ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀನುಗಾರರಿಗೆ ಪರಿಹಾರ ಮೊತ್ತ ಹೆಚ್ಚಳ’

ಅಂಕೋಲಾದ ವಿವಿಧೆಡೆ ಸಚಿವೆ ಶಶಿಕಲಾ ಭೇಟಿ: ದೋಣಿ, ಬಲೆಗಳ ಪರಿಶೀಲನೆ
Last Updated 1 ನವೆಂಬರ್ 2019, 16:04 IST
ಅಕ್ಷರ ಗಾತ್ರ

ಕಾರವಾರ: ‘ನೆರೆ ಮತ್ತು ಚಂಡಮಾರುತದಿಂದ ಮೀನುಗಾರರಿಗೆ ಆಗಿರುವ ನಷ್ಟ ಹಾಗೂ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ತೊಂದರೆಯಾದ ಮೀನುಗಾರರಿಗೆ ಪರಿಹಾರವನ್ನು ತಲಾ ₹ 20 ಸಾವಿರಕ್ಕೆ ಹೆಚ್ಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಅಂಕೋಲಾ ತಾಲ್ಲೂಕಿನಕೇಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಿಕಂತ್ರವಾಡಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಸ್ಥಳೀಯ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಈಚೆಗೆ ಚಂಡಮಾರುತದಿಂದ ಸಮುದ್ರದಅಲೆಗಳು ಅಬ್ಬರಿಸಿ ಕಡಲತೀರದ ಕೆಲವು ಮನೆಗಳಿಗೆ ಹಾಗೂ ದೋಣಿ, ಬಲೆಗಳಿಗೆ ಹಾನಿಯಾಗಿತ್ತು. ಅವುಗಳನ್ನು ಸಚಿವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಣಿ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಕಾಂತ ಡಿ.ದುರ್ಗೇಕರ್, ‘ಸಮುದ್ರದಅಲೆಗಳಿಗೆ ಸಿಲುಕಿ 122 ಮೀನುಗಾರರ ದೋಣಿ, ಎಂಜಿನ್, ಪಾತಿ ದೋಣಿ, ಬಲೆಗಳು ಸೇರಿದಂತೆ ವಿವಿಧ ಸಲಕರಣೆಗಳು ಹಾಳಾಗಿವೆ. ಇದರಿಂದ ಮೀನುಗಾರರ ಬದುಕು ಸಂಕಷ್ಟದ ಸ್ಥಿತಿಯಲ್ಲಿದೆ. ಪ್ರಕೃತಿ ವಿಕೋಪದಡಿ ನೀಡುವ ಅಲ್ಪಮೊತ್ತದ ಪರಿಹಾರ ಸಾಕಾಗುವುದಿಲ್ಲ. ಪಂಚನಾಮೆ ಮೂಲಕ ಹಾನಿ ಪರಿಶೀಲನೆ ಗಮನಿಸಿ ದೊಡ್ಡ ಮೊತ್ತದ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ನಾಲ್ಕು ಸಾವಿರದಷ್ಟು ಜನಸಂಖ್ಯೆ ಇರುವ ಈ ಭಾಗದಲ್ಲಿ ಬಂದರು ಇಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ದೋಣಿಗಳು ಕಡಲಬ್ಬರಕ್ಕೆ ನಾಶವಾಗುತ್ತಿವೆ. ಕೇಣಿ, ಮೂಲೆಭಾಗದ ಕೋಟೆ ಗುಡ್ಡದ ಅಂಚಿನಲ್ಲಿ ಮೀನುಗಾರಿಕೆ ದೋಣಿಗಳನ್ನು ನಿಲ್ಲಿಸಲು ಜಟ್ಟಿ ನಿರ್ಮಿಸಬೇಕು’ಎಂದು ಸಚಿವ ಬಳಿ ಸಮಸ್ಯೆಯನ್ನು ಹೇಳಿಕೊಂಡರು.

ಮನವಿ ಸ್ವೀಕರಿಸಿದ ಶಶಿಕಲಾ ಜೊಲ್ಲೆ, ‘ಮೀನುಗಾರರಸಂತ್ರಸ್ತರ ಸಮಸ್ಯೆ ಪರಿಹಾರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ.ಪ್ರಾಕೃತಿಕವಿಪತ್ತು ನಿರ್ವಹಣಾ ನಿಧಿಯಿಂದ ಕೇವಲ ₹ 4,500 ಪರಿಹಾರ ದೊರೆಯುತ್ತದೆ.ಅದನ್ನು ಹೆಚ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪಸಮ್ಮತಿಸಿದ್ದಾರೆ. ಸರ್ಕಾರ ನಿಮ್ಮ ಜೊತೆಗಿದೆ’ ಎಂದು ಭರವಸೆ ನೀಡಿದರು.

ಬಂದರು ನಿರ್ಮಾಣದ ಭರವಸೆ:‘ಕೇಣಿ, ಮೂಲೆಭಾಗ, ಹರಿಕಂತ್ರವಾಡ ಮುಂತಾದೆಡೆಅಲೆಗಳ ಅಬ್ಬರಕ್ಕೆ ದೋಣಿಗಳು ಹಾಳಾಗುತ್ತಿವೆ. ಇಲ್ಲಿ ತಡೆಗೋಡೆ ಹಾಗೂ ಬಂದರು ನಿರ್ಮಾಣಕ್ಕೆ ಬಂದರು ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಅದರ ಬಗ್ಗೆ ಕಲಾಪದಲ್ಲಿಚರ್ಚೆ ನಡೆಸಿ, ಶೀಘ್ರವೇ ಕಾರ್ಯರೂಪಕ್ಕಿಳಿಸಲು ಪ್ರಯತ್ನಿಸುತ್ತೇನೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಮೀನುಗಾರರಿಗೆಭರವಸೆನೀಡಿದರು.

‘ಜಿಲ್ಲೆಯಲ್ಲಿ ನೋಂದಣಿಯಾಗದ ಹಲವು ದೋಣಿಗಳಿಗೂ ಹಾನಿಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ, ಅವುಗಳ ಮಾಲೀಕರಿಗೂಪರಿಹಾರ ದೊರಕಿಸುವ ವ್ಯವಸ್ಥೆ ಮಾಡುತ್ತೇನೆ. ಯಾರೂಗೊಂದಲಕ್ಕೊಳಗಾಗಬೇಡಿ’ ಎಂದು ಧೈರ್ಯ ತುಂಬಿದರು.

ಬಳಿಕ ಸಚಿವರು ಕೇಣಿ, ಗಾಬಿತವಾಡ, ಮೂಲೇಭಾಗದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT