು. ಈ ರಸ್ತೆಯಲ್ಲಿ ಇನ್ನುಮುಂದೆ ಅಪಘಾತಗಳಾಗಿ ಪ್ರಾಣ ಅಥವಾ ವಾಹನಗಳಿಗೆ ಹಾನಿಯಾದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಎಚ್ಚರಿಕೆ ನೀಡಿದ್ದಾರೆ.

‘ರಸ್ತೆಗಳ ದುರಸ್ತಿ ಪ್ರಾರಂಭವಾಗದೇ ಇದ್ದರೆ ಜಿಲ್ಲೆಯಾದ್ಯಂತ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಚೇರಿ ಎದುರು ಅನಿವಾರ್ಯವಾಗಿ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

‘ಅಂಕೋಲಾ– ಹುಬ್ಬಳ್ಳಿ ನಡುವಿನ ಈ ರಸ್ತೆಯು ಜಿಲ್ಲೆಯ ಅತ್ಯಂತ ಪ್ರಮುಖ ಹೆದ್ದಾರಿಯಾಗಿದೆ. ಅದು ಮಳೆಗಾಲದ ನಂತರ ಸಂಚಾರಕ್ಕೆ ಯೋಗ್ಯವಾಗಿ ಉಳಿದಿಲ್ಲ. ಯಲ್ಲಾಪುರದಿಂದ ಅರಬೈಲ್ ಘಟ್ಟದವರೆಗೆ ವಾಹನಗಳ ಸಂಚಾರಕ್ಕೆ ಅಪಾಯ ಉಂಟಾಗುವಂತಿದೆ. ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯು ದುಃಸ್ಥಿತಿಯಲ್ಲಿರಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ’‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಧಾರಣಾ ಸಾಮರ್ಥ್ಯವನ್ನು ಮೀರಿ ಬೃಹತ್ ವಾಹನಗಳ ಸಂಚಾರವೂ ಹೆದ್ದಾರಿಯು ಹದಗೆಡಲು ಕಾರಣವಾಗಿದೆ. ಇದನ್ನು ನಿಯಂತ್ರಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಯೇ ಹೀಗಿರುವಾಗ ಜಿಲ್ಲೆಯ ಅನೇಕ ಗ್ರಾಮೀಣ ರಸ್ತೆಗಳ ಸ್ಥಿತಿಯಂತೂ ಇನ್ನೂ ಅಯೋಮಯವಾಗಿದೆ. ಹೀಗಾಗಲು ಜಿಲ್ಲೆಗೆ ಅನುದಾನದ ಕೊರತೆಯೇ ಅಥವಾ ಇಚ್ಛಾಶಕ್ತಿಯ ಕೊರತೆ ಕಾರಣವೇ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಜಿಲ್ಲೆಗೆ ಮಾರಕವಾದ ಕಿಂಡಿ ಅಣೆಕಟ್ಟೆ, ಜಲವಿದ್ಯುತ್ ಯೋಜನೆಯಂಥ ಯೋಜನೆಗಳನ್ನು ತರಲು ಕೆಲವರು ಹಾತೊರೆಯುತ್ತಿದ್ದಾರೆ. ಆದರೆ, ಜಿಲ್ಲೆಗೆ ಕೊಡಬೇಕಾಗಿರುವ ರಸ್ತೆ, ನೀರು, ವಿದ್ಯುತ್ ಬಗ್ಗೆ ಅಷ್ಟಾಗಿ ಅವರಿಗೆ ಆಸಕ್ತಿ ಇದ್ದ ಹಾಗಿಲ್ಲ. ಹಾಗಾಗಿ, ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT