ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಂಗೆ’ ಸಂತೃಪ್ತಿಗೆ ಶಾಂತಿ ಹೋಮ

ಗಂಗಾವಳಿ ಪ್ರವಾಹ: ಹವನ ನೆರವೇರಿಸಿ ಮನೆಗೆ ಮರು ಪ್ರವೇಶಿಸಿದ ಸಂತ್ರಸ್ತರು
Last Updated 11 ಆಗಸ್ಟ್ 2021, 15:26 IST
ಅಕ್ಷರ ಗಾತ್ರ

ಅಂಕೋಲಾ: ಮೂರು ವರ್ಷಗಳಿಂದ ಸತತವಾಗಿ ಗಂಗಾವಳಿ ನದಿಯ ಪ್ರವಾಹದ ಕಾರಣ ಇಲ್ಲಿನ ನದಿ ತೀರದ ಜನರು ಕಂಗೆಟ್ಟಿದ್ದಾರೆ. ನೆರೆ ಉಂಟುಮಾಡಿದ ಹಾನಿಯಿಂದ ಕಂಗಾಲಾಗಿರುವ ಜನರು ಇನ್ನು ಮುಂದೆ ಈ ಸಂಕಷ್ಟ ಬಾರದಂತೆ ದೇವರ ಮೊರೆ ಹೋಗುತ್ತಿದ್ದಾರೆ. ನದಿಯ ಕಲುಷಿತ ನೀರು ನುಗ್ಗಿದ್ದರಿಂದ ಮೈಲಿಗೆ ಆಗಿರಬಹುದೆಂದು ಸುಮಾರು 30 ಮನೆಗಳಲ್ಲಿ ಶಾಂತಿಹೋಮ ನೆರವೇರಿಸಲಾಗಿದೆ.

ತಾಲ್ಲೂಕಿನಲ್ಲಿ ನೆರೆ ವಿಷಯ ಪ್ರಸ್ತಾಪವಾದಾಗ ಹಿರಿಯರು, 1961ರ ಮಹಾ ಪ್ರವಾಹವನ್ನು ನೆನಪ ಮಾಡಿಕೊಳ್ಳುವುದು ವಾಡಿಕೆಯಾಗಿದೆ. ಕೆಲವರು ತಮ್ಮ ವಯಸ್ಸುಗಳನ್ನು ಕಂಡುಕೊಳ್ಳಲು ಸಹ ಇದನ್ನು ಆಧಾರವಾಗಿಟ್ಟುಕೊಂಡಿದ್ದರು. ‘ನಾವು ಮಹಾಪೂರ ಬಂದ ವರ್ಷ ಜನಿಸಿದವರು’ ಎಂದು ಹೇಳಿಕೊಳ್ಳುವುದು ಸಾಮಾನ್ಯ.

ಈ ಬಾರಿಯ ಪ್ರವಾಹದ ಮಟ್ಟ ಅದನ್ನೂ ಮೀರಿದೆ. ಬದುಕಿನೊಂದಿಗೆ ಮನೆಯಲ್ಲಿರುವ ದೇವರ ವಿಗ್ರಹ, ಫೋಟೊಗಳೂ ಪ್ರವಾಹದಿಂದ ಜಲಾವೃತವಾಗಿವೆ. ಘಟ್ಟದ ಮೇಲಿನಿಂದ ಬರುವ ಕಲುಷಿತ ನೀರಿನಲ್ಲಿ ಮುಳುಗಿ ಮನೆಯಲ್ಲಿರುವ ದೇವರು, ಫೋಟೊಗಳು ಮಲಿನವಾಗಿವೆ ಎಂಬ ಭಾವನೆ ಮೂಡಿದೆ.

ಮನೆಯ ಮುಂದಿನ ತುಳಸಿಕಟ್ಟೆಯಲ್ಲಿ ಸಮಸ್ತ ದೇವರ ಪ್ರತೀಕವಾಗಿ ಸಿಪ್ಪೆ ಸಹಿತ ತೆಂಗಿನಕಾಯಿ ಇಟ್ಟು ಪೂಜಿಸುವುದು ಇಲ್ಲಿನ ಪದ್ಧತಿ. ಅದನ್ನು ಸ್ಥಳೀಯ ವೆಂಕಟರಮಣ ದೇವರಿಗೆ ಹೋಲಿಕೆ ಮಾಡಿಯೂ ಪೂಜಿಸಲಾಗುತ್ತದೆ. ದೀಪಾವಳಿಗಿಂತಲೂ ತಾಲ್ಲೂಕಿನಲ್ಲಿ ತುಳಸಿ ಕಾರ್ತಿಕೋತ್ಸವದ ಆಚರಣೆಗೆ ವಿಶೇಷ ಆದ್ಯತೆ ಇದೆ. ಈಗ ದೇವರ ಪ್ರತೀಕವಾದ ತೆಂಗಿನಕಾಯಿ ಪ್ರವಾಹದ ನೀರಿಗೆ ಕೊಚ್ಚಿಹೋಗಿದೆ. ಹೀಗಾಗಿ ವಿಘ್ನ ನಿವಾರಣೆಯಾಗಲಿ ಎಂದು ಸ್ಥಳೀಯರು ಮನೆಗಳಲ್ಲಿ ಶಾಂತಿ ಹೋಮ ನೆರವೇರಿಸುತ್ತಿದ್ದಾರೆ.

ತಾಲ್ಲೂಕಿನ ಶಿರೂರು ಮತ್ತು ಅಗ್ರಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೂಗ (ಕರ್ಕಿತುರಿ) ಗ್ರಾಮದ ಜನರು ಮನೆಗೆ ಪುರೋಹಿತರನ್ನು ಕರೆಸಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭಿಕವಾಗಿ ಒಂದಿಬ್ಬರು ಈ ವಿಧಾನ ಅನುಸರಿಸಿದರೆ, ತಮ್ಮ ಮನೆಗೂ ತೊಂದರೆಗಳು ಬಾರದಿರಲಿ ಎಂದು ಇತರರು ಅವರನ್ನು ಹಿಂಬಾಲಿಸುತ್ತಿದ್ದಾರೆ.

ಪಂಚಗವ್ಯ ಸಿಂಪಡಣೆ:

‘ಪ್ರವಾಹದಲ್ಲಿನ ಕಲುಷಿತ ನೀರು ಮನೆಗಳಿಗೆ ನುಗ್ಗಿದೆ. ಹಿಂದಿನ ಕಾಲದಲ್ಲಿ ಮನೆಗಳಿಗೆ ನೀರು ನುಗ್ಗಿದಾಗ ಹೋಮ– ಹವನಗಳನ್ನು ನೆರವೇರಿಸಲಾಗುತ್ತಿತ್ತು. ಇಲ್ಲವೇ ಪಂಚಗವ್ಯ ಸಿಂಪಡಿಸಿ ಶುದ್ಧ ಮಾಡಿಕೊಳ್ಳಲಾಗುತ್ತಿತ್ತು. ಸಾಂಕ್ರಾಮಿಕ ರೋಗಗಳು ಮತ್ತು ಪ್ರವಾಹ ಸಂದರ್ಭ ಮನೆಯಲ್ಲಿ ಸೇರಿಕೊಂಡ ವಿಷಜಂತುಗಳು ಬಾಧಿಸಬಾರದು. ದೇವರು ನೀರಿನಲ್ಲಿ ಮುಳುಗಿರುವುದರಿಂದ ಈಗ ಶಾಂತಿ ಹೋಮ ನೆರವೇರಿಸಲಾಗುತ್ತಿದೆ’ ಎಂದು ಅಗ್ರಗೋಣ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಂಜುನಾಥ ಹರಿಕಂತ್ರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT