ಶನಿವಾರ, ಸೆಪ್ಟೆಂಬರ್ 18, 2021
24 °C
ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಶ್ಲಾಘನೆ

ರಾಜ್ಯದ ನಂ.1 ಜಿಲ್ಲಾ ಮಧ್ಯವರ್ತಿ ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಜ್ಯದ 21 ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳ ಪೈಕಿ ಉತ್ತರ ಕನ್ನಡದ ಕೆಡಿಸಿಸಿ ಬ್ಯಾಂಕ್ ನಂ.1 ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಶ್ಲಾಘಿಸಿದರು.

ಬ್ಯಾಂಕ್‍ ಪ್ರಧಾನ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಲ ನೀಡಿಕೆ, ವಸೂಲಾತಿ ಸೇರಿದಂತೆ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಯಲ್ಲಿ ಬ್ಯಾಂಕ್ ಮುಂಚೂಣಿಯಲ್ಲಿದೆ’ ಎಂದರು.

ಮೈಕ್ರೊ ಎ.ಟಿ.ಎಂ. ಸೌಲಭ್ಯ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ‘ಕೃಷಿರಂಗದ ಅಭಿವೃದ್ಧಿಗೆ ಬ್ಯಾಂಕ್ ನೀಡಿದ ಕೊಡುಗೆ ಅನನ್ಯ. ಕೃಷಿ ಜತೆಗೆ ಕೃಷಿಕನನ್ನೂ ಬೆಳೆಸಲು ಪೂರಕ ವಾತಾವರಣ ಸೃಷ್ಟಿಯಾಗಲಿ’ ಎಂದರು.

ಭಾರತ್ ಬಿಲ್ ಪೇಮೆಂಟ್ ಸಿಸ್ಟಂ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ‘ಸಹಬಾಳ್ವೆಯ ಆದರ್ಶದೊಂದಿಗೆ ಬ್ಯಾಂಕು ಏಳಿಗೆಯ ಪಥದಲ್ಲಿ ಸಾಗಿರುವುದು ಮಾದರಿ’ ಎಂದರು.

ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಸಹಕಾರ ಸಂಸ್ಥೆಗಳು ಜನರ ಬದುಕು ರೂಪಿಸಿದ್ದು ಆರ್ಥಿಕವಾಗಿ ಕೆಡಿಸಿಸಿ ಬ್ಯಾಂಕ್ ಆಧಾರಸ್ತಂಭವಾಗಿ ನಿಂತಿದೆ’ ಎಂದರು.

ಆಡಳಿತ ಭವನದ ಹೊಸ ಕಟ್ಟಡ ಉದ್ಘಾಟಿಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಬ್ಯಾಂಕ್ ಜಿಲ್ಲೆಯ ಜನರ ಧ್ವನಿಯಾಗಿ ನಿಂತಿದೆ. ತಳಮಟ್ಟದ ಸಹಕಾರ ಸಂಸ್ಥೆಗಳನ್ನೂ ಬೆಳೆಸಿದೆ’ ಎಂದರು.

ಶಾಸಕ ಆರ್.ವಿ. ದೇಶಪಾಂಡೆ, ‘ಬ್ಯಾಂಕ್ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಿ. ದೇಶದ ಪ್ರತಿಷ್ಠಿತ ಸಂಸ್ಥೆ ಎಂಬ ಗುರುತು ಹೆಮ್ಮೆ ತರುವಂತದ್ದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಮ ಹೆಬ್ಬಾರ, ‘ರೈತರ ಏಳಿಗೆಗೆ ಬ್ಯಾಂಕ್ ನಿರಂತರ ದುಡಿಯುತ್ತಿದೆ. ಸಹಕಾರ ರಂಗದಲ್ಲಿ ಆಲದ ಮರದಂತೆ ಭದ್ರವಾಗಿ ನಿಂತಿದೆ’ ಎಂದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಕೃಷಿ ಸಾಲ ವಿತರಣೆಗೆ ಚಾಲನೆ ನೀಡಿದರು.

ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಎಸ್.ವಿ. ಸಂಕನೂರು, ಎಸ್.ಎಲ್. ಘೋಟ್ನೇಕರ್, ಪ್ರಮುಖರಾದ ವಿ.ಎಸ್. ಪಾಟೀಲ್, ರಾಜೇಂದ್ರಕುಮಾರ್, ಅನಂತ ಹೆಗಡೆ ಅಶೀಸರ, ಪ್ರಮೋದ ಹೆಗಡೆ, ಬ್ಯಾಂಕಿನ ನಿರ್ದೇಶಕರು ಇದ್ದರು. ಉಪಾಧ್ಯಕ್ಷ ಮೋಹನದಾಸ ನಾಯಕ ಸ್ವಾಗತಿಸಿದರು.

ಸಹಕಾರ ತರಬೇತಿ ಕೇಂದ್ರ ಸ್ಥಾಪನೆ ಭರವಸೆ

ಬದಲಾಗುತ್ತಿರುವ ಸಹಕಾರ ಕಾಯ್ದೆಗಳ ಕುರಿತು ಸಕಾಲಕ್ಕೆ ಮಾಹಿತಿ, ತರಬೇತಿ ನೀಡುವ ನಿಟ್ಟಿನಲ್ಲಿ ಉತ್ತರ ಕನ್ನಡದಲ್ಲಿ ಸಹಕಾರ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಭರವಸೆ ನೀಡಿದರು.

‘ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವದ ನೆನಪಿನಲ್ಲಿ ಸಹಕಾರ ಇಲಾಖೆ ಜಿಲ್ಲೆಯಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಮಾಡಲಿ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.