ಶನಿವಾರ, ಜೂನ್ 19, 2021
27 °C
ಕಾರಾಗೃಹದಲ್ಲಿ ಸಂಗೀತ ಕಾರ್ಯಕ್ರಮ

‘ಬಂಧಿಗಳ ಜತೆ ಭಾವಯಾನ’ದಲ್ಲಿ ದೀಪ್ತಿ ಗಾಯನ ಸುಧೆ, ಹಾಡಿಗೆ ಧ್ವನಿಗೂಡಿಸಿದ ಬಂಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬಂಧಿಗಳ ಜತೆ ಭಾವಯಾನ’ ಕಾರ್ಯಕ್ರಮದಲ್ಲಿ ಗಾಯಕಿ ದೀಪ್ತಿ ಅರ್ಗೇಕರ ಸಂಗೀತ ಸುಧೆ ಹರಿಸಿದರು. ಕೆಲವು ಹಾಡಿಗೆ ಬಂಧಿಗಳೂ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ಜಿಲ್ಲಾ ಕಾರಾಗ್ರಹದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದೀಪ್ತಿ ಅರ್ಗೇಕರ, ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರೂ ಇರು’, ಬೇಂದ್ರೆಯವರ ‘ಘಮಘಮ ಘಮಾಡುಸ್ತಾವ ಮಲ್ಲಿಗಿ’, ಜಿ.ಎಸ್.ಶಿವರುದ್ರಪ್ಪ ಅವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’, ಶಿಶುನಾಳ ಶರೀಫರ ‘ಕೊಡಗನ ಕೋಳಿ ನುಂಗಿತ್ತಾ’ ಎಂಬ ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕೈದಿಯಾಗಿರುವ ಮಂಗಳೂರಿನ ಆನಂದ್ ಮೊಗೇರ ಅವರು ಸುಬ್ರಾಯ ಚೊಕ್ಕಾಡಿ ಅವರ ‘ಮನಿಸು ತರವೇ ಮುಗುದೆ’ ಗೀತೆಯನ್ನು ಹಾಡಿ ಎಲ್ಲರ ಮನಗೆದ್ದರು. ರಾಜೇಶ್ ಸೈಲ್ ತಬಲಾ ಹಾಗೂ ಉದಯ್ ಸೈಲ್ ಹಾರ್ಮೋನಿಯಂನಲ್ಲಿ ಗಾಯನಕ್ಕೆ ಸಾಥ್ ನೀಡಿದರು.

ಸಾಂತ್ವನದ ಪ್ರೀತಿ ಅವಶ್ಯ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ, ‘ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿರುವವರಿಗೆ ಸಾಂತ್ವನದ ಪ್ರೀತಿಯ ಅವಶ್ಯಕತೆ ಇದೆ. ನೊಂದ ಮನಸ್ಸುಗಳಿಗೆ ಕಾರಾಗೃಹದಲ್ಲೇ ಸಾಂತ್ವನ ನೀಡುವ ನಿಟ್ಟಿನಲ್ಲಿ ಕಸಾಪ ತಾಲ್ಲೂಕು ಘಟಕ ಆಯೋಜಿಸಿರುವ ಈ ಕಾರ್ಯ ಶ್ಲಾಘನೀಯ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ, ‘ಕೈದಿಗಳಿಗೂ ಜೀವನ ಇದೆ. ಕಾರಾಗೃಹದಿಂದ ಹೊರಗಿದ್ದವರೆಲ್ಲರೂ ಸುಖವಾಗಿಲ್ಲ. ಅವರಿಗೂ ಸಂವಿಧಾನ, ಧರ್ಮ, ಕೌಟುಂಬಿಕ ಹಾಗೂ ಸಾಂಸ್ಕೃತಿಕ ಬಂಧನ ಇದೆ. ಬಂದಿಗಳ ಬದುಕಿನಲ್ಲಿ ಹೊಸ ಭರವಸೆ ತುಂಬ ಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಸಂಗೀತಕ್ಕೆ ನೋವನ್ನು ಮರೆಸುವ ಶಕ್ತಿ ಇರುವುದರಿಂದ ಈ ‘ಭಾವಯಾನ’ ಯಶಸ್ವಿಯಾಗುತ್ತಿದೆ’ ಎಂದು ಹೇಳಿದರು.

ರಾಘವೇಂದ್ರ ಶಾನಭಾಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಈರಣ್ಣ ಬಿ., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಕಡತೋಕಾ ಮಂಜುನಾಥ, ಪತ್ರಕರ್ತ ದೀಪಕಕುಮಾರ್ ಶೇಣ್ವಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು