ಮಂಗಳವಾರ, ಜೂನ್ 22, 2021
24 °C

ವಿಠಲ ಭಂಡಾರಿ ನಿಧನಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಕಂಬನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಂವಿಧಾನ ಓದು ಪುಸ್ತಕವನ್ನು ಬರೆಯಬೇಕು ಎಂದು ನನ್ನನ್ನು ಪ್ರೇರೇಪಿಸಿದವರೇ ವಿಠಲ ಭಂಡಾರಿಯವರು. ಆ ಪುಸ್ತಕವನ್ನು ಸಹಯಾನ ಸಂಸ್ಥೆಯೇ ಪ್ರಕಟಿಸಿತು. ರಾಜ್ಯದಾದ್ಯಂತ ಅಭಿಯಾನಕ್ಕಾಗಿ ಜೊತೆಯಾಗಿ ಉತ್ಸುಕತೆಯಿಂದ ನನ್ನ ಜೊತೆ ಸುತ್ತಾಡಿದರು. ಅವರ ನಿಧನ ರಾಜ್ಯದ ಪ್ರಜಾಪ್ರಭುತ್ವ ಚಳವಳಿಗೆ ದೊಡ್ಡ ನಷ್ಟ..’

ತಮ್ಮ ಮತ್ತು ವಿಠಲ ಭಂಡಾರಿ ಅವರ ಒಡನಾಟವನ್ನು ‘ಪ್ರಜಾವಾಣಿ’ಯೊಂದಿಗೆ ನೆನಪಿಸಿಕೊಂಡ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಭಾವುಕರಾದರು.

‘2018ರ ಫೆಬ್ರುವರಿಯಲ್ಲಿ ಪುಸ್ತಕದ ವಿಚಾರನ್ನು ಅವರು ನನ್ನ ತಲೆಗೆ ತುಂಬಿದರು. ಅದೇ ವರ್ಷ ಆ.15ರಂದು ಪುಸ್ತಕ ಬಿಡುಗಡೆಯಾಯಿತು. ಸುಪ್ರಿಂಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಅಭಿಯಾನದ ಸಲುವಾಗಿಯೇ ಕರೆದುಕೊಂಡು ಬಂದರು’ ಎಂದು ಹೇಳಿದರು.

‘ಅವರ ಆರೋಗ್ಯ ಕುರಿತು ದಿನವೂ ಸಂಪರ್ಕದಲ್ಲಿದ್ದೆ. ಕೆಮ್ಮಿನ ಸಮಸ್ಯೆ ಹೊರತು ಮತ್ತೇನಿಲ್ಲ ಎಂದು ಹೇಳಿದ್ದರು. ಆದರೆ, ಅವರ ನಿಧನದ ಸುದ್ದಿಯನ್ನು ನಂಬಲಾಗುತ್ತಿಲ್ಲ. ಕೆರೆಕೋಣದಲ್ಲಿ ಸಹಯಾನದ ಉದ್ಘಾಟನೆಗೆ, ಅದರ ದಶಮಾನೋತ್ಸವ ಸಮಾರಂಭದ ಉದ್ಘಾಟನೆಗೆ ನನ್ನನ್ನೇ ಕರೆಸಿದ್ದರು’ ಎಂದು ನೆನಪಿಸಿಕೊಂಡರು.

‘ಅಭಿಯಾನದಲ್ಲಿ ಜನರಿಂದ ಬಂದ ಉತ್ತಮ 25 ಪ್ರಶ್ನೋತ್ತರಗಳ ಪುಸ್ತವನ್ನು ಪ್ರಕಟಿಸಿದರು. ಅವುಗಳನ್ನು, ಪುಸ್ತಕದ ವಿವಿಧ ಭಾಗಗಳನ್ನು ಓದಿಸಿ ಯೂಟ್ಯೂಬ್‌ನಲ್ಲೂ ಪ್ರಸಾರ ಮಾಡಿದರು. 2010ರಲ್ಲಿ ನಾನು ಕಾರವಾರದಲ್ಲಿ ನ್ಯಾಯಾಧೀಶನಾಗಿದ್ದಾಗ ಉತ್ತರ ಕನ್ನಡದ ಮೀನುಗಾರರು ಮತ್ತು ಅರಣ್ಯ ವಾಸಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದೆ. ಆಗ ವಿಠಲ ಮತ್ತು ಯಮುನಾ ಗಾಂವ್ಕರ್ ಬಹಳ ಸಹಕಾರ ನೀಡಿದರು’ ಎಂದರು.

‘ನಾನು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಕೆಲಸ ಮಾಡುತ್ತಿದ್ದಾಗ ಜೊಯಿಡಾದಲ್ಲಿ 700–800 ಜನರನ್ನು ಸೇರಿಸಿ ಜನರ ಸಮಸ್ಯೆಗಳ ಬಗ್ಗೆ ಕಾರ್ಯಕ್ರಮ ಮಾಡಿದ್ದರು. ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರು ಸ್ಥಳೀಯರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಮಾಡಿದ್ದರು. ಒಟ್ಟಿನಲ್ಲಿ ವಿಠಲ ಅವರ ನಿಧನದಿಂದ ನನಗೆ ವೈಯಕ್ತಿಕವಾಗಿ ಬಹಳ ನಷ್ಟವಾಗಿದೆ’ ಎಂದು ಬೇಸರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು