ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಪ್ರತಿ ಸುತ್ತಿನಲ್ಲೂ ಮತಗಳ ನಾಗಾಲೋಟ

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
Last Updated 24 ಮೇ 2019, 19:45 IST
ಅಕ್ಷರ ಗಾತ್ರ

ಶಿರಸಿ: ವಿಧಾನಸಭೆ ಫಲಿತಾಂಶ ಆಧರಿಸಿ ಲೋಕಸಭೆ ಚುನಾವಣೆಯಲ್ಲಿ ಮತಗಳು ನಿರ್ಧರಿತವಾಗುತ್ತವೆ ಎಂಬ ಸಾಮಾನ್ಯ ಲೆಕ್ಕಾಚಾರ ತಲೆಕೆಳಗಾಗಿದೆ. ಮತದಾರನ ಮಾನಸಿಕತೆ ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತದೆ ಎಂಬುದಕ್ಕೆ ಗುರುವಾರ ಪ್ರಕಟಗೊಂಡ ಫಲಿತಾಂಶ ಸಾಕ್ಷಿಯಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಐದು ಕಡೆ ಬಿಜೆಪಿ ಶಾಸಕರು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಂದ ಹಿಡಿದು, ಎಲ್ಲ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅಧಿಕ ಮತಗಳನ್ನು ಪಡೆದಿದ್ದಾರೆ.

ಕ್ಷೇತ್ರದಲ್ಲಿ 11.49 ಲಕ್ಷ ಮತದಾರರು ಮತ ಚಲಾಯಿಸಿದ್ದರು. ಅವುಗಳಲ್ಲಿ ಶೇ 68.15ರಷ್ಟು ಮತಗಳು ಅನಂತಕುಮಾರ ಅವರಿಗೆ ದೊರೆತಿದ್ದರೆ, ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪಡೆಯಲು ಸಾಧ್ಯವಾಗಿದ್ದು ಶೇ 26.56ರಷ್ಟು ಮತಗಳು ಮಾತ್ರ.

ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿದ್ದಾರೆ. ಇಲ್ಲಿ ಕಾಂಗ್ರೆಸ್‌ ಪ್ರಾಬಲ್ಯವೂ ಇದೆ. ಆದರೆ ಇಲ್ಲಿ ಬಿಜೆಪಿಗೆ 1,13,386 ಮತಗಳ ಬಂದಿವೆ. ಕಾಂಗ್ರೆಸ್‌– ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು 25108 ಮತದಾರರಷ್ಟೇ ಒಪ್ಪಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನಿರಂತರವಾಗಿ ಗೆಲ್ಲುತ್ತಿರುವ ಮತ್ತು ಕಾಂಗ್ರೆಸ್ ಪ್ರಾಬಲ್ಯವಿರುವ ಹಳಿಯಾಳದಲ್ಲಿ ಸಹ ಈ ಚುನಾವಣೆಯಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ದೇಶಪಾಂಡೆ ಪಡೆದಿದ್ದು 61,577. ಇಲ್ಲಿ ಅಸ್ನೋಟಿಕರ್ 39,865 ಮತ ಪಡೆದಿದ್ದರೆ, ಬಿಜೆಪಿ 81,629 ಮತಗಳನ್ನು ಗಳಿಸಿದೆ. ಕಾಂಗ್ರೆಸ್ ಶಾಸಕರಿರುವ ಯಲ್ಲಾಪುರದಲ್ಲೂ ಮೈತ್ರಿ ಅಭ್ಯರ್ಥಿಗಿಂತ ಬಿಜೆಪಿ ಎರಡು ಪಟ್ಟು ಹೆಚ್ಚು ಮತಗಳು ಬಂದಿವೆ.

ಇನ್ನು ಬಿಜೆಪಿ ಶಾಸಕರಿರುವ ಶಿರಸಿ, ಕುಮಟಾ, ಭಟ್ಕಳ, ಕಾರವಾರ, ಕಿತ್ತೂರು ಕ್ಷೇತ್ರಗಳಲ್ಲೂ, ವಿಧಾನಸಭೆ ಚುನಾವಣೆಯಲ್ಲಿ ಶಾಸಕರು ಪಡೆದ ಮತಕ್ಕಿಂತ ಅಧಿಕ ಮತಗಳನ್ನು ಅನಂತಕುಮಾರ ಪಡೆದುಕೊಂಡಿದ್ದಾರೆ. ಬಿಜೆಪಿ ಪ್ರಾಬಲ್ಯವಿರುವ ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ 70,595 ಮತ ಪಡೆದಿದ್ದರೆ, ಈ ಕ್ಷೇತ್ರದಲ್ಲಿ ಅನಂತಕುಮಾರ ಪರ 1 ಲಕ್ಷಕ್ಕೂ ಹೆಚ್ಚು ಮತದಾರರು ಮತ ಹಾಕಿದ್ದಾರೆ.

ಆನಂದ ಅಸ್ನೋಟಿಕರ ಅವರ ಸ್ವ ಕ್ಷೇತ್ರ ಕಾರವಾರದಲ್ಲೂ, ಅವರಿಗಿಂತ ಅನಂತಕುಮಾರ 75,786 ಹೆಚ್ಚು ಮತ ತೆಗೆದುಕೊಂಡಿದ್ದಾರೆ. ಮತ ಎಣಿಕೆಯ ವೇಳೆ ಕೆಲವು ಕ್ಷೇತ್ರಗಳಲ್ಲಿ 17 ಸುತ್ತಿನ ಎಣಿಕೆಯಿದ್ದರೆ, ದೊಡ್ಡ ಕ್ಷೇತ್ರಗಳಲ್ಲಿ 21 ಸುತ್ತಿನ ಎಣಿಕೆ ಇತ್ತು. ಎಲ್ಲ ಕ್ಷೇತ್ರಗಳಲ್ಲೂ ಮೊದಲನೇ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಬಿಜೆಪಿಯೇ ಮುನ್ನಡೆಯಲ್ಲಿತ್ತು.

ಹೇಗೆ ಸರಿದೂಗಿಸಲು ಸಾಧ್ಯ ?

‘ದೇಶದಲ್ಲಿ ಜನರು ಕೊಟ್ಟಿರುವ ತೀರ್ಪನ್ನು ಗೌರವದಿಂದ ಒಪ್ಪಿಕೊಳ್ಳಬೇಕಾಗಿದೆ. ಅನಂತಕುಮಾರ ದೊಡ್ಡ ಅಂತರದಿಂದ ಗೆದ್ದಿದ್ದಾರೆ. ಜನರು ಇಟ್ಟುಕೊಂಡಿರುವ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿಯಲ್ಲಿ ಅವರು ತೊಡಗಿಕೊಳ್ಳಲಿ. ಉತ್ತರ ಕನ್ನಡ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್ಸಿಗೆ ಹಿನ್ನಡೆಯಾಗದು. ಜೆಡಿಎಸ್‌ಗೆ ಸೀಟು ಬಿಟ್ಟುಕೊಟ್ಟ ಆರಂಭದ ದಿನದಿಂದಲೂ ನಾವು ಹೇಳಿದ್ದೇವೆ. ಕಳೆದ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ 4.5 ಲಕ್ಷ ಮತ ಗಳಿಸಿದ್ದರೆ ಜೆಡಿಎಸ್1 ಲಕ್ಷ ಮತ ಪಡೆದಿತ್ತು. ಇದನ್ನು ಹೇಗೆ ಸರಿದೂಗಿಸಲು ಸಾಧ್ಯ ? ಚುನಾವಣೆ ಸಂದರ್ಭದಲ್ಲೂ ಇದನ್ನು ವರಿಷ್ಠರ ಗಮನಕ್ಕೆ ತರಲಾಗಿತ್ತು. ಪಕ್ಷದ ನಿರ್ಣಯವನ್ನು ಒಪ್ಪಿಕೊಂಡು, ಮೈತ್ರಿ ಅಭ್ಯರ್ಥಿ ಗೆಲುವಿಗೆ ನಮ್ಮ ಎಲ್ಲ ಪ್ರಯತ್ನ ಮಾಡಿದ್ದೆವು’ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT