ಭಾನುವಾರ, ನವೆಂಬರ್ 17, 2019
21 °C
ಐಎಂಎ ಶಿರಸಿ ಸೇವಾ ಪ್ರತಿಷ್ಠಾನ ಉದ್ಘಾಟನೆ

‘ಸಮಾಜ ಸೇವೆಯಿಂದ ಬಾಂಧವ್ಯ ವೃದ್ಧಿ’

Published:
Updated:
Prajavani

ಶಿರಸಿ: ಭಾರತೀಯ ವೈದ್ಯಕೀಯ ಸಂಘವು ಸದಸ್ಯರ ಭದ್ರತೆ ಜೊತೆಗೆ ಸಮಾಜ ಸೇವೆಯ ಉದ್ದೇಶ ಹೊಂದಿದೆ. ವೈದ್ಯರು ಮತ್ತು ರೋಗಿಗಳ ನಡುವೆ ಬಾಂಧವ್ಯ ರೂಪಿಸಲು ಇದು ಸಹಕಾರಿಯಾಗಿದೆ ಎಂದು ಐಎಂಎ ರಾಜ್ಯ ಘಟಕದ ನಿಯೋಜಿತ ಅಧ್ಯಕ್ಷ ಡಾ.ಮಧುಸೂದನ ಕರಿಗನ್ನೂರ ಹೇಳಿದರು.

ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಎಂಎ ಶಿರಸಿ ಸೇವಾ ಪ್ರತಿಷ್ಠಾನ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ಸಮುದಾಯದೊಂದಿಗೆ ಬೆರೆಯಬೇಕು. ಆಗ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಸಮಾಜ ಸೇವೆಗೆಂದು ಶಿರಸಿ ಘಟಕ ವ್ಯಾಪ್ತಿಯಲ್ಲಿ ಸಂಘಟನೆ ಆರಂಭಿಸಿರುವುದು ರಾಜ್ಯದ ಐಎಂಎ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಇಂತಹ ಸಮಾಜ ಸೇವೆ ಕಾರ್ಯ ಮುಂದಿನ ದಿನ ಇನ್ನಷ್ಟು ಪ್ರಭಾವಶಾಲಿಯಾಗಿ ಆಗಲಿ’ ಎಂದರು.

‘ಐಎಂಎ ನಡಿಗೆ ಶಾಲೆಯ ಜೊತೆಗೆ, ಐಎಂಎ ನಡಿಗೆ ಸೈನಿಕ ಕುಟುಂಬದ ಕಡೆಗೆ’ ಕಾರ್ಯಕ್ರಮ ನಡೆಸಲಾಗುತ್ತಿದೆ. ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಕೆಲ ನ್ಯೂನತೆಯಿದ್ದು, ಅದನ್ನು ಸರ್ಕಾರದೊಂದಿಗೆ ಚರ್ಚಿಸಿ ಬದಲಾವಣೆಗೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರವೇ ಕೇಂದ್ರೀಯ ವೈದ್ಯಕೀಯ ಕಾಯ್ದೆ ಅಡಿ ಕೆಲ ನೀತಿ, ನಿಯಮ ಹಾಕಿಕೊಟ್ಟರೆ ಆಸ್ಪತ್ರೆಗಳಿಗೂ ಅನುಕೂಲ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕಕುಮಾರ, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಅನ್ನದಾನಿ ಮೇಟಿ, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್.ಎಸ್.ಸೊಪ್ಪಿಮಠ, ಡಾ.ಅಮಿತ್ ಸತ್ತೂರ, ಡಾ. ಶರಣ ಹಳ್ಳದ, ವೈದ್ಯರಾದ ಜಿ.ಎಂ.ಹೆಗಡೆ, ರಾಘವೇಂದ್ರ ಉಡುಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)