ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಕಾಮಗಾರಿಗೆ ವಿರೋಧ: ಸ್ಥಗಿತ

Last Updated 9 ಮೇ 2021, 16:04 IST
ಅಕ್ಷರ ಗಾತ್ರ

ಕಾರವಾರ: ನಗರದ ಕೋಡಿಬಾಗ ರಸ್ತೆಯ ಸಾಯಿಕಟ್ಟಾದಲ್ಲಿ ಭಾನುವಾರ ನಗರಸಭೆಯಿಂದ ಆರಂಭವಾದ ಚರಂಡಿ ಕಾಮಗಾರಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು.

ಈ ಭಾಗದಲ್ಲಿ ಮಳೆ ನೀರು ಹರಿಯುವ ಚರಂಡಿಯಿದ್ದು, ಅಪೂರ್ಣವಾಗಿದೆ. ಸುಮಾರು 70 ಮೀಟರ್‌ಗಳಷ್ಟು ಕಾಮಗಾರಿಯಾದರೆ ಚರಂಡಿ ಪೂರ್ಣಗೊಳ್ಳುತ್ತದೆ. ಚರಂಡಿಯು ಕೊನೆಗೊಳ್ಳುವಲ್ಲಿ ಇರುವ ಮನೆಯ ಆವರಣಕ್ಕೆ ಮಳೆಗಾಲದಲ್ಲಿ ನೀರು ನುಗ್ಗುತ್ತದೆ. ಹಾಗಾಗಿ ಆ ಕಾಮಗಾರಿಯನ್ನು ಪೂರ್ಣಗೊಳಿಸಲು ನಗರಸಭೆ ಮುಂದಾಗಿತ್ತು. ಇದಕ್ಕೆ ಕೆಲವರು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿಯನ್ನು ತಡೆಹಿಡಿದರು.

‘ಈ ಭಾಗದಲ್ಲಿ ರಸ್ತೆಯು ಒಂಬತ್ತು ಮೀಟರ್ ವಿಸ್ತರಣೆ ಆಗಬೇಕಿತ್ತು. ಆದರೆ, ಸಮೀಪದ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ಇದು ವಿವಾದಿತ ಪ್ರದೇಶವಾಗಿದೆ. ಈಗ ಇರುವ ಆರು ಮೀಟರ್ ರಸ್ತೆಯ ಬದಿಯಲ್ಲೇ ಚರಂಡಿ ಮಾಡಿದರೆ ರಸ್ತೆ ವಿಸ್ತರಣೆ ಹೇಗಾಗುತ್ತದೆ? ಈ ಹಿಂದೆ ರಸ್ತೆ ಅಭಿವೃದ್ಧಿಗಾಗಿ ನಾವೆಲ್ಲ ಖುಷಿಯಿಂದ ಜಾಗ ಬಿಟ್ಟಿದ್ದೆವು. ಅಂಥದ್ದರಲ್ಲಿ ವಿವಾದಿತ ಜಾಗದಲ್ಲೇ ನಗರಸಭೆ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕೋಡಿಬಾಗ ರಸ್ತೆಯಲ್ಲಿ ಒಂದೊಂದು ಕಡೆ ಒಂದೊಂದು ರೀತಿ ಕಾಮಗಾರಿ ಮಾಡಿದ್ದಾರೆ. ಕಳೆದ ಮಳೆಗಾಲ ಕೆಲವರ ಮನೆಗಳಿಗೆ ನೀರು ನುಗ್ಗಿತ್ತು. ಆಗ ಅದರ ಬಗ್ಗೆ ನಗರಸಭೆ ಮುತುವರ್ಜಿ ವಹಿಸಿರಲಿಲ್ಲ. ಈಗ ಏಕಾಏಕಿ ಕಾಮಗಾರಿ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ಪ್ರಜಾರಕ್ಷಣಾ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷ ವಿನಾಯಕ ನಾಯ್ಕ ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ, ‘ಚರಂಡಿಗೆ ಜಾಗ ಬಿಟ್ಟವರ ಮನೆಗೆ ನೀರು ನುಗ್ಗುತ್ತದೆ. ಸುಮಾರು 70 ಮೀಟರ್‌ ಕಾಮಗಾರಿಯಾದರೆ ಚರಂಡಿ ಪೂರ್ಣಗೊಳ್ಳುತ್ತದೆ. ಅದನ್ನು ಪೂರ್ಣಗೊಳಿಸುವಂತೆ ನಗರಸಭೆ ಅಧ್ಯಕ್ಷರು ಸೂಚಿಸಿದ್ದರು. ಅದರಂತೆ ಕಾಮಗಾರಿ ಆರಂಭಿಸಲಾಗಿತ್ತು. ಜನರ ಆಕ್ಷೇಪದ ಕಾರಣ ನಿಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ತೀರ್ಮಾನವಾದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT