ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ: 20 ಜನ ಹಾಜರಿಗೆ ಅನುಮತಿ

ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಲಾಕ್‌ಡೌನ್ ಸಡಿಲಿಸಿ ಜಿಲ್ಲಾಧಿಕಾರಿ ಆದೇಶ
Last Updated 20 ಜೂನ್ 2021, 13:36 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಕೋವಿಡ್ ದೃಢಪಡುವ ಪ್ರಮಾಣವು ಶೇ 5ಕ್ಕಿಂತ ಕಡಿಮೆಯಿದೆ. ಆದ್ದರಿಂದ ಸರ್ಕಾರವು ಜಿಲ್ಲೆಯಲ್ಲಿ ಜುಲೈ 5ರ ಸಂಜೆ 5ರವರೆಗೆ ಲಾಕ್‌ಡೌನ್‌ ಅನ್ನು ಸಂಪೂರ್ಣವಾಗಿ ತೆರವು ಮಾಡಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸರ್ಕಾರದ ಮಾರ್ಗಸೂಚಿಗಳಿಗೆ ಹೆಚ್ಚುವರಿಯಾಗಿ ಕೆಲವು ಆದೇಶಗಳನ್ನು ಭಾನುವಾರ ಹೊರಡಿಸಿದ್ದಾರೆ.

‘ಮದುವೆಗಳನ್ನು ತಹಶೀಲ್ದಾರರ ಅನುಮತಿ ಮೇರೆಗೆ ಮನೆಗಳಲ್ಲೇ ಹಮ್ಮಿಕೊಳ್ಳಬಹುದು. ಕೇವಲ 20 ಜನ ಭಾಗವಹಿಸಲು ಅವಕಾಶವಿದೆ. ಈ ನಿರ್ಬಂಧದ ಉಲ್ಲಂಘನೆಯಾದರೆ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ ವಹಿಸಬೇಕು. ಮದುವೆ ಕಾರ್ಯಕ್ರಮಕ್ಕೆ ಹಾಜರಾಗುವವರ ಆರೋಗ್ಯದ ಮೇಲೆ ನಿಗಾ ಇಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಸ್ಥಳೀಯ ಆಡಳಿತಗಳು ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಕ್ರಮ ವಹಿಸಬೇಕು’ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

ಆಯಾ ತಾಲ್ಲೂಕುಗಳಲ್ಲಿ 10ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಡುವ ಪ್ರದೇಶಗಳನ್ನು ‘ಸೂಕ್ಷ್ಮ ನಿರ್ಬಂಧಿತ ವಲಯ’ಗಳನ್ನಾಗಿ (ಮೈಕ್ರೊ ಕಂಟೈನ್‌ಮೆಂಟ್ ಝೋನ್) ಘೋಷಿಸಿ ಲಾಕ್‌ಡೌನ್ ಮಾಡಬೇಕು. ಈ ಸಂಬಂಧ ತಹಶೀಲ್ದಾರರು ಜಿಲ್ಲಾಧಿಕಾರಿಯ ಅನುಮತಿ ಪಡೆಯಬೇಕು. ಈ ಪ್ರದೇಶಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು, ತರಕಾರಿ ಹಾಗೂ ದಿನಸಿ ಸಾಮಗ್ರಿಯನ್ನು ಮನೆ ಮನೆಗೆ ಮಾರಾಟ ಮಾಡಲು ಸ್ಥಳೀಯ ಆಡಳಿತಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

‘ಸರ್ಕಾರದ ಆದೇಶದಂತೆ ರಾತ್ರಿ ಹಾಗೂ ವಾರಾಂತ್ಯದ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‌ಗಳು ಶೇ 50ರಷ್ಟೇ ಗ್ರಾಹಕರಿಗೆ ಅವಕಾಶ ನೀಡಬೇಕು. ಇದರಲ್ಲಿ ಯಾವುದೇ ಉಲ್ಲಂಘನೆಯಾದರೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಮುಖಗವಸು ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಗ್ರಾಹಕರ ಸ್ವಾಗತಿಸಲು ಸಜ್ಜು:

ಕೋವಿಡ್ ಎರಡನೇ ಅಲೆ ಶುರುವಾದ ಬಳಿಕ ಹೋಟೆಲ್‌ಗಳಲ್ಲೇ ಆಹಾರ ಸೇವನೆಯನ್ನು ನಿಷೇಧಿಸಲಾಗಿತ್ತು. ಗ್ರಾಹಕರಿಗೆ ಪಾರ್ಸೆಲ್ ನೀಡಲು ಅವಕಾಶವಿದ್ದರೂ ಹಲವು ಹೋಟೆಲ್‌ಗಳು ನಷ್ಟವಾಗುವ ಕಾರಣ ಬಾಗಿಲು ಮುಚ್ಚಿದ್ದವು. ಸರ್ಕಾರವು ಲಾಕ್‌ಡೌನ್ ತೆರವು ಮಾಡಿ ಆದೇಶಿಸಿದ್ದರಿಂದ ಜೂನ್ 21ರಿಂದ ಗ್ರಾಹಕರನ್ನು ಪುನಃ ಸ್ವಾಗತಿಸಲು ಸಜ್ಜಾಗಿವೆ. ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟೇ ಗ್ರಾಹಕರು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಕುರ್ಚಿ, ಮೇಜುಗಳನ್ನು ಹೋಟೆಲ್‌ಗಳ ಸಿಬ್ಬಂದಿ ಭಾನುವಾರ ಹೊಂದಿಸಿದರು. ಅಡುಗೆ ಮನೆಗಳನ್ನೂ ಸಜ್ಜುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT