ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಬಂದು ತಿಂಗಳಾದರೂ ತಪ್ಪದ ಬವಣೆ

ಮುಂಡಗೋಡ: ಬೇಡ್ತಿ ಪ್ರವಾಹದಿಂದ ಅತಂತ್ರವಾದ ಬದುಕು
Last Updated 6 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮುಂಡಗೋಡ: ಬೇಡ್ತಿ ಹಳ್ಳದ ಹರಿವಿಗೆ ಸಂಪರ್ಕ ಕಡಿತಗೊಂಡು ಒಂದು ತಿಂಗಳು (ಅ.8) ಆಗುತ್ತ ಬಂದಿದೆ. ತಾತ್ಕಾಲಿಕ ಕ್ರಮ ಕೈಗೊಳ್ಳದ ಕಾರಣ ನಿತ್ಯವೂ ನೂರಾರು ಜನರು ಊರು ಸೇರಲು ಪರದಾಡುತ್ತಿದ್ದಾರೆ. ಸ್ಥಳೀಯರ ಅಭಿಪ್ರಾಯಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ.

ಮುಂಡಗೋಡ– ಯಲ್ಲಾಪುರ ತಾಲ್ಲೂಕುಗಳ ಕೊಂಡಿಯಾಗಿರುವ ಶಿಡ್ಲಗುಂಡಿ ಸೇತುವೆಯ ಸಂಪರ್ಕ ರಸ್ತೆ ಇತ್ತೀಚಿನ ಬೇಡ್ತಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು. ಸಂಪರ್ಕ ಕಡಿತದಿಂದ ಯಲ್ಲಾಪುರಕ್ಕೆ ನಿತ್ಯ ಸಂಚರಿಸುವ ತಾಲ್ಲೂಕಿನ ಮೈನಳ್ಳಿ, ಶಿಡ್ಲಗುಂಡಿ, ಗುಂಜಾವತಿ ಭಾಗದ ನೂರಾರು ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ಹೋಗುವರು, ಗಡಿಭಾಗದ ಗ್ರಾಮಗಳಲ್ಲಿ ಸರ್ಕಾರಿ, ಅರೆ ಸರ್ಕಾರಿ ಕೆಲಸ ಮಾಡುವರು..ಹೀಗೆ ನೂರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಸೇತುವೆಯ ಎರಡೂ ಬದಿಯ ರಸ್ತೆ ಕೊಚ್ಚಿ ಹಳ್ಳದ ದಂಡೆ ವಿಸ್ತರಿಸಿಕೊಂಡಿದೆ. ಮಧ್ಯದಲ್ಲಿ ಸೇತುವೆಯೊಂದು ಮಾತ್ರ ಉಳಿದಿದ್ದು, ರಸ್ತೆ ಇಲ್ಲದಂತಾಗಿದೆ. ಅದರಲ್ಲಿಯೇ ನೂರಾರು ಜನರು ಹೊಟ್ಟೆಪಾಡಿಗಾಗಿ ಈ ಭಾಗದಿಂದ ಆ ಭಾಗಕ್ಕೆ ಹಳ್ಳದಲ್ಲಿ ಇಳಿದು ಜೀವ ಕೈಯಲ್ಲಿ ಹಿಡಿದು ಮನೆ ಸೇರುತ್ತಿದ್ದಾರೆ.

‘ಕೆಲವು ವರ್ಷಗಳ ಹಿಂದೆ ಸೇತುವೆಯ ಪುನರ್‌ ನಿರ್ಮಾಣದ ಸಂದರ್ಭದಲ್ಲಿ ನಿರ್ಮಿಸಿದ್ದ ಕಾಲು ಸಂಕವನ್ನೇ ಈಗ ದುರಸ್ತಿ ಮಾಡಿಸಿದ್ದರೆಜನರು ಇಷ್ಟು ತೊಂದರೆ ಪಡಬೇಕಾಗಿರಲಿಲ್ಲ. ರಸ್ತೆ ಕೊಚ್ಚಿಕೊಂಡು ಒಂದು ತಿಂಗಳು ಕಳೆದಿದೆ. ಇಲ್ಲಿಯವರೆಗೆ ಅಧಿಕಾರಿಗಳು ಸಮಯ ಹಾಗೂ ಸರ್ಕಾರದ ದುಡ್ಡು ವ್ಯರ್ಥ ಮಾಡಿದ್ದು ಬಿಟ್ಟರೆಜನರಿಗೆ ಉಪಯೋಗ ಮಾಡಲಿಲ್ಲ. ಕಾಲುಸಂಕವನ್ನೇ ದುರಸ್ತಿ ಮಾಡಿಸಿ ಎಂದರೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರಕಾಶ ಮಹಾಲೆ ಆಕ್ರೋಶದಿಂದ ಹೇಳಿದರು.

‘100– 150 ವಿದ್ಯಾರ್ಥಿಗಳು ಯಲ್ಲಾಪುರಕ್ಕೆ ಈ ತಾಲ್ಲೂಕಿನಿಂದ ಹೋಗುತ್ತಾರೆ. ಹಳ್ಳ ಇಳಿದು, ಸೇತುವೆ ಹತ್ತಿ ಮತ್ತೆ ಕೊಚ್ಚಿರುವ ರಸ್ತೆಯ ಗುಂಡಿಯಲ್ಲಿ ಇಳಿದು ಮಕ್ಕಳನ್ನು ಸುರಕ್ಷಿತವಾಗಿ ಸಾಗಿಸಬೇಕಾಗಿದೆ. ರಸ್ತೆ ಸಾರಿಗೆ ಬಸ್‌ಗಳು ಸಹ ಹುಲಗೋಡ ಕ್ರಾಸ್‌ನಲ್ಲಿ ನಿಲ್ಲುತ್ತವೆ. ನಿತ್ಯ 2– 3 ಕಿ.ಮೀ ನಡೆಯಬೇಕು. ಇಲ್ಲವೇ ಖಾಸಗಿ ವಾಹನಗಳನ್ನು ಏರಿ ಹೋಗಬೇಕು. ಜನರು ಇಷ್ಟು ತೊಂದರೆ ಪಡುತ್ತಿದ್ದರೂ, ಹಳೆಯ ಕಾಲುಸಂಕ ದುರಸ್ತಿ ಮಾಡಿಸಬೇಕೆನ್ನುವ ಕಾಳಜಿ ಅಧಿಕಾರಿಗಳಿಗೆ ಬಾರದಿರುವುದು ವಿಪರ್ಯಾಸ’ ಎಂದು ಸ್ಥಳೀಯ ನಿವಾಸಿ ಸುಬ್ರಾಯ ಭಟ್ಟ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT