ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧೀಯ ಸಸ್ಯ ಪಾಲನೆಯೊಂದಿಗೆ ಸುಸ್ಥಿರ ಕೃಷಿ

ರೈತರು, ಕಂಪನಿಗಳ ನಡುವೆ ಕೊಂಡಿಯಾದ ಕಾರವಾರದ ಗಣೇಶ ನೇವರೇಕರ್
Last Updated 10 ಜೂನ್ 2019, 12:32 IST
ಅಕ್ಷರ ಗಾತ್ರ

ಕಾರವಾರ:ಅಲ್ಲಿದಟ್ಟವಾದ ಕಾಡು. ಅದರ ನಡುವೆ ಒಂದಷ್ಟು ಕೃಷಿ ಚಟುವಟಿಕೆಗಳು, ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಉಳಿಸಿ, ಬೆಳೆಸುವ ಸಲುವಾಗಿ ನರ್ಸರಿಯಲ್ಲಿ ಪಾಲನೆಯ ಕಾರ್ಯ. ಜೊತೆಗೆ ಸುಸ್ಥಿರ ಕೃಷಿಯ ಬಗ್ಗೆ ತರಬೇತಿ ಹಾಗೂ ಮಾಹಿತಿ ವಿನಿಮಯ.

ಕಾರವಾರ ತಾಲ್ಲೂಕಿನ ಬರಗಲದಲ್ಲಿ ಗಣೇಶ ನೇವರೇಕರ್ ಅವರು ತಮ್ಮ ಜಮೀನನ್ನು ಕೇಂದ್ರೀಕರಿಸಿಕೊಂಡು ಈ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ತಾವೂ ಅಭಿವೃದ್ಧಿಯಾಗುವುದರ ಜೊತೆಗೆ ರೈತರಿಗೂ ಮಾರುಕಟ್ಟೆ, ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿದ್ದಾರೆ.

ಆಯುರ್ವೇದ ಔಷಧಿಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವದುರ್ವಾಸನೆ ಮರ(ಮಾಪಿಯಾ ಫೋಟಿಡಾ) ಮತ್ತು ಏಕನಾಯಕನ ಬೇರು (ಸಲೇಶಿಯಾ ಚೈನಾನ್ಸಿಸ್) ಗಿಡಗಳನ್ನು ತಮ್ಮ ನರ್ಸರಿಯಲ್ಲಿ ಪಾಲನೆ ಮಾಡುತ್ತಿದ್ದಾರೆ. ಅವುಗಳನ್ನು ಆಸಕ್ತ ರೈತರಿಗೆ ಕಡಿಮೆ ದರಕ್ಕೆ ನೀಡು‌ತ್ತಾರೆ. ಬಳಿಕ ಅಗತ್ಯವುಳ್ಳಕಂಪನಿಗಳು ಮತ್ತು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಆ ಮೂಲಕ ಸುಸ್ಥಿರ ಮಾರುಕಟ್ಟೆ ಮತ್ತು ಗುಣಮಟ್ಟದ ಉತ್ಪನ್ನ ಸಿಗುವಂತೆ ಮಾಡುತ್ತಿದ್ದಾರೆ.

‘ಕ್ಯಾನ್ಸರ್‌ಗೆ ಔಷಧಿಯಾಗಿ ಬಳಕೆ ಮಾಡುವ ದುರ್ವಾಸನೆ ಮರಗಳನ್ನು ನಮ್ಮ ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ, ಗುಜರಾತ್‌, ಗೋವಾದಲ್ಲಿಕೂಡ ಬೆಳೆಯಲಾಗಿದೆ.250 ಎಕರೆಗೂ ಅಧಿಕ ಜಾಗದಲ್ಲಿ ರೈತರು ಇದನ್ನು ಕೃಷಿ ಮಾಡಿದ್ದಾರೆ. ಏಕನಾಯಕನ ಬೇರನ್ನು100 ಎಕರೆ ಬೆಳೆಯುವ ಗುರಿ ಹೊಂದಲಾಗಿದೆ. ಇದು ಮಧುಮೇಹಕ್ಕೆ ಔಷಧಿ. ಜಪಾನ್, ಅಮೆರಿಕಮತ್ತು ಆಸ್ಟ್ರೇಲಿಯಾದಲ್ಲಿ ಇದಕ್ಕೆದೊಡ್ಡ ಮಾರುಕಟ್ಟೆಯಿದೆ’ ಎಂದು ಗಣೇಶ್ ವಿವರಿಸಿದರು.

‘ಬಹುತೇಕ ಕಂಪನಿಗಳು ತಮ್ಮ ಗಿಡಗಳನ್ನುಮಾರುಕಟ್ಟೆ ಮಾತ್ರ ಮಾಡುತ್ತವೆ. ಇದು ಕೇವಲ ನರ್ಸರಿ ಗಿಡಗಳನ್ನು ಮಾರುವ ತಂತ್ರ. ನಂತರ ಅವರು ಕಾಣಿಸುವುದೇ ಇಲ್ಲ. ಇತ್ತ ಬೆಳೆದ ರೈತರಿಗೂ ಮಾರುಕಟ್ಟೆ ಗೊತ್ತಿಲ್ಲದೇ ನಷ್ಟವಾಗುತ್ತದೆ. ಆದರೆ, ನನ್ನಿಂದ ಗಿಡಗಳನ್ನು ಖರೀದಿಸಿದರೈತರ ಬಗ್ಗೆ ಕಂಪನಿಗಳಿಗೆ, ಕಂಪನಿಗಳ ಬಗ್ಗೆ ರೈತರಿಗೆ ತಿಳಿದಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಮಾರುಕಟ್ಟೆ ಅಗತ್ಯ: ‘ಔಷಧೀಯ ಸಸ್ಯಗಳನ್ನು ಬೆಳೆಯುವ ಮೊದಲು ಮಾರುಕಟ್ಟೆ ಕಂಡುಕೊಳ್ಳುವುದು ಅತ್ಯಗತ್ಯ.ಒಪ್ಪಂದ ಇಲ್ಲದೇ ಯಾವುದೇ ಔಷಧೀಯ ಸಸ್ಯಗಳನ್ನು ಬೆಳೆಯಲು ರೈತರು ಮುಂದಾಗಬಾರದು. ಇದು ಶೇ 100 ಲಾಭದಾಯಕವಾದರೂ ಸಾಂಪ್ರದಾಯಿಕ ಬೆಳೆಗೆ ತೊಂದರೆ ಮಾಡಿ ಇದನ್ನೇ ಬೆಳೆಯುವುದು ಸರಿಯಲ್ಲ. ರೈತರು ಖಾಲಿ ಬಿಟ್ಟಿರುವ ಜಮೀನಿನಲ್ಲಿ ಔಷಧೀಯ ಸಸ್ಯಗಳ ಕೃಷಿ ಮಾಡುವುದು ಸರಿಯಾದ ಪದ್ಧತಿ’ ಎಂದು ಅವರು ಕಿವಿಮಾತು ಹೇಳುತ್ತಾರೆ.

2003ರಲ್ಲಿ ಆರಂಭಿಸಿದ ಈ ಕೃಷಿ ಚಟುವಟಿಕೆಯನ್ನು 2005ರಿಂದ ವಾಣಿಜ್ಯಿಕವಾಗಿ ವಿಸ್ತರಿಸಿದರು.ಕಾನೂನು ಪದವೀಧರ, ನಂತರ ಎಂಬಿಎ ಅಧ್ಯಯನ ಮಾಡಿದ ಗಣೇಶ್‌, ಕೃಷಿ ಕಡೆ ಒಲವು ತೋರಿದರು.

ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಏನಾದರೂ ಮಾಡಬೇಕು ಎಂದು ಮನಸ್ಸು ಚಡಪಡಿಸಿದಾಗ ಸಹಾಯಕ್ಕೆ ಬಂದವರು ಡಾ.ದತ್ತಾ ಫಾಯ್ದೆ, ಡಾ.ಜಯಕರ ಭಂಡಾರಿ, ಡಾ.ವಾಸುದೇವ್, ಪ್ರೊ.ಸಿ.ಕೆ.ವೇಣುಗೋಪಾಲ್. ಜೊತೆಗೇ ತಂದೆ ರಾಮಕೃಷ್ಣ ನೇವರೇಕರ್ ಹಾಗೂ ತಾಯಿ ರಾಜಶ್ರೀ ಆರ್.ನೇವರೇಕರ್ ಕೂಡ ಬೆನ್ನುತಟ್ಟಿದರು ಎಂದು ಸ್ಮರಿಸಿದರು.

ಬಹುಹಂತದ ಕೃಷಿಗೆ ಆದ್ಯತೆ:‘ಕೃಷಿಯಲ್ಲಿ ನಷ್ಟ ಅವಿಭಾಜ್ಯ ಅಂಗ. ಒಂದರಲ್ಲಿ ಒಂದು ವರ್ಷ ನಷ್ಟವಾದರೂ ಮತ್ತೊಂದರಲ್ಲಿ ಸರಿದೂಗಿಸುವ ರೀತಿಯಲ್ಲಿ ಸಸಿಪಾಲನೆ ಮಾಡಬೇಕು. ಇದಕ್ಕೆ ಅಗತ್ಯ ಸಲಹೆಗಳನ್ನು ನಾನು ರೈತರಿಗೆ ನೀಡುತ್ತೇನೆ’ ಎನ್ನುತ್ತಾರೆ ಗಣೇಶ್.

‘ಬೇಲಿಯ ಅಂಚಿಗೆಒಂದೆರಡು ಸುತ್ತು ಮಹಾಗನಿ, ಅದರ ಮಧ್ಯೆ ರಕ್ತಚಂದನದಂತಹ ಗಿಡಗಳನ್ನು ನೆಡಬೇಕು. ಸದ್ಯಕ್ಕೆ ನಾವು ಮಲೇಶಿಯನ್ ಹಲಸು ಬೆಳೆಯುತ್ತಿದ್ದೇವೆ.ಅದು ನಾಲ್ಕನೇ ವರ್ಷದಿಂದ ಫಸಲು ಆರಂಭಿಸಿದರೆ100 ವರ್ಷದವರೆಗೆನೀಡುತ್ತದೆ. ಅವುಗಳ ಮಧ್ಯಂತರ ಬೆಳೆಯಾಗಿ ಏಕನಾಯಕನ ಬೇರನ್ನು ಆರೈಕೆ ಮಾಡಬೇಕು. ಅವುಗಳ ಮಧ್ಯೆ ಲಾವಂಚ ಬೇರನ್ನು ಚೀಲಗಳಲ್ಲಿ ನೆಡಬೇಕು. ಆಗ ಒಂದರಲ್ಲಿ ನಷ್ಟವಾದರೂ ಮತ್ತೊಂದರಲ್ಲಿ ಸರಿಹೊಂದುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT