ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನವನ್ನೇ ತಪ್ಪಿಸದ ಶತಾಯುಷಿ ಮತದಾರ!

1952ರಿಂದ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲಿ ಹಕ್ಕು ಚಲಾಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ
Last Updated 16 ಏಪ್ರಿಲ್ 2019, 2:43 IST
ಅಕ್ಷರ ಗಾತ್ರ

ಕಾರವಾರ:ಅವರು ಶತಾಯುಷಿ ಮತದಾರ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಮೊದಲಾಗಿ 2018ರ ವಿಧಾನಸಭೆ ಚುನಾವಣೆಯವರೆಗೆಒಮ್ಮೆಯೂತಪ್ಪಿಸದೇ ಮತದಾನ ಮಾಡಿದ ಹೆಗ್ಗಳಿಕೆ ಅವರದ್ದು.

ತಾಲ್ಲೂಕಿನ ಅಸ್ನೋಟಿಯ ಮಾಜೇವಾಡದ ನಿವಾಸಿ, 101ರ ಹರೆಯದ ಗಣಪತಿ ಶಂಬಾಸಾಳುಂಕೆ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಿವೃತ್ತರಾದವರು. ಒಟ್ಟು 16 ಚುನಾವಣೆಗಳಲ್ಲಿ ಅವರು ಹಕ್ಕು ಚಲಾಯಿಸಿದ್ದಾರೆ. ಅವರು ಈಗ ತಮ್ಮ ಮೂವರು ಮಕ್ಕಳ ಜತೆ ವಾಸ ಮಾಡುತ್ತಿದ್ದಾರೆ.

‘1952ರಲ್ಲಿ ನಡೆದ ಮೊದಲ ಚುನಾವಣೆಗೂ ಈಗಿನದಕ್ಕೂಅಜಗಜಾಂತರ ವ್ಯತ್ಯಾಸವಿದೆ. ಆ ದಿನಗಳಲ್ಲಿ ದೇಶಭಕ್ತಿ, ಜಾಗೃತಿ, ಜವಾಬ್ದಾರಿಗಳೇ ಮತದಾರರಿಗೆ ಪ್ರೇರಕ ಶಕ್ತಿಗಳಾಗಿದ್ದವು. ಆದರೆ, ಈಗ ಹಣ ಮತ್ತು ಹೆಂಡ ಮುಖ್ಯ ವಿಚಾರಗಳಾಗುತ್ತವೆ. ಈಗ ಯಾವುದೇ ಮೌಲ್ಯಗಳು ಉಳಿದಿಲ್ಲ’ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

‘ಹಿಂದಿನ ದಿನಗಳಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆಯಿದ್ದರೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿತ್ತು. ಆದರೆ, ಈಗ ಹಾಗಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವವರು ಜಾಸ್ತಿಯಾಗಿದ್ದಾರೆ’ ಎಂದು ಬೇಸರಿಸುತ್ತಾರೆ.

‘ಈ ಬಾರಿಯೂ ಮತದಾನ’
‘ಅಂದಿನ ಮೈಸೂರು ರಾಜ್ಯದಲ್ಲಿ ನಾನು ಸಹಾಯಕ ಇನ್‌ಸ್ಪೆಕ್ಟರ್ ಆಗಿದ್ದೆ. ಉತ್ತರಕನ್ನಡದ ಹಲವು ತಾಲ್ಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ಆದರೆ, ಸಂವಿಧಾನಾತ್ಮಕವಾಗಿ ಪಡೆದ ಹಕ್ಕು ಚಲಾವಣೆಗೆ ಎಂದೂ ಹಿಂಜರಿದಿಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂಮತದಾನ ಮಾಡಿದ್ದೇನೆ. ಈ ಬಾರಿ ಏ.23ರಂದು ಲೋಕಸಭಾ ಚುನಾವಣೆಯ ಮತದಾನಕ್ಕೂ ಹೋಗುತ್ತೇನೆ’ ಎಂದುಗಣಪತಿ ಶಂಭಾ ಸಾಳುಂಕೆ ಹೆಮ್ಮೆಯಿಂದ ಹೇಳುತ್ತಾರೆ.

ಅದೇ ಗ್ರಾಮದ ಶಂಬಾ ವಿಠೋಬಾ ಸಾವಂತ್ ಅವರಿಗೆ 90ವರ್ಷ. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ನಿವೃತ್ತರಾದವರು. ತಮ್ಮ ಕರ್ತವ್ಯದ ದಿನಗಳಲ್ಲಿ 1954ರಿಂದ ಹಲವು ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಸೌಕರ್ಯದ ಕೊರತೆ
‘1957ರ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಕಾರವಾರದಲ್ಲೇ ಕರ್ತವ್ಯ ನಿರ್ವಹಿಸಿದ್ದೆ. ಆಗ ವಿದ್ಯುತ್, ದೂರವಾಣಿ, ಕುಡಿಯುವ ನೀರು, ಊಟ, ತಿಂಡಿ ಇರುತ್ತಿರಲಿಲ್ಲ. ಗ್ರಾಮಸ್ಥರೇ ನಮ್ಮನ್ನು ಉಪಚರಿಸುತ್ತಿದ್ದರು. ಮತಗಟ್ಟೆಯ ಚಾವಣಿಯ ಕೆಲವು ಹೆಂಚುಗಳನ್ನು ತೆಗೆದು ಮತಪತ್ರದ ಮೇಲೆ ಬೆಳಕು ಬೀಳುವಂತೆ ಮಾಡುತ್ತಿದ್ದೆವು’ ಎಂದು ನೆನಪಿಸಿಕೊಂಡರು.

‘ಸಂಜೆ ಐದು ಗಂಟೆಯ ನಂತರ ಅಧಿಕಾರಿಗಳು ಮತದಾನ ಪ್ರಕ್ರಿಯೆಯನ್ನು ನಿಲ್ಲಿಸುತ್ತಿದ್ದರು. ಮತಪತ್ರಗಳಿಂದ ತುಂಬಿದ್ದ ಪೆಟ್ಟಿಗೆಗಳನ್ನು ಹೆಗಲ ಮೇಲೆ ಹೊತ್ತಸಿಬ್ಬಂದಿ, ಕಿಲೋಮೀಟರ್‌ಗಟ್ಟಲೆ ನಡೆದು ಮುಖ್ಯರಸ್ತೆಗೆ ಬರಬೇಕಿತ್ತು.ಬಸ್ ಬರಲು ನಿಗದಿತ ಸಮಯ ಇರುತ್ತಿರಲಿಲ್ಲ. ಹಾಗಾಗಿ ಮರದ ಕೆಳಗೆ ಮತಪೆಟ್ಟಿಗೆಗಳನ್ನು ಇಟ್ಟುಕೊಂಡು ತಾಸುಗಟ್ಟಲೆ ಕಾಯುತ್ತಿದ್ದೆವು. ಬಸ್ ಪೆಟ್ಟಿಗೆಗಳನ್ನೂ ಸಿಬ್ಬಂದಿಯನ್ನೂ ಹೇರಿಕೊಂಡು ಹೋಗುತ್ತಿತ್ತು’ ಎಂದು ಪ್ರಯಾಸದ ದಿನಗಳನ್ನು ವಿವರಿಸಿದರು.

‘ದೇಶದ ಚುನಾವಣೆಯ ವ್ಯವಸ್ಥೆಯಲ್ಲಿ ಇಷ್ಟೊಂದು ಬದಲಾವಣೆಗಳು ಆಗಬಹುದು ಎಂದು ನಾನು ಊಹಿಸಿಯೇ ಇಲ್ಲ. ವಿದ್ಯುನ್ಮಾನ ಮತಯಂತ್ರಗಳನ್ನು ಪರಿಚಯಿಸಿದ ಬಳಿಕ ಅಸಿಂಧು ಮತಗಳಿಲ್ಲ. ಮೊದಲು ಇವುಗಳೇ ಸುಮಾರು ಶೇ 20ರಷ್ಟು ಇರುತ್ತಿದ್ದವು’ ಎಂದು ಸಂತಸ ವ್ಯಕ್ತಪಡಿಸಿದರು.

ಅಂಕಿ ಅಂಶ
ಜಿಲ್ಲೆಯ ಶತಾಯುಷಿ ಮತದಾರರು
ವಿಧಾನಸಭಾ ಕ್ಷೇತ್ರ;ಮತದಾರರು

ಕಾರವಾರ; 8
ಕುಮಟಾ; 12
ಭಟ್ಕಳ; 7
ಹಳಿಯಾಳ; 9
ಶಿರಸಿ; 12
ಯಲ್ಲಾಪುರ; 18
ಒಟ್ಟು; 66

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT