ಭಾನುವಾರ, ಜುಲೈ 3, 2022
25 °C
ಸೋಂಕಿತರು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಲು ಜಿಲ್ಲಾಧಿಕಾರಿ ಮನವಿ

ಸೋಂಕು ಪಾಸಿಟಿವಿಟಿ ಪ್ರಮಾಣ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಗಣನೀಯವಾಗಿ ಇಳಿಕೆಯಾಗುತ್ತಿದೆ. ಮೇ 28ರಂದು ಶೇ 26.55ರಷ್ಟಿದ್ದ ಪ್ರಮಾಣವು ಜೂನ್ 4ರಂದು ಶೇ 15.79ಕ್ಕೆ ತಲುಪಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿನ್ನೆ ಜಿಲ್ಲೆಯಲ್ಲಿ ಒಟ್ಟು 2,254 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಅವುಗಳಲ್ಲಿ 356 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ, ಈ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಬೇಕಿದೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆ, ಆಮ್ಲಜನಕದ ಕೊರತೆಯಿಲ್ಲ. ಒಟ್ಟು 16 ಕೋವಿಡ್ ಆರೈಕೆ ಕೇಂದ್ರಗಳಲ್ಲಿ 1,030 ಹಾಸಿಗೆಗಳಿವೆ. ಅವುಗಳಲ್ಲಿ ಶನಿವಾರದವರೆಗೆ 220 ಮಂದಿ ಭರ್ತಿಯಾಗಿದ್ದು, 810 ಖಾಲಿಯಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರು ಆರೈಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾರಿಗೂ ಯಾವುದೇ ಹಿಂಜರಿಕೆ ಬೇಡ. ಮೂರು ದಿನಗಳಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ ಮನೆಗೆ ಕಳುಹಿಸಲಾಗುತ್ತದೆ’ ಎಂದರು.

‘ಈವರೆಗೆ ಆದ್ಯತಾ ವಲಯದಲ್ಲಿ 28,376 ಮಂದಿಗೆ ಲಸಿಕೆ ಕೊಡಲಾಗಿದೆ. 4,617 ಮಂದಿ ಅಂಗವಿಕಲರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಬಿಟ್ಟು ಹೋದವರು ಜೂನ್ 6 ಮತ್ತು 7ರಂದು ಪಡೆಯಲು ಅವಕಾಶವಿದೆ. ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೂ ಸೋಮವಾರ ಲಸಿಕೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ಎರಡನೇ ಡೋಸ್ ಪಡೆದಿಲ್ಲ

‘ಕೋವ್ಯಾಕ್ಸಿನ್‌ನ ಲಸಿಕೆಯ ಮೊದಲ ಡೋಸ್ ಪಡೆದ 1,827 ಮಂದಿ ಎರಡನೇ ಡೋಸ್ ಪಡೆಯಲು ಬಂದಿಲ್ಲ. 150 ಮಂದಿಯ ಮೊಬೈಲ್ ಸಂಖ್ಯೆ ಬದಲಾಗಿದೆ. ಪ್ರತಿಯೊಬ್ಬರಿಗೂ ದೂರವಾಣಿ ಕರೆ, ಎಸ್ಎಂಎಸ್ ಮಾಡಲಾಗಿದೆ. ಕೋವ್ಯಾಕ್ಸಿನ್ ಸದ್ಯ ಲಭ್ಯವಿದ್ದು, ಮುಂದೆ ಸಿಗದಿರಬಹುದು. ಕೋವಿಶೀಲ್ಡ್ ಪಡೆದ 1,930 ಮಂದಿ 12 ವಾರ ಕಳೆದರೂ ಎರಡನೇ ಡೋಸ್ ಹಾಕಿಸಿಕೊಂಡಿಲ್ಲ. ಶೀಘ್ರವೇ ಅವರು ಲಸಿಕಾ ಕೇಂದ್ರಕ್ಕೆ ಬರಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಮಾತನಾಡಿ, ‘ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಸಮೀಕ್ಷೆ ಪೂರ್ಣಗೊಂಡಿದೆ. 3.96 ಲಕ್ಷ ಮನೆಗಳಲ್ಲಿ 1,913 ಜನರಿಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ದಿನದ ಪಾಸಿಟಿವ್ ಪ್ರಕರಣಗಳ ಸಂಖ್ಯೆಗಳನ್ನು ಆಧರಿಸಿ ಮೈಕ್ರೊ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲಾಗುತ್ತಿದೆ. ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ಒಂಬತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ. 250 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಆರು ಮಂದಿಗೆ ಸೋಂಕು

‘ಜಿಲ್ಲೆಯ ಆರು ಮಂದಿ ಕಪ್ಪು ಶಿಲೀಂಧ್ರ ಸೋಂಕಿತರಾಗಿದ್ದಾರೆ. ಅವರು ಯಾರೂ ಕೋವಿಡ್ ಚಿಕಿತ್ಸೆ ಸಲುವಾಗಿ ಸ್ಟಿರಾಯ್ಡ್ ಇರುವ ಔಷಧ ಸೇವಿಸಿಲ್ಲ. ಅಲ್ಲದೇ ಕೋವಿಡ್ ಐ.ಸಿ.ಯು.ಗೆ ದಾಖಲಾಗಿರಲಿಲ್ಲ. ಎಲ್ಲರಿಗೂ ಕೋವಿಡ್ ಲಕ್ಷಣಗಳು ದೃಢಪಡುವಾಗಲೇ ಶಿಲೀಂಧ್ರ ಸೋಂಕು ಕೂಡ ಕಾಣಿಸಿಕೊಂಡಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಸಂಚಾರಿ ಘಟಕದಿಂದ ಪೂರೈಕೆ:

‘ಜಿಲ್ಲೆಯ ಎಂಡೊಸಲ್ಫಾನ್ ‍ಪೀಡಿತರಿಗೆ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಅಗತ್ಯ ಔಷಧಗಳನ್ನು ತಲುಪಿಸಲು ನಿರ್ಧರಿಸಲಾಗಿದೆ. ಎರಡು ದಿನಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮೊದಲು ಔಷಧ ತಲುಪಿಸುತ್ತಿದ್ದ ಸ್ಕೊಡ್‌ವೆಸ್ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದಿದೆ. ಸರ್ಕಾರವು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ, ಈ ಮೂರೂ ಜಿಲ್ಲೆಗಳಿಗೆ ಏಕರೂಪದ ನೀತಿ ಪ್ರಕಟಿಸಲು ನಿರ್ಧರಿಸಿದೆ. ತಿಂಗಳ ಖರ್ಚು ₹ 1 ಲಕ್ಷದ ಒಳಗೆ ಇರಬೇಕು ಎಂದು ತಿಳಿಸಿದೆ’ ಎಂದರು.

‘ಉತ್ತರ ಕನ್ನಡವು ಭೌಗೋಳಿಕವಾಗಿ ವಿಸ್ತಾರವಾಗಿರುವ ಕಾರಣ, ಇಷ್ಟು ಮೊತ್ತದಲ್ಲಿ ಪೂರೈಕೆ ಕಷ್ಟ ಎಂದು ತಿಳಿಸಲಾಗಿದೆ. ಈ ಬಗ್ಗೆ ಸರ್ಕಾರವು ಶೀಘ್ರವೇ ನಿರ್ದೇಶನ ನೀಡಲಿದೆ. ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರವು ಈಚೆಗೆ ಪ್ರಕಟಿಸಿದ ವೈದ್ಯರ ನಡೆ ಹಳ್ಳಿ ಕಡೆ ಯೋಜನೆಯ ಮೂಲಕ ಅವರಿಗೆ ಔಷಧಿಗಳನ್ನು ತಲುಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮುಂಗಾರು ಅವಧಿಗೆ ಮುನ್ನೆಚ್ಚರಿಕೆ:

‌‘ಜಿಲ್ಲೆಯಲ್ಲಿ ಮುಂಗಾರು ಅವಧಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 166 ಗ್ರಾಮಗಳನ್ನು ಪ್ರವಾಹ ಸಂಭಾವ‌್ಯ ಪ್ರದೇಶಗಳೆಂದು ಪಟ್ಟಿ ಮಾಡಲಾಗಿದೆ’‌ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಗಾಲದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಲು, ಕೋವಿಡ್ ಸೋಂಕನ್ನು ಗಮನದಲ್ಲಿ ಇಟ್ಟುಕೊಂಡು ತಾಲ್ಲೂಕು ಮಟ್ಟದಲ್ಲೇ ಕ್ರಿಯಾಯೋಜನೆಗಳನ್ನು ರೂಪಿಸಲಾಗಿದೆ. ಈ ಪ್ರಕಾರ 234 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 16,826 ಮಂದಿಗೆ ಆಶ್ರಯ ನೀಡಲು ಸಾಧ್ಯವಿದೆ’ ಎಂದು ಅವರು ಹೇಳಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐ.ಆರ್.ಬಿ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ. ಜಲಾಶಯಗಳಿಂದ ನೀರು ಹೊರ ಬಿಡುವ ಸಂದರ್ಭದಲ್ಲಿ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ಈ ಬಾರಿ ಸಾಧ್ಯವಿಲ್ಲ. ಹಾಗಾಗಿ ಸಹಾಯವಾಣಿಗಳ ಕಾರ್ಯ ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ಜೂನ್ 10 ಮತ್ತು 11ರಂದು ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು