ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಹೋಟೆಲ್‌ಗಳತ್ತ ಸುಳಿಯದ ಗ್ರಾಹಕರು

ಲಾಕ್‌ಡೌನ್ ಸಡಿಲಿಕೆ ನಂತರವೂ ನಷ್ಟ ಅನುಭವಿಸುತ್ತಿರುವ ಮಾಲೀಕರು
Last Updated 17 ಜೂನ್ 2020, 20:00 IST
ಅಕ್ಷರ ಗಾತ್ರ

ಮುಂಡಗೋಡ: ಕಳೆದ ಎಂಟತ್ತು ದಿನಗಳಿಂದ ಹೋಟೆಲ್‍ಗಳು ತೆರೆದಿದ್ದರೂ, ಗ್ರಾಹಕರ ಸಂಖ್ಯೆ ಮೊದಲಿನಂತೆ ಇಲ್ಲದೆ ಮಾಲೀಕರು ಕಂಗಾಲಾಗಿದ್ದಾರೆ. ಲಾಕ್‍ಡೌನ್ ಸಡಿಲಿಕೆ ನಂತರ, ಬಹುತೇಕ ಎಲ್ಲ ಹೋಟೆಲ್‍ಗಳ ಬಾಗಿಲು ತೆರೆದಿದ್ದರೂ, ಕೊರೊನಾ ಭಯದಿಂದ ಗ್ರಾಹಕರು ಸುಳಿಯುತ್ತಿಲ್ಲ ಎಂಬುದು ಹೋಟೆಲ್ ಮಾಲೀಕರ ಅಳಲಾಗಿದೆ.

ಪಟ್ಟಣದಲ್ಲಿ 80ಕ್ಕಿಂತ ಹೆಚ್ಚು ಚಹಾದ ಅಂಗಡಿ, ಹೋಟೆಲ್, ಖಾನಾವಳಿ ಇವೆ. ರಸ್ತೆ ಪಕ್ಕದ ಸಣ್ಣ ಚಹಾದ ಅಂಗಡಿಗಳಲ್ಲಿ ತಕ್ಕ ಮಟ್ಟಿಗೆ ವ್ಯಾಪಾರ ಇದೆ. ಆದರೆ ಹೋಟೆಲ್, ಖಾನಾವಳಿ, ದರ್ಶಿನಿಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ.

‘ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇಟ್ಟು, ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಂಡು, ಗ್ರಾಹಕರನ್ನು ಸ್ವಾಗತಿಸಲು ಸಜ್ಜಾದರೂ, ಲಾಕ್‍ಡೌನ್ ಗುಂಗಿನಿಂದ ಜನರು ಹೊರಬರುತ್ತಿಲ್ಲ’ ಎನ್ನುತ್ತಾರೆ ಹೋಟೆಲ್ ಮಾಲೀಕರು.

'ಲಾಕ್‍ಡೌನ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗೆ ಪಾರ್ಸೆಲ್ ಊಟ ಕೊಡಲು ತೆರೆದಿದ್ದೆವು. ಆಗ ಹತ್ತಿಪ್ಪತ್ತು ಊಟಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಖಾನಾವಳಿ ತೆರೆದರೂ, ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ಒಂದು ಕಡೆ ಕಾಳು–ಕಡಿಯ ದರ ಏರಿದೆ, ಮತ್ತೊಂದೆಡೆ ಗ್ರಾಹಕರು ಬರದೆ ಬಾಡಿಗೆ, ಕೂಲಿಯವರ ಸಂಬಳ ಸೇರಿದಂತೆ ಎಲ್ಲದಕ್ಕೂ ಯೋಚಿಸುವಂತೆ ಆಗಿದೆ' ಎನ್ನುತ್ತಾರೆ ಬಸವೇಶ್ವರ ಖಾನಾವಳಿಯ ಸಂಗಮೇಶ ಗೊಟಗೋಡಿ.

'ಮೊದಲಿಗೆ ಹೋಲಿಸಿದರೆ ಅರ್ಧದಷ್ಟು ವ್ಯಾಪಾರ ಆಗುತ್ತಿದೆ. ಜನರು ಹೆಚ್ಚಿನ ಹೊತ್ತು ಕುಳಿತುಕೊಳ್ಳುವುದಿಲ್ಲ. ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಬರುವುದು ಕಡಿಮೆಯಾಗಿದೆ' ಎಂದು ನ್ಯೂ ಲಕ್ಷ್ಮೀ ಹೋಟೆಲ್‍ನ ಶಿವು ಮತ್ತಿಗಟ್ಟಿ ಹೇಳಿದರು.

'ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕಡಿಮೆಯಿದೆ. ಹಳ್ಳಿ ಜನರೂ ಅಗತ್ಯ ವಸ್ತುಗಳ ಖರೀದಿಗೆ ಬಂದವರೇ ಮರಳುತ್ತಿದ್ದಾರೆ. ಟಿಬೆಟನ್ನರು ಪಟ್ಟಣಕ್ಕೆ ಬರುತ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು, ಜನರಲ್ಲಿ ಮತ್ತಷ್ಟು ಭಯ ಹುಟ್ಟಿದೆ. ಹೀಗಾಗಿ ಈ ಹಿಂದಿನಂತೆ ಗ್ರಾಹಕರನ್ನು ಕಾಣಲು ಆಗುತ್ತಿಲ್ಲ' ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಉಪ್ಪುಂದ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT