‘ಇ ಸ್ವತ್ತು’ ಭ್ರಷ್ಟಾಚಾರ ತನಿಖೆಗೆ ಆಗ್ರಹ

ಭಾನುವಾರ, ಮಾರ್ಚ್ 24, 2019
34 °C
ಕಾಯ್ದೆ ಜಾರಿಯಾದ ಹಿಂದಿನ ವರ್ಷಗಳಿಗೂ ಅನ್ವಯಿಸುತ್ತಿರುವ ರಾಜ್ಯ ಸರ್ಕಾರ: ನಾಗರಾಜ ನಾಯಕ

‘ಇ ಸ್ವತ್ತು’ ಭ್ರಷ್ಟಾಚಾರ ತನಿಖೆಗೆ ಆಗ್ರಹ

Published:
Updated:
Prajavani

ಕಾರವಾರ: ‘ರಾಜ್ಯದಲ್ಲಿ ಇ–ಸ್ವತ್ತಿನ ಮೂಲಕ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಗ್ರಾಮೀಣ ಜನರಿಗೆ ಖಾತೆ ಮಾಡಿಕೊಡಲು ಹಣ ಪೀಕಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ದುರಾಲೋಚನೆಯಿಂದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ’ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ದೂರಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಪ್ಪಿತ ಬಡಾವಣೆ ಮಾಡುವ ನಿಯಮ 2015ರಲ್ಲಿ ಜಾರಿಯಾಯಿತು. ಆದರೆ, ಅದಕ್ಕಿಂತ ಮೊದಲಿನ ಬಡಾವಣೆಗಳ ನಿವೇಶನಗಳಲ್ಲೂ ಮನೆ ಕಟ್ಟಿಕೊಳ್ಳಲು ಇ ಸ್ವತ್ತು ಖಾತೆ ಮಾಡಿಕೊಳ್ಳಬೇಕು ಎಂದು ಸರ್ಕಾರ ಒತ್ತಡ ಹೇರುತ್ತಿದೆ. ಬಡಾವಣೆ ನಿರ್ಮಿಸಿ ಕೃಷಿಯೇತರ ಎಂದು ಪರಿವರ್ತಿಸಿಕೊಂಡ ನಿವೇಶನಗಳಿಗೂ ಕೇಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಕಾಯ್ದೆ ಜಾರಿಯಾದ ದಿನದಿಂದ ಮುಂದಕ್ಕೆ ಅನ್ವಯವಾಗುತ್ತದೆ. ಆದರೆ, ಇ ಸ್ವತ್ತಿನ ವಿಚಾರದಲ್ಲಿ ಹಿಂದಿನ ವರ್ಷಗಳಿಗೂ ಅನ್ವಯಿಸುವಂತೆ ಮಾಡಿ ಭ್ರಷ್ಟಾಚಾರಕ್ಕೆ ಎಡೆ ಮಾಡಲಾಗಿದೆ ಎಂದು ಆರೋಪಿಸಿದರು.

‘2017ರ ಜ.9ರಂದು ಆದೇಶ ಹೊರಡಿಸಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮುಂದಿನ ಆದೇಶದವರೆಗೆ ಉತ್ತರ ಕನ್ನಡ, ಅವಿಭಜಿತ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಇ ಸ್ವತ್ತಿನಿಂದ ವಿನಾಯ್ತಿ ನೀಡಿದ್ದಾಗಿ ತಿಳಿಸಿದ್ದರು. ಹೊಸ ಆದೇಶ ಇನ್ನೂ ಬಂದಿಲ್ಲ. ಆದರೂ ಜನರನ್ನು ಯಾಕೆ ಸತಾಯಿಸಲಾಗುತ್ತಿದೆ? ಉಸ್ತುವಾರಿ ಸಚಿವ ದೇಶಪಾಂಡೆ ಅವರು ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು.

ಮುಂಡಗೋಡ ಪಟ್ಟಣ ಪಂಚಾಯ್ತಿ ವ್ಯಾಪ‌್ತಿಯಲ್ಲಿ 2005ರಲ್ಲಿ ಖರೀದಿಸಿದ್ದ ಸರ್ವೆ ನಂಬರ್ 34ರ ಹಿಸ್ಸಾ ‘ಬಿ’ಗೆ ಇ ಸ್ವತ್ತು ನೀಡುವಂತೆ ಕೆಲವರು ಅರ್ಜಿ ಹಾಕಿದ್ದರು. ಅವರ ಜಮೀನಿಗೆ ಎಲ್ಲ ದಾಖಲೆಗಳೂ ಇವೆ. ಆದರೆ, ಅವರಿಗೆ ಇ ಸ್ವತ್ತನ್ನು ನಿರಾಕರಿಸಲಾಯಿತು. ಅಧಿಕಾರಿಗಳು ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಪ್ಪಿತ ಬಡಾವಣೆ ಮಾಡಿಕೊಂಡಿಲ್ಲ ಎಂದು ಸಬೂಬು ಹೇಳಿದರು. ಆದರೆ, ಅದೇ ಪಟ್ಟಣದ ಹೊಸ ಓಣಿ ಎಂಬಲ್ಲಿ ಸರ್ವೆ ನಂಬರ್‌ 191ರ ಜಮೀನಿಗೆ ಯಾವುದೇ ದಾಖಲೆಗಳಿಲ್ಲದಿದ್ದರೂ ಇ ಸ್ವತ್ತು ಕೊಡಲಾಗಿದೆ ಎಂದು ಆಕ್ಷೇಪಿಸಿದರು.

‘ಆ ಜಮೀನನ್ನು ಮಾರಾಟ ಮಾಡಲಾಗಿತ್ತು. ಅದರ ದಾಖಲೆಗಳ ದೃಢೀಕೃತ ನಕಲಿನಲ್ಲಿ ಸ್ವತ್ತಿನ ವರ್ಗೀಕರಣ ಅಧಿಕೃತ ಎಂದು ಬರೆಯಲಾಗಿತ್ತು. ಅದನ್ನು ನಾವು ಪ್ರಶ್ನಿಸಿದ ಬಳಿಕ ಸ್ವತ್ತಿನ ವರ್ಗೀಕರಣ ಅನಧಿಕೃತ ಎಂದು ಪ್ರತಿಯನ್ನು ಕೊಟ್ಟರು. ಅನಧಿಕೃತ ಎಂದು ಪ್ರಮಾಣೀಕೃತ ಪತ್ರ ನೀಡಲಾಗುತ್ತದೆಯೇ? ಇದರ ಬಗ್ಗೆ ಲೋಕಾಯುಕ್ತಕ್ಕೆ ಬರೆಯಲು ಚಿಂತಿಸಿದ್ದೇವೆ’ ಎಂದು ಹೇಳಿದರು.

‘ದೇಶಪಾಂಡೆ ಕಮಿಷನ್ ಪಾಂಡೆ’: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾಡಿದ ಅಭಿವೃದ್ಧಿಯ ಲೆಕ್ಕವನ್ನು ನಾವು ಕೊಟ್ಟಿದ್ದೇವೆ. ಅವರು ನಿಮ್ಮಂತೆ ಭ್ರಷ್ಟಾಚಾರ ಮಾಡಿಲ್ಲ. ಜನರ ಹಣವನ್ನು ಲೂಟಿ ಹೊಡೆದಿಲ್ಲ. ನಿಮ್ಮಂತೆ ಕಮಿಷನ್ ಪಾಂಡೆ ಎಂಬ ಅನ್ವರ್ಥಕ ನಾಮ ಪಡೆದುಕೊಂಡಿಲ್ಲ’ ಎಂದು ಮುಖಂಡ ಸುನೀಲ್ ಹೆಗಡೆ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಟೀಕಿಸಿದರು.

‘ದೇಶಪಾಂಡೆ ಅವರಿಗೆ ದೇಶದ ಬಗ್ಗೆ ಗೌರವ ಇದೆಯಾ? ಪುಲ್ವಾಮಾದಲ್ಲಿ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಎರಡೇ ದಿನಕ್ಕೆ ದಾಂಡೇಲಿ ಉತ್ಸವ ನಡೆಯಿತು. ಅಲ್ಲಿ ಅವರು ಭಾಗವಹಿಸಿದರು. ಕಾಂಗ್ರೆಸ್‌ನವರು ಜಿಲ್ಲೆಯಲ್ಲಿ ಎಲ್ಲಿಯಾದರೂ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದ್ದಾರಾ’ ಎಂದು ಪ್ರಶ್ನಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮನೋಜ್ ಭಟ್, ಮುಖಂಡರಾದ ರವೀಂದ್ರ ಪವಾರ್, ನಾಗೇಶ್ ಕುರ್ಡೇಕರ್, ಸಂದೇಶ್, ರಾಜೇಶ್ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !