ಶುಕ್ರವಾರ, ಅಕ್ಟೋಬರ್ 29, 2021
20 °C
ಪ್ರದೇಶಾಭಿವೃದ್ಧಿ ನಿಧಿಗಿಂತ ಹೆಚ್ಚು ಮೊತ್ತದ ಕ್ರಿಯಾಯೋಜನೆ ರೂಪಿಸಿದ ಭಟ್ಕಳ ಶಾಸಕ

ಅನುದಾನ ಬಳಕೆಯಲ್ಲಿ ಮುಂದೆ: ಪ್ರಗತಿಯಲ್ಲಿ ಹಿಂದೆ

ಮೋಹನ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಭಟ್ಕಳ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಅವರ ಶಾಸಕರ ಪ್ರದೇಶಾಭಿವೃದ್ದಿ ನಿಧಿಗಿಂತ ಹೆಚ್ಚಿನ ಮೊತ್ತದ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಆದರೆ, ಮಂಜೂರಾದ ಕಾಮಗಾರಿಗಳಲ್ಲಿ ಹಲವು ಇನ್ನೂ ಪೂರ್ಣಗೊಂಡಿಲ್ಲ.

ಆರೋಗ್ಯ, ಸೇತುವೆ, ಗ್ರಾಮೀಣ ರಸ್ತೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. 2018–19ನೇ ಸಾಲಿನ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಕೂಡ ಈಗಲೂ ಮಂದಗತಿಯಲ್ಲಿ ಸಾಗಿದೆ. ಅಂಗವಿಕಲರ ವಾಹನಕ್ಕೆ ಮೀಸಲಿಟ್ಟ ಹಣ ಬಳಕೆಯಾಗಿಲ್ಲ ಎಂಬ ದೂರುಗಳಿವೆ.

ಪ್ರಸಕ್ತ ವರ್ಷ ಸೇರಿ ಕಳೆದ 4 ವರ್ಷಗಳ ಶಾಸಕರಿಗೆ ಬಿಡುಗಡೆಯಾದ  ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಪೈಕಿ ₹81.44 ಲಕ್ಷದ ಮೊತ್ತದ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ.

2018-19 ಹಾಗೂ 2019-20 ನೇ ಸಾಲಿನಲ್ಲಿ ತಲಾ ₹1.55 ಕೋಟಿ ಅನುದಾನ ಬಿಡುಗಡೆಯಾಗಿದೆ. 2018-19ಸಾಲಿನಲ್ಲಿ ₹1.96ಕೋಟಿ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಿದ್ದು ಅದರಲ್ಲಿ ₹1.29 ಕೋಟಿ ಕಾಮಗಾರಿ ಪೂರ್ಣಗೊಂಡಿದೆ. ₹6.1ಲಕ್ಷದ ಕಾಮಗಾರಿ ಪೂರ್ಣಗೊಂಡಿಲ್ಲ. ₹19.78 ಲಕ್ಷ ಹಣ ಉಳಿಕೆಯಾಗಿದೆ.

2019-20 ನೇ ಸಾಲಿನಲ್ಲಿ ₹1.61 ಕೋಟಿ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಿದ್ದು, ಅದರಲ್ಲಿ ₹94.50 ಲಕ್ಷ ಕಾಮಗಾರಿ ಪೂರ್ಣಗೊಂಡಿದೆ. ₹46.84 ಲಕ್ಷ ಕಾಮಗಾರಿ ಪೂರ್ಣಗೊಂಡಿಲ್ಲ. ₹14.8ಲಕ್ಷ ಹಣ ಉಳಿಕೆಯಾಗಿತ್ತು.

2020-21 ಹಾಗೂ 2021-22 ನೇ ಸಾಲಿನಲ್ಲಿ ಕೋವಿಡ್ ಕಾರಣದಿಂದ ಶಾಸಕರಿಗೆ ತಲಾ ₹1 ಕೋಟಿ ಅನುದಾನ ದೊರೆತಿದೆ. 2020-21 ಸಾಲಿನಲ್ಲಿ ₹71.49ಲಕ್ಷ ಮೊತ್ತದ ಕಾಮಗಾರಿ ಪೂರ್ಣಗೊಂಡಿದೆ.  ₹28.5 ಲಕ್ಷ ಕಾಮಗಾರಿ ಪೂರ್ಣಗೊಳ್ಳದೇ ಬಾಕಿ ಉಳಿದಿದೆ. 2021-22ನೇ ಸಾಲಿನ ಅನುದಾನದಲ್ಲಿ ₹60 ಲಕ್ಷ ಅನುದಾನವನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ₹7.5 ಲಕ್ಷ ಹಣವನ್ನು ಕಾಮಗಾರಿಗೆ ನೀಡಲಾಗಿದ್ದು, ಉಳಿದ ₹30 ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಕೆಯಾಗಬೇಕಿದೆ.

‘2018-19 ಹಾಗೂ 2019-20 ನೇ ಸಾಲಿನಲ್ಲಿ ತಲಾ ₹20 ಲಕ್ಷ ಅನುದಾನ ಅಂಗವಿಕಲರ ತ್ರಿಚಕ್ರ ವಾಹನಕ್ಕೆ ಮೀಸಲಾಗಿತ್ತು. ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವಾಹನ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸದ ಕಾರಣ ಅನುದಾನ ಉಳಿಕೆಯಾಗಿದೆ’ ಎಂದು ಶಾಸಕರ ಕಚೇರಿ ಮೂಲಗಳು ತಿಳಿಸಿವೆ.

‘ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಅವರ ವೇಗಕ್ಕೆ ಅಧಿಕಾರಿಗಳು ಹೊಂದಿಕೊಳ್ಳುತ್ತಿಲ್ಲ. ಶಿಫಾರಸ್ಸು ಮಾಡಿದ ಕಾಮಗಾರಿ ಮಂಜೂರಾತಿಗೆ ಅಧಿಕಾರಿಗಳು ನಿಯಮಾವಳಿ ನೆಪ ಹೇರುತ್ತಿರುವದು ಸಮಸ್ಯೆಗೆ ಕಾರಣವಾಗಿದೆ’  ಎಂದು ಶಾಸಕರ ಆಪ್ತರೊಬ್ಬರು ಪ್ರತಿಕ್ರಿಯಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ಹೆಚ್ಚು:

ಶಾಸಕ ಸುನೀಲ ನಾಯ್ಕ ಈ ಸಾಲಿನ ಶಾಸಕರ ನಿಧಿ ಬಳಕೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಭಟ್ಕಳ ಹಾಗೂ ಹೊನ್ನಾವರದ ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ ನೀಡಿದ್ದಾರೆ. ಶಿರಾಲಿ ಹಾಗೂ ಮಂಕಿ ಆರೋಗ್ಯ ಕೇಂದ್ರಕ್ಕೆ  ಆಂಬುಲೆನ್ಸ್ ನೀಡಲು ನಿರ್ಧರಿಸಲಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕ ಕಟ್ಟಡ ನಿರ್ಮಾಣಕ್ಕೆ ₹7.5 ಲಕ್ಷ ಅನುದಾನ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.