ಮಂಗಳವಾರ, ಅಕ್ಟೋಬರ್ 19, 2021
24 °C
ಸೆ.29 ರಾಷ್ಟ್ರೀಯ ಕ್ರೀಡಾ ದಿನ: ದೇಸಿ ಕ್ರೀಡೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಪಟ್ಟಣ

ಕುಸ್ತಿ ಆರಾಧನಾ ಕೇಂದ್ರ ಹಳಿಯಾಳ; ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಪಟ್ಟಣ

ಸಂತೋಷಕುಮಾರ ಹಬ್ಬು Updated:

ಅಕ್ಷರ ಗಾತ್ರ : | |

Prajavani

ಹಳಿಯಾಳ: ಹಳಿಯಾಳ ಎಂದಾಕ್ಷಣ ನೆನಪಿಗೆ ಬರುವುದು ಕುಸ್ತಿ ಕ್ರೀಡೆ. ಈ ಹಿಂದೆ ಹನುಮ ಮತ್ತು ಶಿವಾಜಿ ಜಯಂತಿಗೆ ಕಡ್ಡಾಯವಾಗಿ ನಡೆಯುತ್ತಿದ್ದ ಕುಸ್ತಿ ಪಂದ್ಯಾವಳಿಗಳು, ಈಗ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿವೆ.

ಮೈಸೂರಿನ ಚೆನ್ನಯ್ಯ ಕುಸ್ತಿ ಅಖಾಡವನ್ನು ಹೊರತುಪಡಿಸಿದರೆ, ಕುಸ್ತಿಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ಇರುವುದು ಹಳಿಯಾಳದಲ್ಲಿ ಮಾತ್ರ. ಎರಡು ದಶಕಗಳಿಂದ ಇಲ್ಲಿನ ಹಲವು ಪೈಲ್ವಾನರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಬಾಚಿಕೊಂಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸುಮಾರು ಒಂದು ಎಕರೆಗೂ ಹೆಚ್ಚು ವಿಸ್ತಾರದ ಒಳಾಂಗಣ ಹಾಗೂ ಹೊರಾಂಗಣ ಕುಸ್ತಿ ಕ್ರೀಡಾಂಗಣವಿದೆ. ಎರಡು ದಶಕಗಳಿಂದ ಇಲ್ಲಿಯೇ ಕುಸ್ತಿ ತಾಲೀಮು ನಡೆಯುತ್ತಿದೆ. ಮಣ್ಣಿನ ‘ಲಾಲ್‌ ಮತ್ತಿ’ ಹಾಗೂ ಅಖಾಡದ ಮ್ಯಾಟ್‌ ಮೇಲೆ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತದೆ.

1974ರಲ್ಲಿ ಹಳಿಯಾಳದಲ್ಲಿ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂತು. ಜಯಂತ ದೇಶಪಾಂಡೆ ಮತ್ತಿತರರು ಕೂಡಿ ಯುವಕ ಮಂಡಲ ರಚಿಸಿ ರಾಜ್ಯ ಕುಸ್ತಿ ಸಂಘಕ್ಕೆ ಹಳಿಯಾಳ ಕುಸ್ತಿ ಸಂಘದ ಹೆಸರು ನೊಂದಾಯಿಸಲಾಯಿತು. 1999ರಲ್ಲಿ ಒಳಾಂಗಣ ಮತ್ತು ಹೊರಾಂಗಣ ಕುಸ್ತಿ ಅಖಾಡಗಳು ಸಿದ್ಧವಾದವು. ದೇಸಿ ಕ್ರೀಡೆಯನ್ನು ಸಕ್ರಿಯವಾಗಿಡಲು ಶಾಸಕ ಆರ್‌.ವಿ.ದೇಶಪಾಂಡೆ ಅವರು ‌ವಿ.ಆರ್.ದೇಶಪಾಂಡೆ ಸ್ಮಾರಕ ಟ್ರಸ್ಟ್ ಹಾಗೂ ಜಿಲ್ಲಾ ಕುಸ್ತಿ ಸಂಘಟನಾ ಸಮಿತಿ, ರಾಜ್ಯ ಕುಸ್ತಿ ಸಂಘದ ಆಶ್ರಯದಲ್ಲಿ ನಿರಂತರವಾಗಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದಾರೆ. ವಿ.ಆರ್.ಡಿ.ಎಂ ಟ್ರಸ್ಟ್‌ನಿಂದ ಪ್ರತಿ ವರ್ಷವೂ ಹಲವಾರು ಪೈಲ್ವಾನರನ್ನು ದತ್ತು ತೆಗೆದುಕೊಂಡು ಪ್ರೋತ್ಸಾಹ ನೀಡಲಾಗುತ್ತಿದೆ.

ಪ್ರಶಸ್ತಿಗಳು: ರಾಷ್ಟ್ರಮಟ್ಟದಲ್ಲಿ ‘ಮಹಾನ್ ಭಾರತ ಕೇಸರಿ’, ‘ವೀರ ರಾಣಿ ಕಿತ್ತೂರ ಚನ್ನಮ್ಮ’, ‘ಭಾರತ ಕೇಸರಿ’, ‘ವೀರ ಒನಕೆ ಓಬವ್ವ’, ‘ಕರ್ನಾಟಕ ಕೇಸರಿ’, ‘ಕರ್ನಾಟಕ ಕುಮಾರ’, ‘ಕರ್ನಾಟಕ ಕಿಶೋರ’, ‘ಕರ್ನಾಟಕ ಚಾಂಪಿಯನ್‌’ ಪ್ರಶಸ್ತಿಯ ಪಂದ್ಯಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗಾವಿ, ದಾವಣಗೆರೆ, ಬೆಂಗಳೂರು, ಮೈಸೂರು, ಮಂಗಳೂರು, ಮಹಾರಾಷ್ಟ್ರ, ದೆಹಲಿ, ಹರಿಯಾಣಾ, ಪಂಜಾಬ್, ಉತ್ತರ ಪ್ರದೇಶದಿಂದಲೂ ಪೈಲ್ವಾನರು ತಮ್ಮ ಪಟ್ಟನ್ನು ಪ್ರದರ್ಶಿಸುತ್ತಾರೆ.

ಹಳಿಯಾಳ ಕುಸ್ತಿ ಅಖಾಡದ ಪಳಗಿದ ಪೈಲ್ವಾನ್ ಶರೀಫ ಜಮಾದಾರ, ರಾಜ್ಯಮಟ್ಟದ ಒಲಿಂಪಿಕ್‌ ಕುಸ್ತಿ ಸ್ಪರ್ಧೆಯಲ್ಲಿ 2008ರಲ್ಲಿ ಬಂಗಾರದ ಪದಕವನ್ನು ಗೆದ್ದುಕೊಂಡಿದ್ದಾರೆ. ಇಲ್ಲಿನ ಕುಸ್ತಿ ಕ್ರೀಡಾಂಗಣದಲ್ಲಿ 10 ವರ್ಷಗಳಿಂದ ಮಹಿಳಾ ಪಟುಗಳು ನಿರಂತರವಾಗಿ ತಾಲೀಮು ನಡೆಸುತ್ತಿದ್ದಾರೆ.

ಕುಸ್ತಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಹಳಿಯಾಳದಲ್ಲಿ ಖೇಲೋ ಇಂಡಿಯಾ ಕಚೇರಿಯನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ. ಜಿಲ್ಲಾ ಕುಸ್ತಿ ಅಖಾಡದಲ್ಲಿ ಕ್ರೀಡಾ ವಸತಿ ಶಾಲೆ, ನುರಿತ ತರಬೇತುದಾರರಿದ್ದಾರೆ.

‘ಕುಸ್ತಿ ಕ್ರೀಡಾ ವಸತಿ ಶಾಲೆಯು ಪ್ರೌಢಶಾಲೆಯ ವಿದ್ಯಾರ್ಥಿಗಳವರೆಗೆ ಮಾತ್ರವಿದೆ. ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೂ ಈ ಸೌಲಭ್ಯದ ಅವಶ್ಯಕತೆಯಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂಬುದು ಪೈಲ್ವಾನರಾದ ಸುಜಾತಾ, ಲೀನಾ, ಜ್ಯೋತಿ ಆಗ್ರಹವಾಗಿದೆ.

ಅಮೋಘ ಪ್ರತಿಭೆಗಳ ಸಂಗಮ:

ಹಳಿಯಾಳದ ಲೀನಾ ಅಂತೋನ ಸಿದ್ದಿ 15 ಬಾರಿ, ಜ್ಯೋತಿ ಮಂಜುನಾಥ ಘಾಡಿ 10 ಬಾರಿ, ಸುಜಾತಾ ತುಕಾರಾಮ ಪಾಟೀಲ ಏಳು ಬಾರಿ, ಗಾಯತ್ರಿ ರಮೇಶ ಸುತಾರ ಐದು ಬಾರಿ, ಶಾಲಿನಿ ಸಾಹೇರ ಸಿದ್ದಿ ನಾಲ್ಕು ಬಾರಿ, ಪ್ರಿಸಿಲ್ಲಾ ಪೆದ್ರು ಸಿದ್ದಿ ಒಮ್ಮೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ‘ಖೇಲೋ ಇಂಡಿಯಾ’, ‘ಕುಸ್ತಿ ಫೆಡರೇಶನ್‌ ಆಫ್‌ ಇಂಡಿಯಾ’ ಮತ್ತಿತರರು ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 

ಇದೇ ಕುಸ್ತಿ ಅಖಾಡದಲ್ಲಿ ತರಬೇತಿ ಪಡೆದ ಸೂರಜ್‌ ಅಣ್ಣಿಗೇರಿ ಬಲ್ಗೇರಿಯಾದಲ್ಲಿ ನಡೆದ 46 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಗ್ರೀಕ್‌ ದೇಶದ ಅಥೆನ್ಸ್‌ನಲ್ಲಿ ನಡೆದ 36 ಕೆ.ಜಿ. ವಿಭಾಗದಲ್ಲಿ ಮಮತಾ ಕೆಳೋಜಿ ಭಾಗವಹಿಸಿದ್ದರು.

----------

* ಜಿಲ್ಲಾ ಕುಸ್ತಿ ಕ್ರೀಡಾಂಗಣದಲ್ಲಿ ಸರ್ಕಾರದ ಕೋವಿಡ್‌ ಮಾರ್ಗಸೂಚಿಯಂತೆ ತಾಲೀಮು ನಡೆಸಲಾಗುತ್ತಿದೆ.

- ತುಕಾರಾಮ ಗೌಡ, ಬಾಲಕೃಷ್ಣ ದಡ್ಡಿ‌, ಕುಸ್ತಿ ತರಬೇತುದಾರ ಮತ್ತು ಸಹಾಯಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು