ಗುರುವಾರ , ಡಿಸೆಂಬರ್ 3, 2020
24 °C
ಹೆಸರನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ತೆಗೆಲು ಮನವಿ

‘ಮತಾಂತರ ಆದವರಿಗೆ ಸೌಲಭ್ಯ ನಿಲ್ಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಧರ್ಮ ಮತಾಂತರ ಆಗಿರುವ ವ್ಯಕ್ತಿಗಳ ಹೆಸರನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ತೆಗೆಯಬೇಕು. ಪರಿಶಿಷ್ಟ ಪಂಗಡಗಳಿಗೆ ಸಿಗುವ ಸೌಲಭ್ಯಗಳನ್ನು ಅವರಿಗೆ ಸ್ಥಗಿತಗೊಳಿಸಬೇಕು’ ಎಂದು ಯಲ್ಲಾಪುರದ ಗಿರಿಜನ ಸುರಕ್ಷಾ ವೇದಿಕೆ ಒತ್ತಾಯಿಸಿದೆ.

ಈ ಸಂಬಂಧ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಾರಂಪರಿಕ ಪರಿಶಿಷ್ಟ ಪಂಗಡಗಳು ಪಡೆಯುತ್ತಿರುವುದಕ್ಕಿಂತ ಹೆಚ್ಚು ಸೌಲಭ್ಯಗಳನ್ನು ಮತಾಂತರಗೊಂಡ ಪಂಗಡಗಳು ಪಡೆಯುತ್ತಿವೆ. ಪರಿಶಿಷ್ಟ ಜಾತಿಗಳ ವಿಷಯದಲ್ಲಿ ಇರುವ ರೀತಿಯ ಸ್ಪಷ್ಟತೆಯೇ ಪರಿಶಿಷ್ಟ ಪಂಗಡಗಳ ಸೌಲಭ್ಯಗಳ ವಿಚಾರದಲ್ಲೂ ಇರಬೇಕು. ಈ ಅನ್ಯಾಯವನ್ನು ಸರಿಪಡಿಸಿ’ ಎಂದು ತಿಳಿಸಿದರು.

ಮನವಿಯಲ್ಲೇನಿದೆ?: ‘50 ವರ್ಷಗಳ ಹಿಂದೆಯೇ ಬಿಹಾರದ ಗಿರಿಜನ ನಾಯಕ, ಮಾಜಿ ಕೇಂದ್ರ ಸಚಿವ ಕಾರ್ತಿಕ್ ಉರಾಂ ಈ ವಿಚಾರವಾಗಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು. ಇದರ ಬಗ್ಗೆ ಅವರು ಬೀಸ್ ವರ್ಷ್ ಕೀ ಕಾಲೀ ರಾತ್ (20 ವರ್ಷಗಳ ಕರಾಳ ರಾತ್ರಿ) ಎಂಬ ಪುಸ್ತಕವನ್ನು ಪ್ರಕಟಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘1967ರಲ್ಲಿ ಈ ಜ್ಞಾಪಕ ಪತ್ರಕ್ಕೆ 235 ಸಂಸದರು ಸಹಿ ಮಾಡಿ ಬೆಂಬಲಿಸಿದ್ದರು. 1956ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆದೇಶಗಳ ಮಸೂದೆಗೆ ತಿದ್ದುಪಡಿ ಮಾಡಲಾಗಿತ್ತು. ಅದರ ಪ್ರಕಾರ ಹಿಂದೂ, ಸಿಖ್ ಧರ್ಮವನ್ನು ತ್ಯಜಿಸಿ ಕ್ರೈಸ್ತ ಅಥವಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿದವರನ್ನು ಪರಿಶಿಷ್ಟ ಪಂಗಡದವರನ್ನಾಗಿ ಪರಿಗಣಿಸಬಾರದು ಎಂದು ತಿಳಿಸಲಾಗಿದೆ. ಪರಿಶಿಷ್ಟ ಪಂಗಡದ ವ್ಯಕ್ತಿಯು ಕ್ರೈಸ್ತ ಮತಕ್ಕೆ ಮತಾಂತರಗೊಂಡರೆ ಭಾರತೀಯ ಕ್ರೈಸ್ತನಾಗುತ್ತಾನೆ. ಆತನಿಗೆ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸೌಲಭ್ಯಗಳು ಲಭಿಸಿದರೆ ಅದು ಅಸಂವಿಧಾನಿಕವಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಪ್ರಮುಖರಾದ ನಾರಾಯಣ ಸಿದ್ದಿ, ಬಾಬು ಸಿದ್ದಿ, ದೊಂಡು ಪಾಟೀಲ, ನಾರಾಯಣ ಮರಾಠಿ, ಸಿದ್ದು ಜೊರೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.