ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪತ್ರಿಕೋದ್ಯಮಕ್ಕೆ ಬರ: ಹಿರಿಯ ಪತ್ರಕರ್ತ ಕೃಷ್ಣಪ್ರಸಾದ ಮೈಸೂರು

ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ಪ್ರದಾನ
Last Updated 26 ಜನವರಿ 2020, 13:19 IST
ಅಕ್ಷರ ಗಾತ್ರ

ಸಿದ್ದಾಪುರ: ‘ಕನ್ನಡ ಪತ್ರಿಕೋದ್ಯಮಕ್ಕೆ ಪೂರ್ಣ ಪ್ರಮಾಣದ ಬರ ಬಂದಿದೆ’ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ ಮೈಸೂರು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಸಂಸ್ಕೃತಿ ಸಂಪದದ ಆಶ್ರಯದಲ್ಲಿ ಸ್ಥಳೀಯ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ನಡೆದ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಇಂದು ಪತ್ರಿಕೋದ್ಯಮಕ್ಕೆ ಆದರ್ಶ ಎಂದು ಯಾರನ್ನಾದರೂ ತೋರಿಸಬಹುದೇ? ಯಾವ ಸಂಪಾದಕ, ನಿರೂಪಕನನ್ನು ವಿಶ್ವಾಸಾರ್ಹ ಎಂದು ಹೇಳಬಹುದು? ಯಾವುದಾದರೂ ಲೇಖನ, ವರದಿ, ಅಂಕಣ ಹೊಸ ಆಲೋಚನೆಗಳನ್ನು ಬಿತ್ತುತ್ತಿದೆಯೇ? ಕನ್ನಡದ ಅತಿದೊಡ್ಡ ತನಿಖಾ ವರದಿಗಾರನನ್ನಾಗಿ ಯಾರನ್ನು ತೋರಿಸಬಹುದು? ಭಾಷೆಯ ಕೌಶಲವನ್ನು ಯಾವ ಅಂಕಣದಲ್ಲಿ ಕಾಣಬಹುದು ಇತ್ಯಾದಿ ಪ್ರಶ್ನೆಗಳನ್ನು ಪತ್ರಿಕೆಗಳ ಓದುಗರು ಮತ್ತು ಟಿವಿ ನೋಡುಗರು ಕೇಳಿಕೊಳ್ಳಬೇಕಾಗಿದೆ’ ಎಂದರು.

‘ಪತ್ರಿಕೆಗಳ ಪ್ರಸಾರ ಅಥವಾ ಟಿವಿಗಳ ಟಿಆರ್‌ಪಿ ನೋಡಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕನ್ನಡ ಪತ್ರಿಕೋದ್ಯಮ ವೈಚಾರಿಕವಾಗಿ ದಿವಾಳಿಯಾಗಿದೆ’ ಎಂದು ವಿಷಾದಿಸಿದರು.

ಪತ್ರಕರ್ತ ರವಿ ಹೆಗಡೆ ಮಾತನಾಡಿ, ‘ಪತ್ರಿಕೋದ್ಯಮ ಇಂದು ಎಡ ಮತ್ತು ಬಲ ಎಂದು ವಿಭಾಗಗೊಂಡಿದೆ. ಕಳೆದ 30 ವರ್ಷಗಳಲ್ಲಿಯೇ ದೊಡ್ಡದು ಎನ್ನಬಹುದಾದ ಆರ್ಥಿಕ ಸಂಕಷ್ಟಕ್ಕೆ ಪತ್ರಿಕೋದ್ಯಮ ಈಡಾಗಿದೆ’ ಎಂದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಮತ್ತು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಮಾತನಾಡಿದರು.

ಪ್ರಶಸ್ತಿ ಪ್ರದಾನ: ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರವನ್ನು ಪತ್ರಿಕಾ ಮಾಧ್ಯಮದ ವಿಶೇಷ ಸಾಧನೆಗಾಗಿ ಜಿಲ್ಲೆಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅವರಿಗೆ ಪ್ರದಾನ ಮಾಡಲಾಯಿತು. ಗಂಗಾಧರ ಹಿರೇಗುತ್ತಿ ಪತ್ರಿಕೋದ್ಯಮದಲ್ಲಿ ತಾವು ನಡೆದು ಬಂದ ಕಷ್ಟಕರ ದಾರಿಯನ್ನು ವಿವರಿಸಿದರು.

ಉಮೇಶ ಭಟ್ಟ ವೇದಘೋಷ ಮಾಡಿದರು. ಕಾಶ್ಯಪ ಪರ್ಣಕುಟಿ ಸ್ವಾಗತಿಸಿದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಕೊಳಗಿ, ದೊಡ್ಮನೆ ಗಣೇಶ ಹೆಗಡೆ ಅವರ ಕುರಿತು ಮಾತನಾಡಿದರು. ನಾಗರಾಜ ಭಟ್ ಕೆಕ್ಕಾರ ವಂದಿಸಿದರು. ರಮೇಶ ಹಾರ್ಸಿಮನೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT