ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯ; ಮಾಜಿ ಸಚಿವ ಪ್ರಭಾಕರ ರಾಣೆ ನಿಧನ

Last Updated 5 ಸೆಪ್ಟೆಂಬರ್ 2022, 10:28 IST
ಅಕ್ಷರ ಗಾತ್ರ

ಕಾರವಾರ: ಮಾಜಿ ಸಚಿವ, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಪ್ರಭಾಕರ ರಾಣೆ (81), ತಾಲ್ಲೂಕಿನ ಸಿದ್ದರ ಗ್ರಾಮದ ಮನೆಯಲ್ಲಿ ಸೋಮವಾರ ನಿಧನರಾದರು. ಜ್ವರ ಹಾಗೂ ವಯೋಸಹಜ ಅನಾರೋಗ್ಯಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವು ದಿನಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು.

ಅವರಿಗೆ ಪತ್ನಿ ಇದ್ದಾರೆ. ಅಂತ್ಯಕ್ರಿಯೆಯು ಸಿದ್ದರ ಗ್ರಾಮದಲ್ಲಿ ಸೆ.6ರಂದು ಬೆಳಿಗ್ಗೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾರವಾರ– ಜೊಯಿಡಾ ವಿಧಾನಸಭಾ ಕ್ಷೇತ್ರದಿಂದ ‘ಕ್ರಾಂತಿರಂಗ’ ಪಕ್ಷದಿಂದ ಒಂದು ಸಲ, ಕಾಂಗ್ರೆಸ್ ಪಕ್ಷದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರು. 1993ರ ಅವಧಿಯಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಸಚಿವರಾಗಿದ್ದರು. ಬಳಿಕ ರಾಜಕೀಯದಲ್ಲಿ ಹಿನ್ನಡೆ ಕಂಡಿದ್ದ ಅವರು, ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ.ಗೆ ಪಕ್ಷಾಂತರವಾಗಿದ್ದರು. ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು.

ರಾಣೆ ಅವರು ಸಿದ್ದರ ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಮಿತಿ ಸಂಸ್ಥೆಯ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಸಂಸ್ಥಾ‍ಪಕ ಅಧ್ಯಕ್ಷರಾಗಿದ್ದರು. ಈ ಸಮಿತಿಯು ಈಗ ಉತ್ತರ ಕನ್ನಡದ ವಿವಿಧೆಡೆ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಅಲ್ಲದೇ ಸಿದ್ದರ ಗ್ರಾಮದಲ್ಲಿ ಮೂಗ ಮತ್ತು ಕಿವುಡ ಮಕ್ಕಳ ಶಾಲೆಯನ್ನೂ ತೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT