ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಕೊಗೆ ಕಾಳುಮೆಣಸಿನ ಕರಿನೆರಳು

ಕಾಡುಪ್ರಾಣಿಗಳ ಹಾವಳಿ, ಕಾಳುಮೆಣಸಿನ ಆಕರ್ಷಣೆಗೆ ಕುಗ್ಗಿದ ಬೆಳೆ
Last Updated 17 ಡಿಸೆಂಬರ್ 2018, 11:14 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ ತೋಟದ ಸಾಂಪ್ರದಾಯಿಕ ಬೆಳೆಗಳಲ್ಲಿ ಒಂದಾಗಿರುವ ಕೋಕೊ ನಿಧಾನವಾಗಿ ಬದಿಗೆ ಸರಿಯುತ್ತಿದೆ. ಅಡಿಕೆ ಮರಗಳ ನಡುವೆ ಇರುತ್ತಿದ್ದ ಪೊದೆಯಂತಹ ಗಿಡಗಳು ಮಾಯವಾಗಿ, ಕಾಳುಮೆಣಸಿನ ಬಳ್ಳಿಗಳು ತೋಟದ ಮರಗಳನ್ನು ತಬ್ಬಿಕೊಳ್ಳುತ್ತಿವೆ.

ಅಂತರ್ ಬೆಳೆಗಳಿಗೆ ಪ್ರಸಿದ್ಧಿಯಾಗಿರುವ ಮಲೆನಾಡಿನ ಅಡಿಕೆ ತೋಟಗಳಲ್ಲಿ ಕೋಕೊ, ಏಲಕ್ಕಿ, ಕಾಳುಮೆಣಸು, ಕಾಫಿ, ಶುಂಠಿ ಗಿಡಗಳ ಮಿಶ್ರ ಪರಿಮಳ ಪಸರಿಸಿಕೊಂಡಿರುತ್ತದೆ. ಆದರೆ, ರೋಗ ಭಾದೆಯಿಂದ ಏಲಕ್ಕಿ ಹಿಂಡು ಒಣಗಿದೆ, ಕಾಡುಪ್ರಾಣಿಗಳ ಹಾವಳಿಗೆ ಕೋಕೊ ನಲುಗಿದೆ. ಕಳೆದ ವರ್ಷದ ಅನಾವೃಷ್ಟಿಗೆ ಸಿಲುಕಿ ಕಾಳುಮೆಣಸು ಬಳ್ಳಿ ಸೊರಗಿದೆ.

‘ಕೋಕೊ ಬೆಳೆಗೆ ಕಬ್ಬೆಕ್ಕು, ಮಂಗ, ಇಲಿ ಕಾಟ ತಪ್ಪಿದ್ದಲ್ಲ. ಮಂಗಗಳ ಹಿಂಡು ತೋಟಕ್ಕೆ ನುಗ್ಗಿದರೆ, ಕೋಕೊ ಕಾಯಿ ಸಮೇತ ಬಿಡದೇ, ಹಾಳು ಮಾಡುತ್ತವೆ. ಒಟ್ಟು ಬೆಳೆಯಲ್ಲಿ ಕನಿಷ್ಠವೆಂದರೂ ಶೇ 20ರಷ್ಟು ಕಾಡುಪ್ರಾಣಿಯ ಪಾಲಾಗುತ್ತದೆ. ಇದರಿಂದ ಬೇಸತ್ತ ಹಲವಾರು ರೈತರು, ಒಳ್ಳೆಯ ದರವಿರುವ ಕಾಳುಮೆಣಸು ಕೃಷಿಗೆ ಆಕರ್ಷಿತರಾಗಿದ್ದಾರೆ’ ಎನ್ನುತ್ತಾರೆ ಬೆಳೆಗಾರ ದತ್ತಾತ್ರೇಯ ಹೆಗಡೆ ಭೈರಿಮನೆ.

‘ಕೋಕೊ ಗಿಡ ತೋಟದಲ್ಲಿದ್ದರೆ, ಅಡಿಕೆ ಶೇ 15ರಷ್ಟು ಹೆಚ್ಚು ಬೆಳೆ ಸಿಗುತ್ತದೆ. ಕೋಕೊ ಪ್ರೂನಿಂಗ್ ಮಾಡಿರುವ ಎಲೆಗಳು ತೋಟದಲ್ಲಿ ತಂಪನ್ನು ಉಳಿಸುತ್ತವೆ. ನಮ್ಮ ತೋಟದಲ್ಲಿ ಸುಮಾರು 600 ಗಿಡಗಳಿವೆ. ಸರಾಸರಿ 10 ಕ್ವಿಂಟಲ್ ಬೆಳೆ ಬರುತ್ತದೆ’ ಎಂದು ಅವರು ತಿಳಿಸಿದರು.

‘ಕದಂಬ ಮಾರ್ಕೆಟಿಂಗ್ ಗರಿಷ್ಠ 1500 ಕ್ವಿಂಟಲ್ ಕೋಕೊ ಹಸಿ ಬೀಜ ಖರೀದಿಸಿದೆ. ಆದರೆ, ಈ ಬಾರಿ ಹೆಚ್ಚೆಂದರೆ 700 ಕ್ವಿಂಟಲ್ ಬೆಳೆ ಮಾರಾಟಕ್ಕೆ ಬರಬಹುದು. ದೊಡ್ಡ ಪ್ರಮಾಣದಲ್ಲಿ ಕೋಕೊ ಬೆಳೆಯುತ್ತಿದ್ದ ಬೆಳೆಗಾರರು, ತೋಟದಿಂದ ಇದನ್ನು ಹೊರಹಾಕಿ, ಕಾಳುಮೆಣಸನ್ನು ಪೋಷಿಸಿದ್ದಾರೆ. ಕೋಕೊ ಗಿಡದ ನೆರಳು, ಕಾಳುಮೆಣಸಿಗೆ ಅಡ್ಡಿಯಾಗುತ್ತದೆ. ಕೋಕೊ ಹಸಿ ಬೀಜದ ಕೆ.ಜಿ.ಯೊಂದಕ್ಕೆ ಹಿಂದೆ ₹ 17 ದರವಿತ್ತು, ಪ್ರಸ್ತುತ ಕೆ.ಜಿ.ಗೆ ₹ 50ರಂತೆ ಖರೀದಿ ನಡೆಯುತ್ತಿದೆ’ ಎನ್ನುತ್ತಾರೆ ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ.

‘ಪ್ರದೇಶ ವಿಸ್ತರಣೆ ಯೋಜನೆಯಡಿ ಕೋಕೊ ಬೆಳೆಯ ಪ್ರದೇಶ ಹೆಚ್ಚಾಗಿತ್ತು. ಆದರೆ, ಕಾಡುಪ್ರಾಣಿಯ ಕಾಟ, ರೈತರು ಈ ಬೆಳೆಯ ಬಗ್ಗೆ ನಿರಾಸಕ್ತರಾಗಲು ಕಾರಣವಾಗಿದೆ. ಹಲವಾರು ರೈತರು ಕಾಳುಮೆಣಸಿಗೆ ಬದಲಾಗಿದ್ದೂ ಸಹ ಇದೇ ಕಾರಣಕ್ಕೆ. ತಾಲ್ಲೂಕಿನಲ್ಲಿ 41 ಹೆಕ್ಟೇರ್ ಕೋಕೊ ಬೆಳೆ ಪ್ರದೇಶ ಕಡಿಮೆಯಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಸತೀಶ ಹೆಗಡೆ.

127 ಹೆಕ್ಟೇರ್ 86 ಹೆಕ್ಟೇರ್ 41 ಹೆಕ್ಟೇರ್ ಕಡಿಮೆ ಕಾಳುಮೆಣಸು ಪ್ರದೇಶ ವಿಸ್ತರಣೆ, ಕಾಡುಪ್ರಾಣಿಗಳ ಕಾಟದಿಂದ ರೈತರು ಬೆಳೆ ಬಿಡಲು ಕಾರಣ. ಕಾಳುಮೆಣಸಿಗೆ ಹೋಗಲು ಕಾರಣವೂ ಇದೇ. ಪ್ರದೇಶ ವಿಸ್ತರಣೆ ಅಡಿಯಲ್ಲಿ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT