ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಶತಮಾನದಿಂದ ತಿರುಗುತ್ತಿದೆ ಚರಕ

ಕುಮಟಾ ತಾಲ್ಲೂಕಿನ ಬಂಡಿವಾಳ ಗ್ರಾಮದ ವೆಂಕಟ್ರಮಣ ಭಟ್ಟ ಮನೆತನದ ಹವ್ಯಾಸ
Last Updated 7 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಕಾರವಾರ: ‘ಅವಿಭಕ್ತ ಕುಟುಂಬದಲ್ಲಿ ಬೆಳೆದು ಜೀವನೋಪಾಯಕ್ಕೆ ಕೃಷಿಯನ್ನು ಅವಲಂಬಿಸಿದರೂ ಚರಕ ತಿರುಗಿಸಿ ಜನಿವಾರ ಮಾಡುವ ಸಂತಸವೇ ಬೇರೆ’ ಎನ್ನುತ್ತಾರೆ ವೆಂಕಟ್ರಮಣ ಭಟ್ಟ.

ಇವರು ಕುಮಟಾ ತಾಲ್ಲೂಕಿನ ಕತಗಾಲ್ ಗ್ರಾಮದ ಬಂಡಿವಾಳದ ನಿವಾಸಿ ಶಿವರಾಮ ಭಟ್ಟ ಹಾಗೂ ಗೌರಿ ದಂಪತಿಯ ಪುತ್ರ. ಇಲ್ಲಿಯ ಕೇಶವ ದೇವಸ್ಥಾನದ ಅರ್ಚಕ ಮನೆತನವೂ ಹೌದು. ಸುಮಾರು ಒಂದು ಶತಮಾನದಿಂದಲೂ ಈ ಮನೆಯಲ್ಲಿ ಚರಕ ತಿರುಗುತ್ತಲೇ ಇದೆ. ಯಂತ್ರಗಳು ಎಲ್ಲೆಡೆ ಲಗ್ಗೆಯಿಟ್ಟಿರುವ ಈ ಕಾಲದಲ್ಲಿ ಇದರ ಬಳಕೆ ಮಾಡುವ ತೀರಾ ಅಪರೂಪದ ವ್ಯಕ್ತಿ ಇವರು ಎಂದೂಹೇಳಬಹುದು.

‘ಮೊದಲು ನನ್ನ ತಂದೆಯವರು ಜನಿವಾರವನ್ನು ತಯಾರಿಸುತ್ತಿದ್ದರು.ಈಗ 40 ವರ್ಷಗಳಿಂದ ನಾನುಅದರ ಜವಾಬ್ದಾರಿ ಹೊತ್ತಿದ್ದೇನೆ. ವ್ಯಾವಹಾರಿಕ ದೃಷ್ಟಿಕೋನದಿಂದ ಇದುವರೆಗೂ ಚರಕವನ್ನು ಬಳಸಿಲ್ಲ.ಜನಿವಾರ ಬಳಸುವ ತಾಲ್ಲೂಕಿನ ಜನರಿಗೆ ಇದರ ಪ್ರಯೋಜನ ಸಿಗಬೇಕು ಹಾಗೂ ನಮ್ಮ ಮನೆತನದಲ್ಲಿ ಈ ಕೆಲಸ ಮುಂದುವರೆಯಬೇಕು ಎಂಬ ಕಾರಣಕ್ಕೆ ಮಾಡುತ್ತಿದ್ದೇನೆ’ ಎಂದುವೆಂಕಟ್ರಮಣ ಭಟ್ಟ ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ನಮ್ಮ ಮನೆಯಲ್ಲಿ ಎಂಟು ಜನ ಇದ್ದೇವೆ. ತೋಟದ ಕೃಷಿ ಮಾಡಿದರಷ್ಟೇ ನಮ್ಮ ಹೊಟ್ಟೆಪಾಡು. ಕೃಷಿಯ ಜೊತೆಗೆ ಇದಕ್ಕೂ ಒಂದಿಷ್ಟು ಸಮಯವನ್ನು ಪ್ರತಿದಿನ ಮೀಸಲಿಡುತ್ತಿದ್ದೆ. ಈಗ 85 ವರ್ಷ ದಾಟಿದೆ. ಹಾಗಾಗಿ ವ್ಯವಸಾಯ ಮಾಡುವಷ್ಟು ಸಾಮರ್ಥ್ಯ ಇಲ್ಲ. ಆದರೆ, ಈಗಲೂ ಚರಕ ತಿರುಗಿಸಿ ಜನಿವಾರ ಮಾಡುತ್ತೇನೆ. ತುಂಬಾ ಸೂಕ್ಷ್ಮವಾಗಿ ತಾಳ್ಮೆವಹಿಸಿ ಮಾಡಬೇಕಾಗುತ್ತದೆ. ದಾರಗಳು ಒಂದಕ್ಕೊಂದು ಗಂಟು ಬಿದ್ದರೆ ಅದು ವ್ಯರ್ಥವಾಗಿಬಿಡುತ್ತದೆ’ ಎಂದು ಅವರು ಹೇಳುತ್ತಾರೆ.

‘ಹೊನ್ನಾವರದಿಂದ ಹತ್ತಿಯ ನೂಲನ್ನು ತರಬೇಕಾಗುತ್ತದೆ. ರಾಟೆಗೆ ಸುತ್ತಿಕೊಂಡು 48 ಅಂಗುಲದ ಅಳತೆಯನ್ನು ಮಾಡಿಕೊಳ್ಳಬೇಕು. ನಂತರ ಚರಕದಿಂದ ಕಾವು ಕೊಡಬೇಕು. ಮೂರು ಎಳೆ ಮಾಡಿ ಕೂಡಿಸಿಕೊಂಡು ನಂತರ ಒಂಭತ್ತು ಎಳೆಯನ್ನು ಮಾಡಬೇಕು.ಇಷ್ಟು ಮಾಡುವಷ್ಟರಲ್ಲಿಯೇ ಒಂದಿಷ್ಟು ಸಮಯ ಕಳೆದುಹೋಗುತ್ತದೆ.ಆದರೂ ದಿನಕ್ಕೆ ಐದಾರು ಜನಿವಾರಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ. ಇದರಿಂದ ಲಾಭವೇನೂ ಇರುವುದಿಲ್ಲ, ನೂಲಿನ ಖರ್ಚಿಗೆ ಸರಿಹೋಗುತ್ತದೆ. ಅಗತ್ಯವಿರುವವರಿಗೆ ಒಂದಕ್ಕೆ ₹5 ರಾಪಾಯಿಯಲ್ಲಿ ನೀಡುತ್ತೇನೆ’ ಎಂದು ಹೇಳಿದರು.

ಉತ್ತಮ ಬೇಡಿಕೆ
‘ಜಿಲ್ಲೆಯಲ್ಲಿ ಜನಿವಾರ ತಯಾರಕರು ತೀರಾ ಕಡಿಮೆಯಾಗಿದ್ದಾರೆ. ಹಾಗಾಗಿ ಇದನ್ನು ನಿಲ್ಲಿಸಲು ಮನಸ್ಸಿಲ್ಲ. ಸಾಂತೂರು, ನೀಲಕೋಡ, ಅಂತ್ರವಳ್ಳಿ, ಕುಮಟಾ, ಕಡತೋಕಾ, ಮುರೂರು ಮುಂತಾದ ಭಾಗಗಳ ಜನರು ಕಾಯಂ ಆಗಿ ಕೊಂಡೊಯ್ಯುತ್ತಾರೆ. ಶಿರಸಿ ಕಡೆಯವರಿಂದಲೂ ಬೇಡಿಕೆ ಬಂದಿದ್ದಿದೆ. ಜಾಸ್ತಿ ಇದ್ದಾಗ ಮನೆಯವರೂ ಸಹಾಯ ಮಾಡುತ್ತಾರೆ. ವಯಸ್ಸು ಸಹಕರಿಸುವತನಕ ನಾನು ಇದನ್ನು ಮುಂದುವರಿಸುವ ಹಂಬಲವಿದೆ’ ಎಂದು ಬಂಡಿವಾಳದ ವೆಂಕಟ್ರಮಣ ಭಟ್ಟ ತಿಳಿಸಿದರು.

*
ಚಿಕ್ಕಪ್ಪ ಗಜಾನನ ಭಟ್ಟ ಕೂಡ ಚರಕದಿಂದ ಜನಿವಾರ ಮಾಡುತ್ತಾರೆ. ನಮ್ಮ ಮನೆತನದಲ್ಲಿ ಮುಂದೆ ನಾನು ಇದನ್ನು ಮುಂದುವರಿಸುವ ಆಸಕ್ತಿ ಹೊಂದಿದ್ದೇನೆ.
-ಶಿವರಾಮ ಭಟ್ಟ, ವೆಂಕಟರಮಣ ಭಟ್ಟರ ಪುತ್ರ

*
ಚರಕ ಹಾಳಾದರೆ ನಾವೇ ದುರಸ್ತಿ ಮಾಡಿಕೊಳ್ಳುತ್ತೇವೆ. ಚಕ್ರಗಳು ತುಂಬಾ ವರ್ಷ ಬಾಳಿಕೆ ಬರುತ್ತವೆ. ಅಜ್ಜನ ಆಸಕ್ತಿ ನನಗೂ ಪ್ರೇರಣೆಯಾಗಿದೆ.
-ವಿನಾಯಕ ಭಟ್ಟ, ವೆಂಕಟರಮಣ ಭಟ್ಟರ ಮೊಮ್ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT