ಮಂಗಳವಾರ, ಮೇ 18, 2021
23 °C
ಪ್ರತಿ ವಿಷಯಕ್ಕೆ ಪ್ರತ್ಯೇಕ ಕೊಠಡಿ; ಶಾಲೆಯ ಸುತ್ತಮುತ್ತ ಸಾರ್ವಜನಿಕರಿಂದ ಸ್ವಯಂಪ್ರೇರಿತ ತಂಬಾಕು ನಿಷೇಧ

ಖಾಸಗಿ ಶಾಲೆಗಳನ್ನೂ ನಾಚಿಸುವ ಹಳ್ಳಿಯ ಸರ್ಕಾರಿ ಶಾಲೆ!

ದೇವರಾಜ ನಾಯ್ಕ Updated:

ಅಕ್ಷರ ಗಾತ್ರ : | |

ಗಣಿತ ಕೊಠಡಿಯಲ್ಲಿ ವಿದ್ಯಾಭ್ಯಾದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು

ಕಾರವಾರ: ತಾಲ್ಲೂಕಿನಿಂದ 30 ಕಿ.ಮೀ. ದೂರದಲ್ಲಿರುವ ಬೇಳೂರು ಗ್ರಾಮದಲ್ಲಿನ ಸರ್ಕಾರಿ ಶಾಲೆಯು ಪಟ್ಟಣದ ಅಥವಾ ಖಾಸಗಿ ಶಾಲೆಯನ್ನೂ ನಾಚಿಸುವಷ್ಟರ ಮಟ್ಟಿಗೆ ಸಿದ್ಧಗೊಂಡಿದೆ.

ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಣ ಶಾಲೆ ಎಲ್ಲರ ಗಮನ ಸೆಳೆಯುತ್ತಿದೆ. ಶಾಲೆಯ ಆವರಣ ಹೊಕ್ಕರೆ ಸುತ್ತಲೂ ಹಚ್ಚ ಹಸಿರಿನ ಹೊದಿಕೆಯ ಅಂಗಳ, ಹೂವು, ಹಣ್ಣುಗಳ ಹಸಿರು ಗಿಡಗಳು, ಕೇಸರಿ, ಬಿಳಿ, ಹಸಿರಿನ ಧ್ವಜದ ಕಟ್ಟೆ, ಅದರ ಎದುರು ಸಿಮೆಂಟ್‌ನಲ್ಲಿ ಸಿದ್ಧಪಡಿಸಿರುವ ಭಾರತದ ಚಿತ್ರ ಶಾಲೆಗೆ ಬರುವವರನ್ನು ಸ್ವಾಗತಿಸುತ್ತದೆ. ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಲು ಒಂದು ಶಾಲೆಯಲ್ಲಿ ಏನೇನಿರಬೇಕೋ ಅದೆಲ್ಲವೂ ಇಲ್ಲಿವೆ ಎಂದು ಪಾಲಕರೂ ಹರ್ಷಪಡುತ್ತಾರೆ.

ವಿಷಯಕ್ಕೊಂದು ಕೊಠಡಿ: ಈ ಶಾಲೆಯ ವಿಶೇಷ ಎಂದರೆ, ಇಲ್ಲಿ ಪ್ರತಿ ವಿಷಯಕ್ಕೂ ಒಂದೊಂದು ಕೊಠಡಿ ಇದೆ. ಗಣಿತ, ವಿಜ್ಞಾನ, ಇಂಗ್ಲಿಷ್, ಕನ್ನಡ ಹೀಗೆ ಎಲ್ಲ ಭಾಷೆಗಳಿಗೂ ಪ್ರತ್ಯೇಕ ಕೊಠಡಿಗಳಿವೆ. ಈ ಕೊಠಡಿಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ಎಲ್ಲ ಸಾಮಗ್ರಿಗಳನ್ನು, ಪುಸ್ತಕಗಳನ್ನು ಜೋಡಿಸಿಡಲಾಗಿದೆ.

ಉದಾಹರಣೆಗೆ, ವೇಳಾ ಪಟ್ಟಿಯಲ್ಲಿ ಗಣಿತ ವಿಷಯ ಇದ್ದಾಗ ಒಂದು ತರಗತಿಯ ಮಕ್ಕಳು ಗಣಿತದ ಕೊಠಡಿಗೆ ತೆರಳುತ್ತಾರೆ. ಅಲ್ಲಿ ಗಣಿತ ಶಿಕ್ಷಕರ ಬೋಧನೆ ಮುಗಿದ ಬಳಿಕ ವೇಳಾ ಪಟ್ಟಿಯಂತೆ ಇನ್ನೊಂದು ವಿಷಯದ ಕೊಠಡಿಗೆ ತೆರಳುತ್ತಾರೆ. ಹೀಗೆ, ಇದು ಮಕ್ಕಳಲ್ಲಿ ಜ್ಞಾನ ವೃದ್ಧಿಸಲೂ ಸಹಕಾರಿಯಾಗಿದೆ ಎನ್ನುತ್ತಾರೆ ಶಿಕ್ಷಕರು.

ಕಸ ವಿಂಗಡಣೆ ಪಾಠ: ಶಾಲೆಯಲ್ಲಿ ಹಸಿ ಕಸ, ಒಣ ಕಸಕ್ಕೆ ಪ್ರತ್ಯೇಕ ತೊಟ್ಟಿಗಳನ್ನು ಇಡಲಾಗಿದೆ. ಹಸಿ ಕಸಕ್ಕೆ ಹಸಿರು ಹಾಗೂ ಒಣ ಕಸಕ್ಕೆ ಕೆಂಪು ಬಣ್ಣ ಬಳಿದ ತೊಟ್ಟಿಗಳನ್ನು ಇಡಲಾಗಿದೆ. ಕಸ ವಿಂಗಡನೆ ಮಾಡಿಯೇ ವಿದ್ಯಾರ್ಥಿಗಳು ತೊಟ್ಟಿಗೆ ಅದನ್ನು ಸುರಿಯುತ್ತಾರೆ. ತೊಟ್ಟಿಯಲ್ಲಿ ಹಸಿ ಕಸ ತುಂಬಿದ ಬಳಿಕ ಅದನ್ನು ಗೊಬ್ಬರವನ್ನಾಗಿ ಗಿಡಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಒಣ ಕಸವನ್ನು ದೂರಕ್ಕೆ ಕೊಂಡೊಯ್ದು ಸುಡುವ ಮೂಲಕ ವಿಲೇವಾರಿ ಮಾಡಲಾಗುತ್ತದೆ.

ಸಾರ್ವಜನಿಕರ ಸಹಕಾರ: ಈ ಶಾಲೆ ಹೀಗೆ ಅಂದಗೊಂಡಿರಲು, ಎಲ್ಲರ ಗಮನ ಸೆಳೆಯಲು ಸಾರ್ವಜನಿಕರ ಸಹಕಾರ ಕೂಡ ಇದೆ. ಶಾಲೆಯ ಸುತ್ತಮುತ್ತ ಎಲ್ಲಿಯೂ ತಂಬಾಕು ಅಥವಾ ಅದರ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಲಿ, ಬಳಕೆ ಮಾಡುವುದಾಗಲಿ ಇಲ್ಲ.

‘ನಾವೆಲ್ಲ ಅವಿದ್ಯಾವಂತರು. ನಮ್ಮ ಮಕ್ಕಳಾದರೂ ಚೆನ್ನಾಗಿ ವಿದ್ಯೆ ಕಲಿಯಬೇಕು ಎನ್ನುವುದು ನಮ್ಮಾಸೆ. ದೊಡ್ಡವರು ತಂಬಾಕು ಸೇವನೆ ಮಾಡುತ್ತಾರೆಂದು ಕಲಿಯುವ ಮಕ್ಕಳಿಗೆ ಅದರಿಂದ ತೊಂದರೆ ಆಗ ಕೂಡದು. ಹೀಗಾಗಿ, ಶಾಲೆಯ ಆವರಣ ಹಾಗೂ ಸುತ್ತಮುತ್ತ ತಂಬಾಕನ್ನು ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ನಿಷೇಧಿಸಿಕೊಂಡಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಅಂಗಡಿಕಾರ ಸಂತೋಷ ಗೌಡ.

ಸ್ಪಂದಿಸುವ ಎಸ್‌ಡಿಎಂಸಿ: ‘ಶಾಲೆ ಇಷ್ಟೆಲ್ಲ ಅಭಿವೃದ್ಧಿಗೊಂಡಿದೆಯೆಂದರೆ ಅದರಲ್ಲಿ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಹಾಗೂ ಶಿಕ್ಷಕರ ಶ್ರಮವಿದೆ. ಅವರಿಂದಲೇ ಇವೆಲ್ಲ ಸಾಧ್ಯವಾಗಿದೆ. ಪ್ರತಿಯೊಂದು ಯೋಜನೆಯನ್ನು ಶಾಲೆಯಲ್ಲಿ ಹಮ್ಮಿಕೊಂಡಾಗ ಎಸ್‌ಡಿಎಂಸಿಯಿಂದ ಉತ್ತಮ ಸ್ಪಂದನೆ ದೊರಕುತ್ತದೆ. ಇದು ನಮಗೆ ಇನ್ನಷ್ಟು ಕಾರ್ಯ ಮಾಡಲು ಪ್ರೇರೇಪಿಸುತ್ತದೆ’ ಎನ್ನುತ್ತಾರೆ ಶಾಲೆಯ ಶಿಕ್ಷಕ ಉಮೇಶ ಗುನಗಿ.

ಮೈದಾನಕ್ಕೆ ಬೇಡಿಕೆ...

ಶಾಲೆಯಲ್ಲಿ ಎಲ್ಲವೂ ಇದ್ದು, ಆಟದ ಮೈದಾನದ ಕೊರತೆಯೊಂದು ಶಿಕ್ಷಕರು, ಪಾಲಕರು ಹಾಗೂ ಮಕ್ಕಳನ್ನು ಚಿಂತೆಗೆ ತಳ್ಳಿದೆ. ಶಾಲೆಯ ಆವರಣದ ಎದುರು ಮೈದಾನಕ್ಕೆ ಸ್ಥಳವಿದೆ. ಆದರೆ, ಅದನ್ನು ಸಮತಟ್ಟು ಮಾಡಿ ಶಾಲೆಗೆ ನೀಡಬೇಕು ಎನ್ನುವುದು ಶಿಕ್ಷಕರ ಆಗ್ರಹವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು