ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನಲ್ಲಿ ಅನುರಣಿಸಿದ ಮಾರಿಕಾಂಬೆ ಹೆಸರು

ದೇವಿ ಹೆಸರಿನಲ್ಲಿ ವನ ನಿರ್ಮಾಣಕ್ಕೆ ಚಾಲನೆ
Last Updated 28 ಜುಲೈ 2020, 11:41 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿ ಹೆಸರಿನಲ್ಲಿ ನೈಸರ್ಗಿಕ ಅರಣ್ಯ ಬೆಳೆಸುವ ವನ ನಿರ್ಮಾಣ ಯೋಜನೆಗೆ ಮಂಗಳವಾರ ಚಾಲನೆ ದೊರೆತಿದೆ. ತಾಲ್ಲೂಕಿನ ಎಸಳೆಯ ಅರಣ್ಯ ಇಲಾಖೆ ಜಾಗದಲ್ಲಿ ವಿವಿಧ ಜಾತಿಯ ಸಸಿಗಳನ್ನು ಸಾರ್ವಜನಿಕರು ನಾಟಿ ಮಾಡಿದರು.

ಅರಣ್ಯ ಇಲಾಖೆ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳಿ, ಬಾಬುದಾರರು, ಸಮಗ್ರ ವಿಕಾಸ ಟ್ರಸ್ಟ್ ಹಾಗೂ ಲಂಡಕನಹಳ್ಳಿ ಗ್ರಾಮ ಅರಣ್ಯ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಚಾಲನೆ ನೀಡಿದರು.

‘ದೇವಾಲಯದ ವತಿಯಿಂದ ಪ್ರತಿವರ್ಷ ಮುಂಗಾರು ಪೂರ್ವದಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸುವ ಕಾರ್ಯ ಹಮ್ಮಿಕೊಂಡರೆ ಉತ್ತಮ. ಆಯ್ದ ಕಾನು ಅರಣ್ಯಗಳ ಸುತ್ತ ಮಾರಿಕಾಂಬಾ ವನ ನಿರ್ಮಿಸಬಹುದು. ಪವಿತ್ರ ವನಗಳ ನಿರ್ಮಾಣ ಸಂಬಂಧ ಜಿಲ್ಲೆಯ ಎಲ್ಲ ದೇವಾಲಯಗಳ ಸಭೆ ನಡೆಯಲಿ. ಇದಕ್ಕೆ ಮಾರಿಕಾಂಬಾ ದೇವಾಲಯ ನೇತೃತ್ವ ವಹಿಸಲಿ’ ಎಂದು ಅವರು ಆಶಿಸಿದರು.

ಕಾರ್ಯಕ್ರಮದ ಸಂಯೋಜಕ ಚಂದ್ರು ದೇವಾಡಿಗ ಮಾತನಾಡಿ, ‘ಮಾರಿಕಾಂಬಾ ಜಾತ್ರೆ ವೇಳೆ ರಥ ಕಟ್ಟಲು ಹಸಿ ಮರ ಕಡಿಯಲಾಗುತ್ತದೆ. ಕಳೆದ ಜಾತ್ರೆಯಲ್ಲಿ ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆ ಅನುಮತಿ ಪಡೆದು ಮಾಲ್ಕಿ ಜಾಗದಲ್ಲಿರುವ ಒಂದು ಮರವನ್ನು ಕಟಾವು ಮಾಡಲಾಗಿತ್ತು. ಮರ ಕಡಿಯಲು ಹಿಂದಿನಿಂದಲೂ ಪರಿಸರ ಪ್ರಿಯರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಜತೆಗೆ ದೇವಿಯ ಹೆಸರಿನಲ್ಲಿ ವನ ನಿರ್ಮಿಸುವಂತೆ ಬೇಡಿಕೆಯನ್ನು ಸಹ ಇಟ್ಟಿದ್ದರು. ಪ್ರಸ್ತುತ ಎಲ್ಲರೂ ಒಟ್ಟಾಗಿ ವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಂದಲೇ ರಥ ಕಟ್ಟಲು ಮರದ ಬಳಕೆ ಮಾಡುವಂತಾಗಬೇಕು’ ಎಂದರು.

ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ಮಾತನಾಡಿ, ‘ವನ ನಿರ್ಮಾಣಕ್ಕೆ 100 ಎಕರೆಯಷ್ಟು ಜಾಗ ನೀಡುವಂತೆ ಅರಣ್ಯ ಇಲಾಖೆಯನ್ನು ವಿನಂತಿಸಲಾಗುವುದು. ನೈಸರ್ಗಿಕ ಅರಣ್ಯದ ಜೊತೆಗೆ ಹಣ್ಣಿನ ಗಿಡಗಳನ್ನು ನಾಟಿ ಮಾಡುವುದರಿಂದ ಪ್ರಾಣಿ–ಪಕ್ಷಿಗಳಿಗೆ ಆಹಾರ ಸಿಗುತ್ತದೆ’ ಎಂದರು.

ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಬಾಬುದಾರ ಜಗದೀಶ ಗೌಡ, ಡಿಸಿಎಫ್ ಎಸ್.ಜಿ.ಹೆಗಡೆ, ಎಸಿಎಫ್ ರಘು, ಆರ್‌ಎಫ್‌ಒ ಅಮಿತ್ ಚೌವ್ಹಾಣ್, ಸಮಗ್ರ ವಿಕಾಸ ಟ್ರಸ್ಟ್‌ನ ಉಮಾಪತಿ ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT