ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತರಣೆ ಸ್ಥಗಿತ: ಗುತ್ತಿಗೆದಾರ ನಾಪತ್ತೆ

ವಿಟ್ಲ–ಕಬಕ ರಸ್ತೆ; ಮೊದಲ ಮಳೆಗೇ ಕೊಚ್ಚಿ ಹೋದ ಜಲ್ಲಿ
Last Updated 9 ಜೂನ್ 2018, 6:41 IST
ಅಕ್ಷರ ಗಾತ್ರ

ವಿಟ್ಲ: ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ವಿಟ್ಲ-ಕಬಕ ರಸ್ತೆಗಳ ಕಾಮಗಾರಿ ಗುತ್ತಿಗೆದಾರ ದಿಢೀರ್‌ ಕಾಮಗಾರಿ ಸ್ಥಗಿತಗೊಳಿಸಿ ನಾಪತ್ತೆಯಾಗಿದ್ದಾರೆ, ರಸ್ತೆಗೆ ಹಾಸಲಾದ ಜಲ್ಲಿಗಳು ಮಳೆಗೆ ಕೊಚ್ಚಿ ಹೋಗಿವೆ.

ಜನಪ್ರತಿನಿಧಿಗಳಿಗೆ ಚುನಾವಣೆ, ನೀತಿ ಸಂಹಿತೆ. ಅಧಿಕಾರಿಗಳಿಗೆ ಚುನಾವಣೆಯ ಕರ್ತವ್ಯ, ಗುತ್ತಿಗೆದಾರ ಮೊಬೈಲ್ ಫೋನ್‌ ಸ್ಥಗಿತಗೊಳಿಸಿ ನಾಪತ್ತೆ. ಈಗ ವಿಟ್ಲ-ಪುತ್ತೂರು ರಸ್ತೆಯ ಶೋಚನೀಯ ಸ್ಥಿತಿಯನ್ನು ಕಂಡು ವಾಹನ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭಗೊಂಡ ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸುರತ್ಕಲ್ನಿಂದ ಬಿ.ಸಿ ರೋಡ್‌ ವರೆಗೆ ಕೆಲಸ ಬಹುತೇಕ ಮುಗಿದಿದೆ. ಒಟ್ಟು ₹18 ಕೋಟಿ ಅನುದಾನದಲ್ಲಿ 42 ಕಿ.ಮೀ ರಸ್ತೆ ವಿಸ್ತರಣೆ ಹಾಗೂ ಡಾಮರ್‌ ಹಾಕುವ ಕಾಮಗಾರಿ ಆಗಬೇಕಿದೆ.

5.5 ಮೀಟರ್‌ ಅಗಲವಿರುವ ರಸ್ತೆಯನ್ನು 7 ಮೀಟರ್‌ಗೆ ವಿಸ್ತರಿಸುವ ಯೋಜನೆ ಇದಾಗಿದ್ದು, ಮೊದಲಿಗೆ ಭರದಿಂದ ಕಾಮಗಾರಿ ಸಾಗಿತ್ತು. ವಿಟ್ಲದಿಂದ ಕಬಕ ವರೆಗೆ ರಸ್ತೆಯ ಎರಡೂ ಬದಿಗಳನ್ನು ಕೊರೆಯಲಾಗಿತ್ತು. ಬಳಿಕ ಕೆಲವು ಕಡೆಗಳಿಗೆ ಜಲ್ಲಿಗಳನ್ನು ಸುರಿಯಲಾಗಿತ್ತು.

‘ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೋಡಿ ಯಂತ್ರ ಹಾಗೂ ಕಾರ್ಮಿಕರೊಂದಿಗೆ ಗುತ್ತಿಗೆದಾರ ನಾಪತ್ತೆಯಾಗಿದ್ದು, ಸ್ಥಗಿತಗೊಂಡ ಕಾಮಗಾರಿ ಮತ್ತೆ ಮುಂದುವರೆಯಲಿಲ್ಲ. ಇತ್ತೀಚೆಗೆ ರಸ್ತೆ ಬದಿಗೆ ಹಾಕಲಾದ ಜಲ್ಲಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.  ವಿಟ್ಲದಿಂದ ಕಬಕ ವರೆಗೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ’ ಸಾರ್ವಜನಿಕರು ದೂರಿದ್ದಾರೆ.

ವಿಟ್ಲದಿಂದ ಕಬಕ ವರೆಗಿನ ರಸ್ತೆ ತೀರಾ ಇಕ್ಕಟ್ಟಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆಗಳಿಲ್ಲದೆ ಹೊಂಡಗಳು, ತೋಟಗಳು, ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವ ತೋಡುಗಳಂತಾಗಿವೆ. ಅರೆಬರೆ ಕಾಮಗಾರಿ ನಡೆಸಿದ್ದರಿಂದ ರಸ್ತೆಯಲ್ಲಿ ನೀರು ಶೇಖರಣೆಗೊಂಡು ರಸ್ತೆ ಬದಿಯನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೊತ್ತ ನೀರಿನಲ್ಲಿ ಹೋಮ ಮಾಡಿದಂತ್ತೆ ವ್ಯರ್ಥವಾಗಿದೆ ಎಂದು ಸ್ಥಳೀಯರು, ಪ್ರಯಾಣಿಕರು ದೂರಿದ್ದಾರೆ.

ಗುತ್ತಿಗೆದಾರನಿಗೆ ನೋಟಿಸ್

‘ಗುತ್ತಿಗೆದಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಸಂಪರ್ಕಕ್ಕೇ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮೇಲಧಿಕಾರಿಗಳ ಮೂಲಕ ವರದಿ ಮಾಡಲಾಗಿದೆ. ಅಲ್ಲಿಂದ ಆದೇಶ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಮಳೆ ಬರುವುದಕ್ಕಿಂತ ಮೊದಲು ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಜಿನಿಯರ್ ಪ್ರೀತಂ ತಿಳಿಸಿದ್ದಾರೆ.

ರಸ್ತೆಯಲ್ಲಿ ದೊಡ್ಡ ಹೊಂಡ

ರಸ್ತೆಗೆ ಹಾಕಿದ ಜಲ್ಲಿ ಮಣೆ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ವಿಟ್ಲ ಸಮೀಪದ ಚಂದಳಿಕೆ, ಕಲ್ಲಕಟ್ಟ, ಕಂಬಳಬೆಟ್ಟು ಪ್ರದೇಶಗಳಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣಗೊಂಡು  ವಾಹನ ಚಾಲಕರು, ಪ್ರಯಾಣಿಕರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ.

ಕಾಮಗಾರಿಗಳು ಕಳಪೆಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆಗೆ ಸಜ್ಜಾಗಿದ್ದೇವೆ
ಶಾಕೀರ್ ಅಳಕೆಮಜಲು, ಸ್ಥಳೀಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT