ನಗರಸಭೆ ಕಾರ್ಯವೈಖರಿ ವಿರುದ್ಧ ಬಿಜೆಪಿ ಪ್ರತಿಭಟನೆ

7
ನಳಗಳಿಗೆ ಮೀಟರ್ ಅಳವಡಿಸಲು ತರಾತುರಿ ಏಕೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು

ನಗರಸಭೆ ಕಾರ್ಯವೈಖರಿ ವಿರುದ್ಧ ಬಿಜೆಪಿ ಪ್ರತಿಭಟನೆ

Published:
Updated:
ಶಿರಸಿ ನಗರಸಭೆ ಕಾರ್ಯಾಲಯದ ಎದುರು ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು

ಶಿರಸಿ: ಕುಡಿಯುವ ನೀರು ಪೂರೈಕೆ ಮಾಡುವ ನಳಗಳಿಗೆ ಮೀಟರ್ ಅಳವಡಿಸುತ್ತಿರುವ ನಗರಸಭೆಯ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ, ಬಿಜೆಪಿ ನಗರ ಘಟಕದ ಸದಸ್ಯರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಗರಸಭೆ ಕಾರ್ಯಾಲಯದ ಎದುರು ಸೇರಿದ್ದ ಬಿಜೆಪಿಗರು, ನಗರಸಭೆ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ‘ನಗರದಲ್ಲಿ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. 2–3 ದಿನಗಳಿಗೆ ಒಮ್ಮೆ ನೀರು ಬರುತ್ತಿರುವುದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗಾಗಲೇ ಅನೇಕ ಬಾರಿ ನೀರಿನ ಕರ ಏರಿಕೆಯಾಗಿದೆ. ಈ ನಡುವೆ ಮೀಟರ್ ಅನ್ನು ಸಾರ್ವಜನಿಕರೇ ತಮ್ಮ ಹಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದರು.

ನಗರ ವ್ಯಾಪ್ತಿಯಲ್ಲಿ 24 ಗಂಟೆ ನೀರು ಸರಬರಾಜು ಮಾಡಬೇಕು ಎಂಬ ನಿಯಮವಿದ್ದರೂ ಪಾಲನೆ ಆಗುತ್ತಿಲ್ಲ. ನಳದಲ್ಲಿ ನೀರು ಬರದ ಇಂತಹ ಸನ್ನಿವೇಶದಲ್ಲಿ ಮೀಟರ್ ಅಳವಡಿಕೆಗೆ ತರಾತುರಿ ಏಕೆ ಎಂಬ ಅನುಮಾನ ಕಾಡುತ್ತಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಹಾಕಿಸಿದ್ದ ಮೀಟರ್‌ಗಳ ರೀಡಿಂಗ್ ಈವರೆಗೆ ನಡೆದಿಲ್ಲ. ಇದರಿಂದ ನಗರಸಭೆಗೆ ಅಂದಾಜು ₹ 15 ಲಕ್ಷ ಅಧಿಕ ನಷ್ಟವಾಗಿದೆ ಎಂದು ಬಿಜೆಪಿ ಪ್ರಮುಖ ನಂದನ ಸಾಗರ ಹೇಳಿದರು.

ನಳಕ್ಕೆ ಮೀಟರ್ ಜೋಡಿಸುವ ಕಾರ್ಯ ಪಾರದರ್ಶಕವಾಗಿ ನಡೆಯಬೇಕು. ಅತಿಕ್ರಮಣದಾರರಿಗೂ ನಳದ ಜೋಡಣೆ ನೀಡಬೇಕು. ನಗರ ವ್ಯಾಪ್ತಿಯ ಗಟಾರ ಸ್ವಚ್ಛಗೊಳಿಸಬೇಕು. ನಿತ್ಯವೂ ನೀರು ಸರಬರಾಜು ಮಾಡಬೇಕು. ಫಾರ್ಮ ನಂಬರ್ 3 ವಿತರಣೆಯನ್ನು ಸರಳೀಕರಣಗೊಳಿಸಬೇಕು. ಖಾತಾ ಬದಲಾವಣೆಗೆ ವೇಗ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ಸ್ವೀಕರಿಸಿದ ಪೌರಾಯುಕ್ತೆ ಅಶ್ವಿನಿ ಬಿ.ಎಂ ಮಾತನಾಡಿ, ‘ಮೀಟರ್ ಅಳವಡಿಕೆ ಸರ್ಕಾರದ ಸೂಚನೆಯಾಗಿದ್ದು, ನಗರಸಭೆ ಅದನ್ನು ಪಾಲಿಸುತ್ತಿದೆ. ಈ ಕುರಿತು ನಗರಸಭೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ ಕಾರಣ ಅನುಷ್ಠಾನವಾಗಿದೆ’ ಎಂದರು.

ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪಕ್ಷದ ಪ್ರಮುಖರಾದ ಶೋಭಾ ನಾಯ್ಕ, ವೀಣಾ ಭಟ್ಟ, ಉಷಾ ನಾಯ್ಕ, ರಮಾಕಾಂತ ಭಟ್ಟ, ರಿತೇಶ ಕೆ, ಸಿಕಂದರ್ ಶುಂಠಿ, ನಗರಸಭೆ ಸದಸ್ಯರಾದ ರವಿ ಚಂದಾವರ, ಶ್ರೀಧರ ಮೊಗೇರ, ಶ್ರೀಧರ ಕಂಚುಗಾರ, ರಮೇಶ ಆಚಾರಿ, ಅರುಣ ಕೋಡ್ಕಣಿ, ವೀಣಾ ಶೆಟ್ಟಿ, ಪವಿತ್ರಾ ಹೊಸೂರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !