ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ದಾಖಲಾತಿ: ಕಾರವಾರ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೇ ಪ್ರಥಮ

ರಾಜ್ಯ ರಾಜಧಾನಿ ಬೆಂಗಳೂರು ಸುತ್ತಮುತ್ತ ಅತಿ ಕಡಿಮೆ ಪ್ರಗತಿ
Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದು, ಒಟ್ಟು ಶೇ 87ರಷ್ಟು ಪ್ರಗತಿ ಸಾಧಿಸಿದೆ.

ಹಾವೇರಿ, ಧಾರವಾಡ ಜಿಲ್ಲೆಗಳು ತಲಾ ಶೇ 86ರಷ್ಟು ದಾಖಲಾತಿಯೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಶೇ 85ರಷ್ಟು ಪ್ರಗತಿಯೊಂದಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯು ಆರನೇ ಸಾಲಿನಲ್ಲಿದೆ. ಇದೇ ರೀತಿ, ರಾಜ್ಯದ 205 ಶೈಕ್ಷಣಿಕ ತಾಲ್ಲೂಕುಗಳಲ್ಲಿ (ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿ) ಕೂಡ ಕಾರವಾರ ತಾಲ್ಲೂಕು ಅಗ್ರಸ್ಥಾನದಲ್ಲಿರುವ ಹೆಗ್ಗಳಿಕೆ ಪಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಹರೀಶ ಗಾಂವ್ಕರ್, ‘ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 1.02 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಇತರ (ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗದ ವಸತಿಯುತ ಶಾಲೆಗಳು) ಶಾಲೆಗಳಿಗೆ ದಾಖಲಾತಿ ಪಡೆದುಕೊಂಡಿದ್ದರು. ಅದನ್ನೇ ಈ ವರ್ಷದ ಗುರಿಯನ್ನಾಗಿ ನಿಗದಿ ಮಾಡಲಾಗಿದೆ.

ಮಕ್ಕಳ ದಾಖಲಾತಿ ಮುಂದುವರಿದಿದ್ದು, ಈ ವರ್ಷ ಅದಕ್ಕಿಂತಲೂ ಹೆಚ್ಚು ಮಕ್ಕಳು ಬರಬಹುದು. ಹಾಗಾಗಿ ಒಟ್ಟು ಪ್ರಗತಿಯು ಶೇ 100ಕ್ಕಿಂತ ಹೆಚ್ಚಾಗಬಹುದು’ ಎಂದು ವಿವರಿಸಿದರು.

ಇಂಗ್ಲಿಷ್‌ ಮಾಧ್ಯಮಕ್ಕೆ ಸ್ಪಂದನೆ:‘ಕಾರವಾರ ಜಿಲ್ಲೆಯ ಒಟ್ಟು 33 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗಿದೆ. ಹಾಗಾಗಿ ಬಹಳ ಶಾಲೆಗಳಿಗೆ ಖಾಸಗಿ ಶಾಲೆಗಳಿಂದ ಮಕ್ಕಳ ವರ್ಗಾವಣೆಗೆ ಪಾಲಕರು ಅಪೇಕ್ಷಿಸುತ್ತಿದ್ದಾರೆ. ಪ್ರತಿ ತರಗತಿಗೆ 30 ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಅವಕಾಶವಿದೆ. ಅದೇ ಶಾಲೆಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚಾಗಿ ಅವಕಾಶ ಪಡೆಯುತ್ತಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಅತಿ ಕಡಿಮೆ!:ಜುಲೈ 10ರ ಮಾಹಿತಿಯ ಪ್ರಕಾರ, ರಾಜ್ಯ ರಾಜಧಾನಿ ಬೆಂಗಳೂರು ಸುತ್ತಮುತ್ತಲೇ ಕಡಿಮೆ ದಾಖಲಾತಿಯಿದೆ. ಬೆಂಗಳೂರು ದಕ್ಷಿಣದಲ್ಲಿ ಕೇವಲ ಶೇ 29ರಷ್ಟು ಮತ್ತು ಉತ್ತರದಲ್ಲಿ ಶೇ 31ರಷ್ಟು ಪ್ರಗತಿಯಾಗಿದೆ. ಸರ್ಕಾರಿ ಶಾಲೆಗಳ ಅವಲಂಬನೆ ತುಸು ಹೆಚ್ಚಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 73ರಷ್ಟು ದಾಖಲಾತಿಯಾಗಿದೆ.

ಈ ಬಾರಿ ನಿಯಮದ ಪ್ರಕಾರ ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಏಳನೇ ತರಗತಿಗೆ ಬಡ್ತಿ ಕೊಡಬೇಕು. ಆದರೆ, ಕೆಲವು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಪಾಲಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳಿಗೆ ದಾಖಲಾತಿಯನ್ನೇ ಮಾಡಿಕೊಂಡಿಲ್ಲ. ಇದು ದಾಖಲಾತಿ ಪ್ರಮಾಣ ಕಡಿಮೆಯಾಗಲು ಕಾರಣ ಎನ್ನುವ ಅಭಿಪ್ರಾಯವಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್, ‘ಶುಲ್ಕ ಪಾವತಿಸದಿದ್ದರೂ ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬಡ್ತಿ ನೀಡುವಂತೆ ಕಾರವಾರ ಜಿಲ್ಲೆಯಲ್ಲಿ ಶಾಲಾ ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಹಾಗಾಗಿ ಸುಮಾರು ಶೇ 80ರಷ್ಟು ಶಾಲೆಗಳಲ್ಲಿ ಸಮಸ್ಯೆಯಾಗಿಲ್ಲ. ಉಳಿದ ಶಾಲೆಗಳಲ್ಲಿ ಕೂಡ ಶೀಘ್ರವೇ ಸರಿಹೋಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

***

ಕೋವಿಡ್ ಸಂದರ್ಭದಲ್ಲಿ ಹಲವೆಡೆ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹೆಚ್ಚು ದಾಖಲಾತಿಯಾಗಿದ್ದು, ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕಡಿಮೆಯಾದ ಉದಾಹರಣೆಗಳಿವೆ.
– ಹರೀಶ ಗಾಂವ್ಕರ್, ಉಪ ನಿರ್ದೇಶಕ, ಕಾರವಾರ ಶೈಕ್ಷಣಿಕ ಜಿಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT