ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹೆಬ್ಬಾರ್ ತಿರಸ್ಕರಿಸಿದ್ದ ನಿಗಮ ಪಾಟೀಲರಿಗೆ !

ಉಪಚುನಾವಣೆಯಲ್ಲಿ ಮೂಲ ಬಿಜೆಪಿಗರನ್ನು ಸಮಾಧಾನಪಡಿಸುವ ತಂತ್ರ
Last Updated 10 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಅವರ ಹಾದಿ ಸುಗಮಗೊಳಿಸಲು ಪ್ರಯತ್ನಿಸಿದೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಶಿವರಾಮ ಹೆಬ್ಬಾರ್, ಎರಡನೇ ಬಾರಿಗೆ ಶಾಸಕರಾಗಿರುವ ಕಾರಣಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್, ನಿಗಮ–ಮಂಡಳಿಗಳ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ನೀಡಿತ್ತು. ಇದನ್ನು ಸ್ವೀಕರಿಸಲು ನಿರಾಕರಿಸಿದ್ದ ಹೆಬ್ಬಾರ್, ಅಧ್ಯಕ್ಷ ಸ್ಥಾನ ಘೋಷಣೆಯಾದ ಅನೇಕ ದಿನಗಳ ನಂತರ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದು, ಅಧಿಕಾರ ವಹಿಸಿಕೊಂಡಿದ್ದರು. ‘ನಷ್ಟದಲ್ಲಿರುವ ನಿಗಮವನ್ನು ನನಗೆ ನೀಡಿದ್ದಾರೆ’ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಅವರು ಆಗ ನಿರಾಕರಿಸಿ, ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ಈಗ ವಿ.ಎಸ್.ಪಾಟೀಲರನ್ನು ನೇಮಿಸಲಾಗಿದೆ. ಆ ಮೂಲಕ ಬರಲಿರುವ ಉಪಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರನ್ನು ಸಮಾಧಾನಪಡಿಸಲು ಹೆಣೆದಿರುವ ತಂತ್ರ ಇದು ಎನ್ನುತ್ತಾರೆ ಮೂಲ ಬಿಜೆಪಿ ಕಾರ್ಯಕರ್ತರು.

‘ವಿ.ಎಸ್.ಪಾಟೀಲ ಕ್ಷೇತ್ರದಲ್ಲಿ ಪಕ್ಷ ಕಟ್ಟಿದವರು. ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತವರು. ಅವರಿಗೆ ಉಪಚುನಾವಣೆ ಟಿಕೆಟ್ ಸಿಗದಿದ್ದರೆ, ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಇದನ್ನು ಪಕ್ಷದ ವರಿಷ್ಠರ ಎದುರು ಸಹ ಹೇಳಿದ್ದೇವೆ. ನಿಗಮಕ್ಕೆ ನೇಮಕಮಾಡಿದಾಕ್ಷಣ ನಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ’ ಎನ್ನುತ್ತಾರೆ ಅವರ ಬೆಂಬಲಿಗರು.

‘ವಿ.ಎಸ್.ಪಾಟೀಲರಿಗೆ ನಿಗಮಕ್ಕೆ ನೇಮಕ ಮಾಡಿದ್ದು ಯಾಕೆಂಬುದನ್ನು ಬಿಜೆಪಿಯವರಿಗೇ ಕೇಳಬೇಕು. ನಾನು ಬಿಜೆಪಿಯಲ್ಲ. ಇಂದಿನವರೆಗೂ ಬಿಜೆಪಿ ಸೇರಿಲ್ಲ. ಸುಪ್ರೀಂ ಕೋರ್ಟ್ ತೀರ್ಮಾನ ಪ್ರಕಟಗೊಂಡ ಮೇಲೆ, ರಾಜೀನಾಮೆ ನೀಡಿರುವ ಎಲ್ಲ 17 ಶಾಸಕರು ಒಟ್ಟಾಗಿ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಶಿವರಾಮ ಹೆಬ್ಬಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪಕ್ಷ ನನಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ಹಿಂದಿನ ಚುನಾವಣೆಯಲ್ಲಿಯೂ ಪಕ್ಷ ನನಗೆ ಟಿಕೆಟ್ ನೀಡಿದೆ. ಆದರೆ, ನನ್ನ ಸಮಯ ಸರಿಯಿರಲಿಲ್ಲ ಅಷ್ಟೆ. ಸಮಾಧಾನಪಡಿಸುವ ಸಲುವಾಗಿ ಈ ಸ್ಥಾನ ನೀಡಿದ್ದಾರೆ ಎಂದು ನಾನು ಭಾವಿಸಿಲ್ಲ. ನಷ್ಟದಲ್ಲಿರುವ ಸಂಸ್ಥೆಯನ್ನು ಮೇಲೆತ್ತಬೇಕಾಗಿರುವುದು ಅಧಿಕಾರವಹಿಸಿಕೊಂಡವರ ಕರ್ತವ್ಯ. ನಾನು ಆ ಪ್ರಯತ್ನ ಮಾಡುತ್ತೇನೆ’ ಎಂದು ವಿ.ಎಸ್.ಪಾಟೀಲ ತಿಳಿಸಿದರು.

***

ಉಪಚುನಾವಣೆ ಸಂಬಂಧ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ. ಶಿವರಾಮ ಹೆಬ್ಬಾರ್‌ಗೆ ಟಿಕೆಟ್ ನೀಡಿದರೆ ತಕರಾರಿಲ್ಲ. ಅದಲ್ಲದಿದ್ದರೆ ನಾನು ಟಿಕೆಟ್ ಆಕಾಂಕ್ಷಿ

– ವಿ.ಎಸ್‌.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT