ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗಷ್ಟೇ ಸೀಮಿತವಾದ ಬಂದ್‌

ಒತ್ತಾಯಪೂರ್ವಕವಾಗಿ ಅಂಗಡಿ, ಹೋಟೆಲ್‌ ಬಂದ್‌ ಮಾಡಿಸಿದ ಬಿಜೆಪಿ ಕಾರ್ಯಕರ್ತರು
Last Updated 29 ಮೇ 2018, 7:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕ್ರಮವನ್ನು ಖಂಡಿಸಿ ಬಿಜೆಪಿ ಹಾಗೂ ಪಕ್ಷದ ರೈತ ಮೋರ್ಚಾ ಸೋಮವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ಗೆ ನಗರದಲ್ಲಿ ಪೂರಕ ಸ್ಪಂದನೆ ದೊರೆಯಲಿಲ್ಲ.

ಹಳೇ ಬಸ್‌ ನಿಲ್ದಾಣದ ಆಸುಪಾಸಿನಲ್ಲಿರುವ ಹೋಟೆಲ್‌ಗಳು ಮುಚ್ಚಿದ್ದವು. ಟ್ರಾಫಿಕ್‌ ಐಲ್ಯಾಂಡ್‌ನಲ್ಲಿರುವ ಕೆಲ ಅಂಗಡಿಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಲು ಮುಂದಾದರು. ಇದನ್ನು ಆಕ್ಷೇಪಿಸಿದ ಪೊಲೀಸರು, ಅಂಗಡಿ ಮುಚ್ಚುವಂತೆ ಮನವಿ ಮಾಡಿಕೊಳ್ಳಬಹುದೇ ಹೊರತು ಒತ್ತಡ ಹೇರುವಂತಿಲ್ಲ ಎಂದು ತಾಕೀತು ಮಾಡಿದರು.

ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆಯಿಂದ ಪ್ರತಿಭಟನೆಗಳು ಆರಂಭವಾಗಿದ್ದರಿಂದ ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳು ವೃತ್ತ ಪ್ರವೇಶಿಸದಂತೆ ಮಾರ್ಗ ಬದಲಾವಣೆ ಮಾಡಿದ್ದರು. ವೃತ್ತದಲ್ಲಿ ಮಧ್ಯಾಹ್ನ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು, ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ₹ 53 ಸಾವಿರ ಕೋಟಿ ಸಾಲ ಮನ್ನಾ ಮಾಡಲು ವಿಫಲವಾಗಿದೆ’ ಎಂದು ಆರೋಪಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಗದೀಶ ಶೆಟ್ಟರ್‌, ‘ಚುನಾವಣೆ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದರು. ಇದೀಗ ಮಿತ್ರ ಪಕ್ಷ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸುವುದಾಗಿ ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಒಂದು ವೇಳೆ ರೈತರ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್‌ ಪಕ್ಷದ ಧೋರಣೆಯನ್ನು ಖಂಡಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಋಣ ನನ್ನ ಮೇಲಿದೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಹಾಗಿದ್ದರೆ ಬರೀ ಕಾಂಗ್ರೆಸ್‌ ನಂಬಿಕೊಂಡೇ ಇವರು ಚುನಾವಣೆಯಲ್ಲಿ ಗೆದ್ದರೆ? ಮತದಾರರು ಬೆಂಬಲಿಸದಿದ್ದರೆ ಅವರು ಶಾಸಕರಾಗುವುದು ಸಾಧ್ಯವಿತ್ತೇ? ಜನಪ್ರತಿನಿಧಿಗಳು ಯಾವಾಗಲೂ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ನಿಷ್ಠರಾಗಿರಬೇಕೇ ಹೊರತು ಚುನಾವಣೆಯಲ್ಲಿ ಬೆಂಬಲ ನೀಡಿದ ಪಕ್ಷಗಳಿಗಲ್ಲ’ ಎಂದು ಹೇಳಿದರು.

‘ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಬೇಕು’ ಎಂದು ಜೋಶಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಮಹೇಶ ಬುರ್ಲಿ, ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ಲಕ್ಷ್ಮಣ ಗಂಡಗಾಳೇಕರ, ಮುಖಂಡರಾದ ಚಂದ್ರಶೇಖರ ಗೋಕಾಕ, ವೀರಭದ್ರಪ್ಪ ಹಾಲಹರವಿ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ದತ್ತಾ ಡೋರ್ಲೆ, ತಿಪ್ಪಣ್ಣ ಮಜ್ಜಗಿ, ಮಹೇಂದ್ರ ಕೌತಾಳ ಇದ್ದರು.

ಹೆಬಸೂರಲ್ಲಿ ಪ್ರತಿಭಟನೆ: ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ರೈತರು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಬಳಿಕ ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಫಕೀರಪ್ಪ ಚಾಕಲಬ್ಬಿ, ಮುಖಂಡರಾದ ಸುರೇಶ ಬಣವಿ, ಸುರೇಶ ಮುದರೆಡ್ಡಿ, ಅಶೋಕ ಮಂಡಿಗನಾಳ, ಗಿರೀಶ ಹೊನ್ನಿಹಳ್ಳಿ, ಕಲ್ಮೇಶ ಉಳ್ಳಾಗಡ್ಡಿ, ಬಿ.ಕೆ. ಪಾಟೀಲ, ಎಸ್‌.ಎಸ್‌. ಅಂಗಡಿ, ಎಸ್‌.ಎಸ್‌. ಕಾಳಪ್ಪನವರ, ಪ್ರಭು ಬಳಗನ್ನವರ, ಬಸವರಾಜ ತಳವಾರ, ಮೌನ‍ಪ್ಪ ಕಂಬಳಿ, ಸುರೇಶ ಹೂಗಾರ, ಅರ್ಜುನ ಇಂಗಳಹಳ್ಳಿ ಭಾಗವಹಿಸಿದ್ದರು.

ಕೇಸರಿ ಹೋಗಿ ಹಸಿರು ಶಾಲು ಬಂತು!

ಬಿಜೆಪಿ ಕಾರ್ಯಕರ್ತರು ಬಹುತೇಕ ಪ್ರತಿಭಟನೆಗಳ ಸಂದರ್ಭದಲ್ಲಿ ಪಕ್ಷದ ಬ್ರ್ಯಾಂಡ್‌ ಆದ ಕೇಸರಿ ಶಾಲನ್ನು ಧರಿಸುವುದು ವಾಡಿಕೆ. ಆದರೆ, ಸೋಮವಾರ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕೇಸರಿ ಶಾಲು ತ್ಯಜಿಸಿ ಹಸಿರು ಬಣ್ಣದ ಶಾಲುಗಳನ್ನು ಧರಣಿಸಿದ್ದರು. ಅಲ್ಲದೇ, ಕೈಯೆತ್ತಿ ಶಾಲು ಬೀಸಿ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೇಸರಿ ಬಣ್ಣದ ಟೋಪಿಗಳನ್ನು ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT