ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‌ನೀಲಿಕಲ್ಲು ಅಭಿವೃದ್ಧಿಗೆ ಪ್ರಾಯೋಗಿಕ ಪರೀಕ್ಷೆ

ಮೀನುಗಾರರ ಆದಾಯ ವೃದ್ಧಿಗೆ ಅರಣ್ಯ ಇಲಾಖೆಯ ಆಸಕ್ತಿ: ಬೇಳಬಂದರ್‌ನಲ್ಲಿ ‍ಪ್ರಾತ್ಯಕ್ಷಿಕೆ
Last Updated 8 ಜನವರಿ 2022, 19:30 IST
ಅಕ್ಷರ ಗಾತ್ರ

ಕಾರವಾರ: ‌ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಂಬಿರುವ ಮೀನುಗಾರರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೂ ಹೆಜ್ಜೆ ಮುಂದಿಟ್ಟಿದೆ. ನೀಲಿಕಲ್ಲು (ಗ್ರೀನ್ ಮಸಲ್ಸ್), ಕಲಗಾ (ಓಯ್ಸ್‌ಟರ್) ಮುಂತಾದ ಸಮುದ್ರ ಉತ್ಪನ್ನಗಳ ಅಭಿವೃದ್ಧಿಗೆ ಆಸಕ್ತಿ ತೋರಿದೆ.

ಪೌಷ್ಟಿಕಾಂಶಗಳಿಂದ ಕೂಡಿರುವ ನೀಲಿಕಲ್ಲು, ಕಲಗಾವನ್ನು ಮೀನುಗಾರರು ಸಮುದ್ರ, ಅಳಿವೆಯಿಂದ ಹಿಡಿದು ತರುತ್ತಾರೆ. ಆದರೆ, ನೀರಿನಲ್ಲಿ ಅವುಗಳ ಸಂಖ್ಯೆ ಹೆಚ್ಚಿಸಲು ಅತ್ಯಂತ ಕಡಿಮೆ ಪ್ರಯತ್ನಗಳಾಗಿವೆ. ಅಂಥದ್ದೊಂದು ಕೆಲಸವನ್ನು ಇಲಾಖೆಯು ಅಂಕೋಲಾ ತಾಲ್ಲೂಕಿನ ಬೇಳಬಂದರ್‌ನಲ್ಲಿ ಹಮ್ಮಿಕೊಂಡಿದೆ.

ಕುಂದಾಪುರದಿಂದ ತರಲಾದ ನೀಲಿಕಲ್ಲು ಮತ್ತು ಕಲಗಾ ಮರಿಗಳನ್ನು ದಾರದಲ್ಲಿ ಕಟ್ಟಿ (ರೆನ್ ಕಲ್ಚರ್ ಮಾದರಿ) ಸಮುದ್ರ ಹಿನ್ನೀರಿನ ನೈಸರ್ಗಿಕ ವಾತಾವರಣದಲ್ಲಿ ಜ.7ರಂದು ಬಿಡಲಾಗಿದೆ. ಅವುಗಳಿಗೆ ಮುಂದಿನ ಮೂರು ತಿಂಗಳು ಏನೂ ತೊಂದರೆಯಾಗದಂತೆ ರಕ್ಷಿಸಬೇಕು. ಈ ಅವಧಿಯಲ್ಲಿ ಅವು ಅಭಿವೃದ್ಧಿ ಹೊಂದಿ ಸಂತಾನಾಭಿವೃದ್ಧಿ ಮಾಡುತ್ತವೆ. ಇದರಿಂದ ಅವುಗಳ ಸಂಖ್ಯೆ ಹೆಚ್ಚುತ್ತದೆ.

‘ಕೇರಳದ ಬಹುತೇಕ ಕಡೆಗಳಲ್ಲಿ ಹಾಗೂ ಮಹಾರಾಷ್ಟ್ರದ ಸಿಂಧದುರ್ಗದಲ್ಲಿ ಇದೇ ಮಾದರಿಯಲ್ಲಿ ಬೆಳೆಸಲಾಗುತ್ತಿದೆ. ಅಲ್ಲಿನ ಮೀನುಗಾರರಿಗೂ ಉತ್ತಮ ಉಪ ಆದಾಯವನ್ನೂ ನೀಡುತ್ತಿದೆ. ಅದನ್ನು ಆಧಾರವಾಗಿಟ್ಟುಕೊಂಡು ಬೇಳಬಂದರ್‌ನಲ್ಲೂ ಪ್ರಾಯೋಗಿಕವಾಗಿ ಮರಿಗಳನ್ನು ನೀರಿಗೆ ಬಿಡಲಾಗಿದೆ’ ಎನ್ನುತ್ತಾರೆ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಮರೈನ್ ವಿಭಾಗ) ಪ್ರಮೋದ್.

‘ಈ ಪ್ರಯೋಗವು ಯಶಸ್ವಿಯಾದರೆ ಸ್ಥಳೀಯ ಮೀನುಗಾರರಿಗೆ ಅನುಕೂಲವಾಗಲಿದೆ. ಫಲಿತಾಂಶವನ್ನು ಪರಿಶೀಲಿಸಿ ಇದನ್ನು ಮುಂದುವರಿಸಲಾಗುವುದು. ಮೀನುಗಾರರು ತಮ್ಮ ಮನೆಗಳ ಬಳಿ ಸಮುದ್ರದಲ್ಲಿ ಪಂಜರಕೃಷಿ ಮಾದರಿಯಲ್ಲಿ ಬೆಳೆಸಲು ಸಾಧ್ಯವಿದೆ. ಇದು ಮೀನುಗಾರರಿಗೆ ಉಪ ಆದಾಯದ ದಾರಿಯನ್ನು ತೋರಿಸುವ ಕಾರ್ಯಕ್ರಮವೇ ವಿನಾ ಅರಣ್ಯ ಇಲಾಖೆಯಿಂದ ಯಾವುದೇ ಪ್ರೋತ್ಸಾಹಧನ, ಸಾಲ ಸೌಲಭ್ಯ ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

ಕಾಯ್ದೆಯ ಅರಿವು:‘ಅರಣ್ಯ ಇಲಾಖೆಯು, ‘ವನ್ಯಜೀವಿ ಸಂರಕ್ಷಣೆ ಕಾಯ್ದೆ 1972’ರ ಬಗ್ಗೆ ಮೀನುಗಾರರಿಗೆ ಅರಿವು ಮೂಡಿಸುತ್ತಿದೆ. ಆಮೆಗಳು ಸಮುದ್ರ ದಂಡೆಯಲ್ಲಿ ಗೂಡುಕಟ್ಟುವ ಸಮಯ ಇದಾಗಿದೆ. ಅವುಗಳ ಮೊಟ್ಟೆಗಳನ್ನು ರಕ್ಷಿಸಿ ಇಲಾಖೆಗೆ ನೀಡಿದರೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿವಳಿಕೆ ನೀಡಲಾಗುತ್ತಿದೆ’ ಎಂದೂ ಹೇಳಿದ್ದಾರೆ.

ಉಪ್ಪಿನಂಶ ಹೆಚ್ಚು ಬೇಕು:‘ನೀಲಿಕಲ್ಲು ಮತ್ತು ಕಲಗಾ ಬೆಳೆಯಲು ನೀರಿನಲ್ಲಿ ಲವಣಾಂಶದ ಪ್ರಮಾಣವು ಶೇ 15ಕ್ಕಿಂತ ಹೆಚ್ಚಿರಬೇಕು. ಕಾರವಾರದ ಅಂಕೋಲಾ ಭಾಗದಲ್ಲಿ ಯಾವುದೇ ಜಲಾಶಯಗಳಿಲ್ಲದ ಕಾರಣ ಸೂಕ್ತವಾಗಿದೆ. ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಕಾರದಲ್ಲಿ ಬೇಳಬಂದರ್‌ನಲ್ಲಿ ಅಧ್ಯಯನ ಮಾಡಲಾಗಿದೆ. ಅಲ್ಲಿ ನೀರಿನಲ್ಲಿ ಉಪ್ಪಿನ ಪ್ರಮಾಣವು ಶೇ 20ಕ್ಕಿಂತ ಅಧಿಕ ಇರುವುದು ಕಂಡುಬಂದಿದೆ. ಹಾಗಾಗಿ ಅಲ್ಲಿ ಈ ಜಲಚರಗಳು ಚೆನ್ನಾಗಿ ಬೆಳೆಯುವ ನಿರೀಕ್ಷೆಯಿದೆ’ ಎಂದು ಆರ್.ಎಫ್.ಒ ಪ್ರಮೋದ್ ‘ಪ್ರಜಾವಾಣಿ’ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂಕೋಲಾ ಭಾಗದಲ್ಲಿ ಯಾವುದೇ ಜಲಾಶಯಗಳು ಇಲ್ಲದಿರುವುದೂ ಅನುಕೂಲವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT