ಬುಧವಾರ, ಆಗಸ್ಟ್ 4, 2021
26 °C
ಆಯ್ದ 16 ತಳಿಗಳನ್ನು ಬೆಳೆಸಿದ್ದ ರೈತ ರಾಮಚಂದ್ರ ಹೆಗಡೆ

ಶಿರಸಿ | ಸಾಂಬಾರು ಸೌತೆ: ಲಾಕ್‌ಡೌನ್‌ನಲ್ಲೂ ಮಾರಾಟ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಆಯ್ದ 16 ತಳಿಗಳ ಸಾಂಬಾರು ಸೌತೆ(ಮಗೆಕಾಯಿ)ಯನ್ನು ವೈಜ್ಞಾನಿಕ ವಿಧಾನದಲ್ಲಿ ಬೆಳೆದಿರುವ ತಾಲ್ಲೂಕಿನ ಕೊಪ್ಪದ ಕೃಷಿಕ ರಾಮಚಂದ್ರ ಹೆಗಡೆ ಅವರು ಅಧಿಕ ಇಳುವರಿ ಪಡೆದಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಸ್ಥಳೀಯ ಗ್ರಾಹಕರನ್ನು ಸೆಳೆದು ಸುಲಭದಲ್ಲಿ ಮಾರುಕಟ್ಟೆ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಒಂದು ಎಕರೆ ಗದ್ದೆಯಲ್ಲಿ ಇಸ್ರೇಲ್ ಮಾದರಿಯಲ್ಲಿ ಮಲ್ಚಿಂಗ್ ಮತ್ತು ಹನಿ ನೀರಾವರಿ ಮೂಲಕ ಸುಮಾರು 4000 ಬಳ್ಳಿ ಬೆಳೆಸಿದ್ದ ಅವರು ಅದರಿಂದ 30 ಕ್ವಿಂಟಲ್‌ನಷ್ಟು ಉತ್ಪನ್ನ ಪಡೆದಿದ್ದಾರೆ. ಇದಕ್ಕೆ ಅವರು ಅಂದಾಜು ₹ 30ಸಾವಿರ ಬಂಡವಾಳ ಹಾಕಿದ್ದರು. ‘ಮೊದಲನೇ ಹಂತದ ಲಾಕ್‌ಡೌನ್‌ ವೇಳೆಗೆ ಗದ್ದೆಯಲ್ಲಿ ಬೆಳೆದಿದ್ದ ಕಾಯಿಗಳು ಬಲಿತಿದ್ದವು. ಜೀಪಿನಲ್ಲಿ ತುಂಬಿಕೊಂಡು ಕೊಪ್ಪ ಸುತ್ತಲಿನ ಹಳ್ಳಿ, ಬನವಾಸಿ ಸೀಮೆ, ಅಜ್ಜೀಬಳ, ಕಾನಸೂರು ಮೊದಲಾದ ಹಳ್ಳಿಗಳು, ನಗರದ ಕೆಲವು ವಾರ್ಡ್‌ಗಳಲ್ಲಿ ಓಡಾಡಿ ಸ್ವತಃ ವ್ಯಾಪಾರ ಮಾಡಿದೆ. ದಿನಕ್ಕೆ ಸರಾಸರಿ ಮೂರು ಕ್ವಿಂಟಲ್ ಮಗೆಕಾಯಿ ಮಾರಾಟವಾಯಿತು. ತರಕಾರಿ ಮಾರಾಟಗಾರರು ಸಾಂಬಾರು ಸೌತೆಗೆ ಕೆ.ಜಿ.ಯೊಂದಕ್ಕೆ ₹ 30ರ ದರದಲ್ಲಿ ಮಾರಾಟ ಮಾಡಿದ್ದರೆ, ನಾನು ಕೆ.ಜಿ.ಯೊಂದಕ್ಕೆ ₹ 20 ದರ ನಿಗದಿ ಮಾಡಿದ್ದೆ’ ಎನ್ನುತ್ತಾರೆ ರಾಮಚಂದ್ರ ಹೆಗಡೆ.

ಬಿದ್ರಕಾನ, ಕೋಡ್ಸರ, ಯಡಳ್ಳಿ, ಭೈರುಂಬೆ ಸೊಸೈಟಿ, ಹುಣಸೆಕೊಪ್ಪ ಹಾಲು ಡೇರಿಯಲ್ಲಿ ಕೂಡ ಮಗೆಕಾಯಿಗಳನ್ನು ಮಾರಾಟಕ್ಕೆ ಇಟ್ಟಿದ್ದೆ. ಅನೇಕರು ಖರೀದಿಸಿದರು. ವೈವಿಧ್ಯ ತಳಿಯ ಮಗೆಕಾಯಿ ಇಳುವರಿ ಚೆನ್ನಾಗಿ ಬಂತು. ಆದರೆ, ಕೆಲವು ತಳಿಗಳು ಬಲಿತ ಮೇಲೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಮಲೆನಾಡಿನ ಜನರು ಹಸಿರು ಮಗೆಕಾಯಿಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ, ಸ್ಥಳೀಯ ತಳಿಯ ರುಚಿ ಹಾಗೂ ಗುಣಧರ್ಮ ಹೊಂದಿದ್ದರೂ ಕೆಲವರು ಇದನ್ನು ಖರೀದಿಸಿಲು ಹಿಂದೇಟು ಹಾಕಿದರು. ಈಗಲೂ ನಾಲ್ಕು ಕ್ವಿಂಟಲ್‌ನಷ್ಟು ಮೊಗೆಕಾಯಿ ಸಂಗ್ರಹವಿದೆ ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರಿನ ಪ್ರೇಮನಾಥ ಕೃಷಿ ಫೌಂಡೇಷನ್ ನೆರವಿನಲ್ಲಿ ಇಲ್ಲಿನ ತೋಟಗಾರಿಕಾ ಕಾಲೇಜಿನಲ್ಲಿ ವಿವಿಧ ತಳಿಗಳ ಮಗೆಕಾಯಿ ಬೆಳೆಸಿ, ನಂತರ ಆಯ್ದ ತಳಿಗಳನ್ನು ರಾಮಚಂದ್ರ ಹೆಗಡೆ ಅವರ ಗದ್ದೆಯಲ್ಲಿ ಬೆಳೆಸಲಾಗಿತ್ತು. ಇದಕ್ಕೆ ಪ್ರಾಧ್ಯಾಪಕರಾದ ರತ್ನಾಕರ ಶೇಟ್, ಶಿವಾನಂದ ಹೊಂಗಲ್ ಮಾರ್ಗದರ್ಶನ ನೀಡಿದ್ದರು. ‘ಇಸ್ರೇಲ್ ಮಾದರಿಯಲ್ಲಿ ಸಾಂಬಾರು ಸೌತೆ ಬೆಳೆದರೆ ಅಧಿಕ ಇಳುವರಿ, ಗುಣಮಟ್ಟದ ಉತ್ಪನ್ನ ತೆಗೆಯಬಹುದು. ರಾಮಚಂದ್ರ ಹೆಗಡೆ ಅವರ ಗದ್ದೆಯಲ್ಲಿ 300 ಗ್ರಾಮ್‌ನಿಂದ 5 ಕೆ.ಜಿ ತೂಕದವರೆಗಿನ ಮಗೆಕಾಯಿಗಳು ಬೆಳೆದಿದ್ದವು’ ಎನ್ನುತ್ತಾರೆ ಅವರು.

ರಾಮಚಂದ್ರ ಹೆಗಡೆ ಅವರ ಸಂಪರ್ಕ ಸಂಖ್ಯೆ: 9448126829.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು