ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಲಕೊಪ್ಪದಲ್ಲಿ ಆನೆ ಹಿಂಡು ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

ಅಡಿಕೆ ತೋಟ, ಗದ್ದೆಗೆ ಹಾನಿ
Last Updated 25 ಮಾರ್ಚ್ 2022, 14:05 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬಿಸಲಕೊಪ್ಪ ಭಾಗದಲ್ಲಿ ಗುರುವಾರದಿಂದ ಆನೆಗಳ ಗುಂಪೊಂದು ಬೀಡು ಬಿಟ್ಟಿದೆ. ಅಡಿಕೆ ತೋಟ, ಗದ್ದೆಗಳಿಗೆ ನುಗ್ಗಿದ ಆನೆಗಳಿಂದ ಹತ್ತಾರು ಮರಗಳು ಮುರಿದು ಬಿದ್ದಿವೆ.

ಕಾತೂರ ಭಾಗದಿಂದ ಆನೆಗಳ ಹಿಂಡು ಬಂದಿದ್ದು ಬೆಣಗಿ ಗ್ರಾಮದ ಮುಖಾಂತರ ಬಿಸಲಕೊಪ್ಪ ಪ್ರವೇಶಿಸಿವೆ. ಒಂದು ಗಂಡು, ಎರಡು ಹೆಣ್ಣು ಆನೆಗಳ ಜತೆಗೆ ಮರಿ ಆನೆಯೂ ಇದೆ. ರಸ್ತೆ, ಕಾಡಿನ ಮಾರ್ಗವಾಗಿ ಬಂದಿರುವ ಆನೆಗಳು ಬಿಸಲಕೊಪ್ಪ ಗ್ರಾಮದ ವಿನಾಯಕ ಭಟ್ಟ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿವೆ. ಮಳಲಗಾಂವ ಭಾಗದಲ್ಲಿ ಹಲವು ರೈತರ ಕೃಷಿಭೂಮಿಗೆ ಹಾನಿ ಉಂಟುಮಾಡಿದೆ.

‘ಆನೆಗಳ ಗುಂಪಿನ ಓಡಾಟದ ಪರಿಣಾಮ ತೋಟಕ್ಕೆ ಹಾನಿಯಾಗಿದೆ. ನೂರಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಮುರಿದು ಹಾಕಿವೆ. ಬೆಳವಣಿಗೆ ಹಂತದಲ್ಲಿದ್ದ ಹತ್ತಾರು ಅಡಿಕೆ ಗಿಡಗಳು ಮುರಿದು ಬಿದ್ದಿವೆ’ ಎಂದು ವಿನಾಯಕ ಭಟ್ಟ ಹೇಳಿದರು.

ಬಿಸಲಕೊಪ್ಪದಲ್ಲಿ ಹಾವಳಿ ಎಬ್ಬಿಸಿದ ಬಳಿಕ ಆನೆಗಳ ಹಿಂಡು ಕುಪ್ಪಳ್ಳಿ, ಬೀಳೂರು ಭಾಗಕ್ಕೆ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೇಸಿಗೆ ಆರಂಭಗೊಂಡ ಬಳಿಕ ಈ ಭಾಗದಲ್ಲಿ ಆನೆಗಳ ಓಡಾಟ ಹೆಚ್ಚುತ್ತಿದೆ. ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಕಳೆದ ವರ್ಷ ಆನೆಗಳು ಬಿಸಲಕೊಪ್ಪ ಭಾಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಭಾಗದಲ್ಲಿ ಆನೆ ಕಾಣಿಸಿಕೊಳ್ಳುವುದು ಹೊಸತಲ್ಲ. ಆನೆಗಳ ಹಿಂಡನ್ನು ಹಾವೇರಿ ಕಡೆಗೆ ಓಡಿಸುವ ಪ್ರಯತ್ನ ಮಾಡಲಾಗಿದೆ. ಬೀಳೂರು ಭಾಗದಲ್ಲಿ ಅವು ಬೀಡು ಬಿಟ್ಟಿರುವ ಮಾಹಿತಿ ಇದ್ದು ಎಚ್ಚರ ವಹಿಸಿದ್ದೇವೆ’ ಎಂದು ಬನವಾಸಿ ಆರ್.ಎಫ್.ಓ. ಉಷಾ ಕಬ್ಬೇರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT