ಸೋಮವಾರ, ಜನವರಿ 24, 2022
29 °C
ಮಾರಿಕಾಂಬಾ ದೇವಸ್ಥಾನದ ಪಾಕಶಾಲೆ ಪರಿಶೀಲಿಸಿದ ಅಧಿಕಾರಿಗಳು

ಶಿರಸಿ: ಸ್ವಚ್ಛತೆ ಕಾಯ್ದುಕೊಳ್ಳಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ದೇವಸ್ಥಾನಗಳಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದ ಭೋಜನದ ಗುಣಮಟ್ಟ ಪರಿಶೀಲಿಸುವ ಭೋಗ್ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಸೋಮವಾರ ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿದರು.

ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಭೋಗ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಕೆಲವೇ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಪೈಕಿ ಮಾರಿಕಾಂಬಾ ದೇವಾಲಯವೂ ಒಂದಾಗಿದೆ.

ಇಲ್ಲಿನ ಪಾಕಶಾಲೆಯಲ್ಲಿ ಕಾಯ್ದುಕೊಂಡಿರುವ ಸ್ವಚ್ಛತೆ, ಸುರಕ್ಷತೆ ಮತ್ತು ಪ್ರಸಾದ ಭೋಜನ ಸಿದ್ಧಪಡಿಸಲು ಬಳಸುವ ಪದಾರ್ಥಗಳ ಗುಣಮಟ್ಟ ಪರಿಶೀಲಿಸಲು ಅಧಿಕಾರಿಗಳು ಭೇಟಿ ನೀಡಿದ್ದರು.

‘ಊಟ ಸಿದ್ಧಪಡಿಸಲು ಬಳಸುವ ದಿನಸಿ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ಪಾಕಶಾಲೆಯ ಕಿಟಕಿಗಳಿಗೆ ಮೆಶ್ ಅಳವಡಿಸಲು ಸೂಚಿಸಲಾಗಿದೆ. ಭಕ್ತರಿಗೆ ಊಟಕ್ಕೆ ನೀಡುವ ತಟ್ಟೆ, ಲೋಟಗಳನ್ನು ಶುಚಿಗೊಳಿಸಲು ಮೂರು ವಾಶ್ ಬೇಸಿನ್ ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿ ಡಾ.ರಾಜಶೇಖರ ತಿಳಿಸಿದರು.

‘ಎರಡು ತಿಂಗಳ ಹಿಂದೆ ಭೇಟಿ ನೀಡಿ ಭೋಗ್ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ತಿಳಿಸಲಾಗಿತ್ತು. ಈ ಬಾರಿ ದೇವಸ್ಥಾನದವರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿವಳಿಕೆ ನೀಡಲಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಕೇಂದ್ರ ಸರ್ಕಾರದ ತಂಡವೊಂದು ದೇವಸ್ಥಾನಕ್ಕೆ ಭೇಟಿ ನೀಡಲಿದೆ. ಈ ವೇಳೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿದ್ದರೆ ಭೋಗ್ ಕಾರ್ಯಕ್ರಮದ ಅಡಿಯಲ್ಲಿ ಪ್ರಮಾಣ ಪತ್ರ ಸಿಗಲಿದೆ’ ಎಂದು ಅವರು ವಿವರಿಸಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿ ಅರುಣ ಕಾಶಿ ಭಟ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.