ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ವರ್ಷಾಂತ್ಯಕ್ಕೆ ಪ್ರವಾಸಿ ತಾಣಕ್ಕೆ ಬೇಡಿಕೆ

ಕಡಲತೀರಗಳಲ್ಲಿ ಕಿಕ್ಕಿರಿದು ಸೇರುತ್ತಿರುವ ಜನ: ಹೋಂ ಸ್ಟೇ, ರೆಸಾರ್ಟ್‌ಗಳು ಭರ್ತಿ
Last Updated 24 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಕ್ರಿಸ್‌ಮಸ್ ಹಬ್ಬ ಮತ್ತು ವರ್ಷದ ಕೊನೆಯ ರಜಾ ದಿನಗಳು ಸಮೀಪಿಸುತ್ತಿರುವ ಕಾರಣ, ಜಿಲ್ಲೆಯ ಪ್ರವಾಸಿ ತಾಣಗಳತ್ತ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಡಲತೀರಗಳಲ್ಲಿ ಸೂರ್ಯಾಸ್ತದ ವೇಳೆಗೆ ಜನ ಕಿಕ್ಕಿರಿದು ಸೇರುತ್ತಿದ್ದಾರೆ.

ಕೊರೊನಾ ಕಾರಣದಿಂದ ವಿಧಿಸಲಾಗಿದ್ದ ನಿರ್ಬಂಧಗಳು ಹಂತಹಂತವಾಗಿ ತೆರವಾಗಿರುವುದು ಪ್ರವಾಸಿಗರಿಗೆ ಅನುಕೂಲ ಮಾಡಿದೆ. ಲಾಕ್‌ಡೌನ್, ಮನೆಯಿಂದಲೇ ಕೆಲಸದಂಥ ನಿಯಮಗಳಿಂದ ಬೇಸತ್ತಿದ್ದ ನಗರವಾಸಿಗಳು, ಈಗ ಪ್ರವಾಸಿ ತಾಣಗಳನ್ನು ಅರಸುತ್ತ ಬರುತ್ತಿದ್ದಾರೆ. ಜೊಯಿಡಾ, ದಾಂಡೇಲಿಯಲ್ಲಿ ವನಸಿರಿಯ ನಡುವೆ ಇರುವ ಹೋಂ ಸ್ಟೇಗಳು, ರೆಸಾರ್ಟ್‌ಗಳು ಈಗ ಅತಿಥಿಗಳಿಂದ ತುಂಬಿವೆ.

ಕಾಡಿನ ವೀಕ್ಷಣೆ, ಬೆಳಿಗ್ಗೆ ಮತ್ತು ಸಂಜೆ ಸಫಾರಿ ಮೂಲಕ ವನ್ಯಜೀವಿಗಳ ಹುಡುಕಾಟದಲ್ಲಿ ತಲ್ಲೀನರಾಗಿ ಮನಸ್ಸು ಹಗುರಗೊಳಿಸುತ್ತಿದ್ದಾರೆ. ಇತ್ತ ಕರಾವಳಿಯ ಕಡಲತೀರಗಳಲ್ಲಿ ಭಾರಿ ಸಂಖ್ಯೆಯ ಜನರು ಸೇರುತ್ತಿದ್ದಾರೆ. ಅಲೆಗಳ ನಡುವೆ ಆಟವಾಡುತ್ತ, ಈಜಾಡುತ್ತ ಸಂಭ್ರಮಿಸುತ್ತಿದ್ದಾರೆ.

ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಗೋಕರ್ಣದ ಮೇನ್ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ‘ಬ್ಲೂ ಫ್ಲ್ಯಾಗ್’ ಹಿರಿಮೆಯ ಹೊನ್ನಾವರದ ಕಾಸರಕೋಡು ಕಡಲತೀರಗಳಿಗೆ ನಿತ್ಯವೂ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಇದು ಲಾಕ್‌ಡೌನ್‌ನಿಂದ ಕಳಾಹೀನವಾಗಿದ್ದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚಿಲುಮೆ ತಂದಿದೆ.

‘ಗದ್ದಲವಿದ್ದರೆ ಬೇಡ’:

‘ದಾಂಡೇಲಿ, ಜೊಯಿಡಾ ಭಾಗದ ಬಹುತೇಕ ಎಲ್ಲ ಹೋಂ ಸ್ಟೇಗಳು ಭರ್ತಿಯಾಗಿವೆ. ಮತ್ತಷ್ಟು ಆಸಕ್ತರಿಂದ ವಿಚಾರಣೆಗಳೂ ಇವೆ. ಬೆಂಗಳೂರು ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಸಂಗೀತ, ಡಿ.ಜೆ, ಪಾರ್ಟಿಗಳ ಗದ್ದಲವಿದ್ದರೆ ನಾವು ಬರುವುದಿಲ್ಲ ಎನ್ನುವ ಮಂದಿಯೂ ಅಧಿಕವಿದ್ದಾರೆ’ ಎನ್ನುತ್ತಾರೆ ಜೊಯಿಡಾದ ಕಾಡುಮನೆ ಹೋಂ ಸ್ಟೇ ಮಾಲೀಕ ನರಸಿಂಹ ಭಟ್ ಛಾಪಖಂಡ.

‘ಡಿ.30ರವರೆಗೆ ಹೆಚ್ಚಿನ ಪ್ರವಾಸಿಗರಿದ್ದಾರೆ. ಅವರಲ್ಲಿ ಬಹುತೇಕರು 31ರಂದು ಗೋವಾಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಗದ್ದಲಗಳು ಬೇಡ ಎನ್ನುವವರು ಸ್ಥಳೀಯವಾಗಿ ಉಳಿದುಕೊಳ್ಳುತ್ತಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

‘ಮಾರ್ಗಸೂಚಿಯಂತೆ ಅವಕಾಶ’:

‘ಸರ್ಕಾರದ ಮಾರ್ಗಸೂಚಿಯ ಪ್ರಕಾರ ಈ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಪರಸ್ಪರ ಅಂತರ ಕಾಯ್ದುಕೊಂಡು, ಹೆಚ್ಚು ಜನ ಸೇರದೇ ಖಾಸಗಿಯಾಗಿ ಸೇರಬಹುದು. ರಾಜ್ಯದಲ್ಲಿ ರಾತ್ರಿ ಕರ್ಫ್ಯೂವನ್ನು ರಾಜ್ಯ ಸರ್ಕಾರ ತೆರವು ಮಾಡಿದ ಬಳಿಕ ಹೊಸ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯೂ ಕಾರ್ಯ ನಿರ್ವಹಿಸಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT