ಬುಧವಾರ, ಸೆಪ್ಟೆಂಬರ್ 22, 2021
28 °C
ಅತಿವೃಷ್ಟಿಗೆ 35 ಹೆಕ್ಟೇರ್ ಪ್ರದೇಶದ ಬೆಳೆ ನಾಶ

ಶುಂಠಿ ಬೆಳೆಗಾರರ ಕಣ್ಣಲ್ಲಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಪ್ರಮುಖ ಬೆಳೆಯಲ್ಲೊಂದಾದ ಶುಂಠಿಗೆ ಅತಿವೃಷ್ಟಿ ದೊಡ್ಡ ಪೆಟ್ಟು ನೀಡಿದೆ. ತೋಟಗಾರಿಕಾ ಇಲಾಖೆ ಅಂದಾಜಿನ ಪ್ರಕಾರ 35 ಹೆಕ್ಟೇರ್‌ಗೂ ಹೆಚ್ಚು ಶುಂಠಿ ಬೆಳೆ ಸಂಪೂರ್ಣ ನಷ್ಟವಾಗಿದೆ.

ಸುಮಾರು 160 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಈ ಪೈಕಿ ಶೇ 20ರಷ್ಟು ಪ್ರದೇಶ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ನಾಶವಾಗಿದೆ. ಬಿತ್ತನೆ ಮಾಡಲಾಗಿದ್ದ ಗದ್ದೆಯ ಮೇಲೆ ಅಡಿಗಳಷ್ಟು ನೀರು ನಿಂತು, ಕೆಸರು ರಾಶಿ ಆವರಿಸಿಕೊಂಡ ಪರಿಣಾಮ ಮೊಳಕೆ  ಒಡೆದಿದ್ದ ಗಿಡಗಳು ಕೊಳೆಯುವ ಹಂತಕ್ಕೆ ತಲುಪಿವೆ.

ಬನವಾಸಿ, ಭಾಶಿ, ಅಂಡಗಿ, ಕಲಕರಡಿ, ಕಿರವತ್ತಿ, ಪಡಂಬೈಲ್, ಹೆಬ್ಬತ್ತಿ, ಬಂಕನಾಳ ಸೇರಿ ಶುಂಠಿ ಬೆಳೆಯುವ ಪ್ರದೇಶದ ನೂರಾರು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಕೆಲವು ರೈತರು ಅನಾನಸ್ ಬಿಟ್ಟು ಶುಂಠಿ ಬೆಳೆದಿದ್ದರೆ, ಹಲವರು ಮೆಕ್ಕೆಜೋಳಕ್ಕೆ ಪರ್ಯಾಯವಾಗಿ ಈ ಬಾರಿ ಶುಂಠಿ ನಾಟಿ ಮಾಡಿದ್ದರು.

‘ಸತತ ಮಳೆಯ ಪರಿಣಾಮ ಶುಂಠಿ ಗಿಡಕ್ಕೆ ಹಾನಿಯುಂಟಾಗಿದೆ. ಹೆಚ್ಚು ನೀರು ನಿಂತಿದ್ದರಿಂದ ಗಿಡ ಬೇರು ಸಹಿತ ಕೊಳೆತು ಹೋಗಿವೆ. ಬೆಳೆನಷ್ಟದ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದ್ದಾರೆ.

‘ವರ್ಷದ ಆದಾಯ ನಂಬಿ ಬಿತ್ತನೆ ಮಾಡಿದ್ದ ಗಿಡಗಳು ಬೆಳವಣಿಗೆ ಹಂತದಲ್ಲಿ ನಷ್ಟವಾಗಿದೆ. ಕೃಷಿ ಜಮೀನಿನಲ್ಲಿ ಸದ್ಯ ಬೇರೆ ಬೆಳೆ ತೆಗೆಯುವುದೂ ಕಷ್ಟ. ಲಕ್ಷಾಂತರ ಖರ್ಚು ಮಾಡಿದ್ದು ವ್ಯರ್ಥವಾಗಿದೆ. ರೈತರಿಗೆ ಕೂಡಲೆ ಸರ್ಕಾರ ಪರಿಹಾರ ಬಿಡುಗಡೆಗೊಳಿಸಬೇಕು’ ಎಂದು ರೈತ ಸಂಘದ ಮುಖಂಡ ರಾಘವೇಂದ್ರ ನಾಯ್ಕ ಕಿರವತ್ತಿ ಒತ್ತಾಯಿಸಿದ್ದಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು