ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅತಿಥಿಗಳಿಲ್ಲದೇ ಸೊರಗಿದ ‘ಸಿದ್ದಿಗರು’

ನಿರ್ವಹಣೆಗೆ ಆದಾಯದ ಕೊರತೆ; ಶಿಲ್ಪಗಳ ರಕ್ಷಣೆಗೆ ಒತ್ತಾಯ
Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ 19 ಕಾರಣಕ್ಕೆ ಅತಿಥಿಗಳಿಲ್ಲದೇ ಹಾಲಕ್ಕಿಗರು, ಸಿದ್ದಿಗರು, ಗೌಳಿಗರು ಸೊರಗಿದ್ದಾರೆ. ಅವರ ಜೊತೆಗಾರರಾಗಿರುವ ಜಿಂಕೆ, ಹುಲಿ, ಆನೆ, ಡಾಲ್ಫಿನ್‌ಗಳು ಬಡವಾಗಿವೆ! ಪ್ರವಾಸಿಗರನ್ನು ಸೆಳೆಯುತ್ತಿದ್ದ ಇಲ್ಲಿನ ಶಾಲ್ಮಲಾ ಶಿಲ್ಪವನದ ಈ ಸದಸ್ಯರು ಮೂರು ತಿಂಗಳುಗಳಿಂದ ಲಾಕ್‌ಡೌನ್ ಆಗಿದ್ದಾರೆ.

ಮುಗಿಲಿಗೆ ಮುಖ ಮಾಡಿರುವ ಮರಗಳು, ಕಣ್ಸೆಳೆವ ಶಿಲ್ಪಗಳಿಂದಾಗಿ ಶಾಲ್ಮಲಾ ಶಿಲ್ಪವನವು ಜನರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಅನುದಾನದಲ್ಲಿ ₹ 1.20 ಕೋಟಿ ವೆಚ್ಚದಲ್ಲಿ ನಾಲ್ಕು ವರ್ಷಗಳ ಹಿಂದೆ ಈ ಶಿಲ್ಪವನ ನಿರ್ಮಾಣಗೊಂಡಿದೆ. ಶಿಗ್ಗಾವಿ ಸಮೀಪದ ಗೊಡಗೋಡಿ ರಾಕ್‌ ಗಾರ್ಡನ್ ಸಿದ್ಧಪಡಿಸಿರುವ ಸೊಲಬಕ್ಕನವರ್ ಈ ಇಲ್ಲಿನ ಶಿಲ್ಪ ಕಲಾಕೃತಿಗೆ ಜೀವಂತಿಕೆ ನೀಡಿದ್ದಾರೆ. ಸದಾ ಪ್ರವಾಸಿಗರು, ಸ್ಥಳೀಯರಿಂದ ತುಂಬಿರುತ್ತಿದ್ದ, ಈ ವನದಲ್ಲಿ ಈಗ ನಿರ್ಜೀವ ಪ್ರಾಣಿಗಳು ಮಾತ್ರ ಕಾಣುತ್ತಿವೆ.

ಕೋವಿಡ್ 19 ಲಾಕ್‌ಡೌನ್ ಕಾರಣಕ್ಕೆ ಶಿಲ್ಪವನದ ಪ್ರವೇಶವನ್ನು ನಿಷೇಧಿಸಲಾಗಿತ್ತು. ಲಾಕ್‌ಡೌನ್ ಸಡಿಲಿಕೆಯ ನಂತರ ಶಿಲ್ಪವನ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಜನರು ಮಾತ್ರ ಇತ್ತ ಸುಳಿಯುತ್ತಿಲ್ಲ. ಹೀಗಾಗಿ, ಇದರ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

‘ನವೆಂಬರ್, ಡಿಸೆಂಬರ್‌ ತಿಂಗಳುಗಳಲ್ಲಿ ದಿನಕ್ಕೆ 100ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರೆ, ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಹಿರಿಯರಿಗೆ ತಲಾ ₹ 30 ಹಾಗೂ ಮಕ್ಕಳು ತಲಾ ₹ 10 ಟಿಕೆಟ್ ದರವಿದೆ. ಇದೇ ಹಣ ಸಂಗ್ರಹದಿಂದ ಶಿಲ್ಪವನವನ್ನು ನಿರ್ವಹಣೆ ಮಾಡಲಾಗುತ್ತಿತ್ತು. ಮಳೆಗಾಲದ ಒಳಗಾಗಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದವು. ಈ ಬಾರಿ ಅನುದಾನದ ಕೊರತೆಯಿಂದ ಈ ಕಾರ್ಯ ನಡೆದಿಲ್ಲ’ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಆರು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ₹ 10ಸಾವಿರಕ್ಕಿಂತ ಕಡಿಮೆ ಆದಾಯ ಸಂಗ್ರಹವಾಗಿದೆ. ಹೀಗಾಗಿ, ಸಿಬ್ಬಂದಿ ಸಂಬಳಕ್ಕೂ ತೊಂದರೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.

‘ಶಿಲ್ಪವನದಲ್ಲಿ ಕಲಾಕೃತಿಗಳು ಹಾಳಾಗಂತೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಊರಿನ ಆಕರ್ಷಣೆಯಾಗಿರುವ ಶಿಲ್ಪವನ ಪಾಳುಬಿದ್ದ ಸ್ಥಳದಂತಾಗಬಹುದು’ ಎಂದು ಸ್ಥಳೀಯ ಜಿ.ಎನ್.ಸುರೇಶ ಒತ್ತಾಯಿಸಿದ್ದಾರೆ.

***

ಶಿಲ್ಪವನಕ್ಕೆ ಅಂದಾಜು ₹ 5 ಲಕ್ಷ ಆದಾಯ ನಷ್ಟವಾಗಿದೆ. ಇದರಿಂದ ಶಿಲ್ಪವನದ ಸಮಗ್ರ ನಿರ್ವಹಣೆ ಕಷ್ಟವಾಗಿದೆ. ಆದರೂ, ಇಲಾಖೆ ಮುತುವರ್ಜಿವಹಿಸಿ ಅವುಗಳ ರಕ್ಷಣೆ ಮಾಡುತ್ತದೆ.

– ಅಮಿತ್ ಚೌವ್ಹಾಣ್,ಆರ್‌ಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT