ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿ ಹಾವಳಿ ತಡೆಗಟ್ಟಲು ಸೂಚನೆ

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನ
Last Updated 6 ಜನವರಿ 2021, 15:13 IST
ಅಕ್ಷರ ಗಾತ್ರ

ಕಾರವಾರ: ‘ಚಾಲನಾ ಪರವಾನಗಿ ಪಡೆಯುವ ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಎಂಬ ದೂರುಗಳಿವೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದನ್ನು ತಡೆಗಟ್ಟಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾರಿಗೆ ಇಲಾಖೆಯ ಅಧಿಕಾರಿಗಳು ಸಂಚಾರ ನಿಯಮಗಳು ಮತ್ತು ಕಾನೂನು ಪ್ರಕಾರ ಕಾರ್ಯ ನಿರ್ವಹಿಸಬೇಕು. ವಾಹನಗಳ ಸ್ಥಿತಿಗತಿ ಪ್ರಮಾಣ ಪತ್ರ, ಚಾಲನಾ ಪರವಾನಗಿ ನೀಡಲು ಅನುಸರಿಸಬೇಕಾದ ಮಾನದಂಡ ಹಾಗೂ ಕಾನೂನುಗಳ ಬಗ್ಗೆ ಅಧಿಕಾರಿಗಳಿಗೆ ಪರಿಪೂರ್ಣ ಜ್ಞಾನವಿರಬೇಕು. ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಆಟೊರಿಕ್ಷಾಗಳ ಪರವಾನಗಿ ರದ್ದು, ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳ ಚಾಲಕರು ನಿಯಮ ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಸಾರಿಗೆ ಅಧಿಕಾರಿಗಳು ಪ್ರತಿ ವಾಹನದ ಸ್ಥಿತಿಗತಿಯನ್ನು ಪರಿಶೀಲಿಸಿಯೇ ಪರವಾನಗಿ ನೀಡಬೇಕು. ಪ್ರಯಾಣಿಕರಿಗೆ ತೊಂದರೆಯಾದರೆ, ಅಪಘಾತಗಳಿಂದ ಸಾವು–ನೋವು ಉಂಟಾದರೆ ಸಂಬಂಧಪಟ್ಟ ಸಂಸ್ಥೆ, ವಾಹನದ ಚಾಲಕ, ಮಾಲೀಕ ಹಾಗೂ ಆರ್.ಟಿ.ಒ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ದೂರು ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಂತ್ರಜ್ಞಾನ ಬಳಕೆಗೆ ಸಲಹೆ:

‘ಆಟೊರಿಕ್ಷಾ, ಕ್ಯಾಬ್ ಚಾಲಕರು, ಕೆ.ಎಸ್‍.ಆರ್‌.ಟಿ.ಸಿ ಹಾಗೂ ವಿವಿಧ ಸಾರಿಗೆ ಸಂಸ್ಥೆಯವರು ನೂತನ ತಂತ್ರಜ್ಞಾನ ಬಳಸಿಕೊಳ್ಳಬೇಕು. ಈ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು’ ಎಂದು ಡಿ.ಸಿ ಹರೀಶಕುಮಾರ್ ಸೂಚಿಸಿದರು.

‘ಮಹಾನಗರಗಳ ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಜಿಲ್ಲೆಯಲ್ಲೂ ಅಳವಡಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡಬೇಕು. ಇತರ ಜಿಲ್ಲೆಗಳು, ರಾಜ್ಯಗಳಿಂದ ಬಂದ ಪ್ರಯಾಣಿಕರೊಂದಿಗೆ ಉತ್ತಮವಾಗಿ ವ್ಯವಹರಿಸಬೇಕು. ಈ ಮೂಲಕ ಅವರು ಜಿಲ್ಲೆಯಲ್ಲಿರುವ ಸಾರಿಗೆ ಸೇವಾ ವ್ಯವಸ್ಥೆಯ ಕುರಿತು ಮತ್ತೊಬ್ಬರಿಗೆ ತಿಳಿಸುವಂತಿರಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಆರ್.ಟಿ.ಒ, ಕೆ.ಎಸ್.ಆರ್‌.ಟಿ.ಸಿ ಅಧಿಕಾರಿಗಳು, ವಿವಿಧ ಸಾರಿಗೆ ಸಂಸ್ಥೆಗಳ ಮುಖ್ಯಸ್ಥರು, ಆಟೊರಿಕ್ಷಾ ಚಾಲಕರ, ಮಾಲೀಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT