ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ‘ಶಿಸ್ತುಬದ್ಧ’ ಪ್ರವಾಸೋದ್ಯಮಕ್ಕೆ ‘ವಿಚಕ್ಷಣಾ ದಳ’ದ ನಿರೀಕ್ಷೆ

Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಉದ್ಯಮದ ಹಿತದೃಷ್ಟಿಯಿಂದ ಪ್ರತ್ಯೇಕ ವಿಚಕ್ಷಣಾ ದಳವನ್ನು ನಿಯೋಜಿಸಬೇಕು. ಇದರಿಂದ ‘ಶಿಸ್ತುಬದ್ಧ ಪ್ರವಾಸೋದ್ಯಮ’ಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಜಿಲ್ಲೆಗೆ ದಿನವೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಜೊಯಿಡಾ, ದಾಂಡೇಲಿಯಂಥ ಕಡೆಗಳಲ್ಲಿ ಅನೇಕರು ರಸ್ತೆ ಬದಿಯಲ್ಲಿ ಸಂಗೀತ ಹಾಕಿಕೊಂಡು ನೃತ್ಯ ಮಾಡುವುದು, ಕಾಡಿನೊಳಗೆ ಕ್ಯಾಂಪ್ ಫೈರ್ ಮಾಡುತ್ತಾರೆ. ಅನಧಿಕೃತ ಹೋಂ ಸ್ಟೇಗಳು, ರೆಸಾರ್ಟ್‌ಗಳನ್ನು ನಿಯಂತ್ರಿಸಬೇಕು. ಇದಕ್ಕೆ ವಿಚಕ್ಷಣಾ ದಳ ಸಹಕಾರಿ’ ಜೊಯಿಡಾದ ಕಾಡುಮನೆ ಹೋಂ ಸ್ಟೇ ಮಾಲೀಕ ನರಸಿಂಹ ಛಾಪಖಂಡ.

‘‌ಪ್ರವಾಸೋದ್ಯಮ ಹಾಗೂ ಕೋವಿಡ್‌ನ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಲಂಗು ಲಗಾಮಿಲ್ಲದೇ ವ್ಯವಹಾರ ನಡೆದು, ಪ್ರವಾಸಿಗರಿಗೆ ಜಿಲ್ಲೆಯಲ್ಲಿ ಕೆಟ್ಟ ಪ್ರವಾಸೋದ್ಯಮದ ಭಾವನೆ ಬರುವ ಸಾಧ್ಯತೆಯಿದೆ’ ಎಂದು ಎಚ್ಚರಿಸುತ್ತಾರೆ.

ಧಾರಣಾ ಸಾಮರ್ಥ್ಯ ತಿಳಿಯಬೇಕು:

‘ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಹೋಟೆಲ್‌ಗಳು, ರೆಸಾರ್ಟ್‌ಗಳು, ಹೋಂ ಸ್ಟೇಗಳು ಇರುವುದು ಸೂಕ್ತ ಎಂಬ ಲೆಕ್ಕಾಚಾರ ಬೇಕು. ಉದಾಹಣೆಗೆ, ವಾರಾತ್ಯದಲ್ಲಿ ಜೊಯಿಡಾಕ್ಕೆ ಏಳೆಂಟು ಸಾವಿರ ಜನ ಬರುತ್ತಾರೆ. ಅವರಲ್ಲಿ ಬಹುತೇಕರು ರಿವರ್ ರ‍್ಯಾಫ್ಟಿಂಗ್ ಅಥವಾ ಸಫಾರಿ ಮಾಡುತ್ತಾರೆ. ಆದರೆ, ಅಲ್ಲಿ ಜನದಟ್ಟಣೆಯಾಗಿ ಸಮಯಾಭಾವ ಆಗುತ್ತದೆ. ಇದರಿಂದ ಅವರಿಗೆ ನಿರಾಸೆಯಾಗುತ್ತದೆ’ ಎಂದು ವಿವರಿಸುತ್ತಾರೆ.

‘ಉತ್ತರ ಕನ್ನಡವನ್ನು ಪರಿಸರ ಪ್ರವಾಸೋದ್ಯಮ ಜಿಲ್ಲೆ ಎಂದು ಘೋಷಿಸಿ ಅದಕ್ಕೆ ಪೂರಕವಾಗಿ ಕೆಲಸಗಳಾಗಬೇಕು. ಜಿಲ್ಲೆಯಲ್ಲಿ ಗೈಡ್‌ಗಳಿಗೆ ತರಬೇತಿ ಕೊಡುತ್ತಿಲ್ಲ. ಸಾವಿರಾರು ಜನ ಬಂದರೂ ಜಿಲ್ಲೆಯ ಭೌಗೋಳಿಕ ಮಾಹಿತಿ ಸೇರಿದಂತೆ ಸಮಗ್ರ ವಿಚಾರಗಳು ಗೊತ್ತಿರುವವರ ಕೊರತೆಯಿದೆ. ಹೋಟೆಲ್‌ಗಳಲ್ಲಿ ಕಾರ್ಮಿಕರ ಕೊರತೆಯಿದೆ. ಇವುಗಳನ್ನು ಸರಿಪಡಿಸಿದರೆ ವ್ಯವಸ್ಥಿತವಾಗಿ ಉದ್ಯಮ ಬೆಳೆಯುತ್ತದೆ’ ಎಂದು ಅವರು ಹೇಳುತ್ತಾರೆ.

ಉದ್ಯಮದಲ್ಲಿ ಚೇತರಿಕೆ:

‘ಕೋವಿಡ್ ನಿರ್ಬಂಧವನ್ನು ತೆರವು ಮಾಡಿದ್ದರಿಂದ ವಾರಾಂತ್ಯದಲ್ಲಿ ಪ್ರವಾಸಿಗರು ಸಾಲುಗಟ್ಟಿ ಬರುತ್ತಿದ್ದಾರೆ. ಉದ್ಯಮದ ವಾತಾವರಣವು ಇದೇ ರೀತಿ ಮುಂದುವರಿದರೆ ಎರಡು ವರ್ಷಗಳಲ್ಲಿ ಆಗಿರುವ ನಷ್ಟವು ಒಂದೇ ವರ್ಷದಲ್ಲಿ ಸರಿಹೋಗುವ ನಿರೀಕ್ಷೆ ಮೂಡಿದೆ. ಆದರೆ, ಅದಕ್ಕೆ ಪೂರಕವಾಗಿ ಸರ್ಕಾರದಿಂದಲೂ ನಿಯಮಗಳು ಆಗಬೇಕು’ ಎಂದು ಕಾರವಾರದ ‘ಓಶಿಯನ್ ಡೆಕ್’ ಹೋಂ ಸ್ಟೇ ಮಾಲೀಕ ವಿನಯ ನಾಯ್ಕ ಅಭಿಪ್ರಾಯಪಡುತ್ತಾರೆ.

ತಾಣಗಳೆಲ್ಲ ಭರ್ತಿ!:

ಕೋವಿಡ್ ಕಾರಣದಿಂದ ಬಿಕೊ ಎನ್ನುತ್ತಿದ್ದ ಪ್ರವಾಸಿ ತಾಣಗಳೀಗ ಪ್ರವಾಸಿಗರಿಂದ ತುಂಬಿವೆ. ನಗರದ ಟ್ಯಾಗೋರ್ ಕಡಲತೀರದಲ್ಲಿ ಸೂರ್ಯಾಸ್ತದ ಸಂದರ್ಭ ಸಾವಿರಾರು ಜನ ಸೇರುತ್ತಿದ್ದಾರೆ. ವಾರಾಂತ್ಯವಂತೂ ವಾಯುವಿಹಾರಕ್ಕೂ ಜಾಗವಿಲ್ಲ ಎಂಬಷ್ಟು ಜನ ತುಂಬಿರುತ್ತಾರೆ.

ಹೋಟೆಲ್‌ಗಳು, ಬೀಚ್ ರೆಸಾರ್ಟ್‌ಗಳು, ರೆಸ್ಟೊರೆಂಟ್‌ಗಳ ಸಿಬ್ಬಂದಿ ಮತ್ತೆ ಕೈತುಂಬ ಕೆಲಸ ಕಾಣುತ್ತಿದ್ದಾರೆ. ಇದೇರೀತಿಯ ವಾತಾವರಣವು ಗೋಕರ್ಣ, ಮುರುಡೇಶ್ವರದಲ್ಲೂ ಇದೆ. ಈ ಎರಡೂ ಕ್ಷೇತ್ರಗಳು ಮತ್ತು ಶಿರಸಿಯ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಪ್ರವಾಸೋದ್ಯಮವೂ ಚೇತರಿಸಿಕೊಂಡಿದೆ.

ಜಲಸಾಹಸ ಕ್ರೀಡೆಗಳಿಗೂ ಜಿಲ್ಲಾಡಳಿತವು ಅನುಮತಿ ನೀಡಿದೆ ಜೊಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್‌ಗೆ ಪ್ರವಾಸಿಗರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ದಾಂಡೇಲಿ ಹಾಗೂ ಜೊಯಿಡಾ ತಾಲ್ಲೂಕಿನಲ್ಲಿ ಕಾಡಿನ ನಡುವೆ ಸಫಾರಿಯೂ ಪ್ರಮುಖ ಆಕರ್ಷಣೆಯಾಗಿದೆ. ಜೊಯಿಡಾದಲ್ಲಿರುವ ಚಿಟ್ಟೆ ಉದ್ಯಾನವೂ ಕೈಬೀಸಿ ಕರೆಯುತ್ತಿದೆ.

ದಾಂಡೇಲಿ ತಾಲ್ಲೂಕಿನ ಕುವೇಶಿಯಲ್ಲಿ ಕೆನೋಪಿ ವಾಕ್‌, ಕ್ಯಾಸಲ್ ರಾಕ್, ಜೊಯಿಡಾದ ಉಳವಿ ಕ್ಷೇತ್ರ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳ ಹತ್ತಾರು ಜಲಪಾತಗಳು ಈಗ ಪ್ರವಾಸಿಗರಿಂದ ತುಂಬಿಕೊಂಡಿವೆ.

* ಕೋವಿಡ್ ಸಂದರ್ಭದಲ್ಲಿ ಹಲವು ಹೋಟೆಲ್, ಹೋಂ ಸ್ಟೇಗಳಲ್ಲಿ ಸಿಬ್ಬಂದಿ, ನೌಕರರ ಸಂಖ್ಯೆ ಕಡಿತಗೊಳಿಸಲಾಗಿತ್ತು. ಈಗ ಮತ್ತೆ ಒಂದಷ್ಟು ಮಂದಿಗೆ ಉದ್ಯೋಗ ಸಿಗುತ್ತಿದೆ.

– ನರಸಿಂಹ ಛಾಪಖಂಡ, ಹೋಂ ಸ್ಟೇ ಮಾಲೀಕ, ಜೊಯಿಡಾ

* ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದರೆ ಅಥವಾ ಕೋವಿಡ್ ನೆಗೆಟಿವ್ ಇದ್ದವರಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ.

– ವಿನಯ ನಾಯ್ಕ, ಹೋಂ ಸ್ಟೇ ಮಾಲೀಕ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT