ಇಂಧನ ತೆರಿಗೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

6
ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಒತ್ತಾಯ

ಇಂಧನ ತೆರಿಗೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Published:
Updated:
Prajavani

ಶಿರಸಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಸೋಮವಾರ ಇಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಲಂಚದ ಆರೋಪದ ಹೊತ್ತಿರುವ ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

ಕೇಂದ್ರ ಸರ್ಕಾರದ ನಿಯಮಾವಳಿ ಆಧರಿಸಿ ಕಡಿತ ಕಂಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ ₹ 2 ತೆರಿಗೆಯನ್ನು ರಾಜ್ಯ ಸರ್ಕಾರ ವಿಧಿಸಿದೆ. ಇದರಿಂದ ಇಂಧನ ದರದಲ್ಲಿ ಮತ್ತೆ ಏರಿಕೆಯಾಗಿದೆ. ಈ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾದಾಗ ಪ್ರತಿಭಟನೆಗಿಳಿದಿದ್ದ ಸಮ್ಮಿಶ್ರ ಸರ್ಕಾರದ ಪ್ರಮುಖರು ಈಗ ಏಕೆ ಮೌನ ತಾಳಿದ್ದಾರೆ. ಸಮ್ಮಿಶ್ರ ಸರ್ಕಾರ ಜನವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ರಾಜ್ಯದ ಸಮ್ಮಿಶ್ರ ಸರ್ಕಾರವು ಜನರಿಗೆ ಶಾಪವಾಗಿ ಪರಿಣಮಿಸಿದೆ. ಯಾವುದೇ ಜನಪರ ಚಟುವಟಿಕೆಗಳು ನಡೆಯುತ್ತಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆಗಳು ಉಲ್ಬಣಿಸುತ್ತಿವೆ. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನಾಪತ್ತೆಯಾಗಿ ಮೂರು ವಾರ ಕಳೆದರೂ, ರಾಜ್ಯ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ. ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ರಾಜ್ಯ ಸರ್ಕಾರ ಇದನ್ನು ಏರಿಸುತ್ತದೆ. ರೈತರ ಆರ್‌ಟಿಸಿ ದರದಲ್ಲಿ ಏರಿಕೆಯಾಗಿದೆ. ಸಮಸ್ಯೆಗಳ ಪಟ್ಟಿ ಮಾಡುತ್ತ ಹೋದರೆ, ಯಾಕಾದರೂ ಈ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಅನ್ನಿಸುತ್ತದೆ’ ಎಂದು ಆರೋಪಿಸಿದರು.

ತಹಶೀಲ್ದಾರರಾದ ಅಮರೇಶ ಪಮ್ಮಾರ ಮತ್ತು ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪ್ರಮುಖರಾದ ನಂದನಸಾಗರ, ಆರ್.ಡಿ.ಹೆಗಡೆ, ವೀಣಾ ಶೆಟ್ಟಿ, ದೀಪಾ ಮಹಾಲಿಂಗಣ್ಣವರ್, ಶೋಭಾ ನಾಯ್ಕ, ಉಷಾ ನಾಯ್ಕ, ಗಣೇಶ ಸಣ್ಣಲಿಂಗಣ್ಣನವರ್, ಚಂದ್ರು ದೇವಾಡಿಗ, ರಮಾಕಾಂತ ಭಟ್ಟ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !