ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಬಂದರು ವಿಸ್ತರಣೆ: ಅಧಿಕಾರಿಗಳ ಜೊತೆ ಸಭೆ

ಮೀನುಗಾರರ ಹಿತ ಕಾಪಾಡಲು ಇಲಾಖೆ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 25 ಡಿಸೆಂಬರ್ 2019, 9:43 IST
ಅಕ್ಷರ ಗಾತ್ರ

ಕಾರವಾರ:‘ನಗರದ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಬಗ್ಗೆ ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ಮೀನುಗಾರರ ಮುಖಂಡರು, ವಿವಿಧ ತಜ್ಞರ ಹಾಗೂ ಅಧಿಕಾರಿಗಳ ಅಭಿಪ್ರಾಯ, ಸಲಹೆಗಳನ್ನು ಆಲಿಸಿದ ಬಳಿಕ ಅವರು ಮಾತನಾಡಿದರು.

‘ಸಾಗರಮಾಲಾ ಯೋಜನೆಯಿಂದ ಮೀನುಗಾರರಿಗೆ, ಬಂದರು ತಮ್ಮ ಕೈತಪ್ಪುತ್ತದೆ ಎಂಬ ಆತಂಕವಿದೆ. ಸಮುದ್ರದಲ್ಲಿ ತಮಗಿರುವ ಹಕ್ಕುಗಳು ಮೊಟಕಾಗುತ್ತವೆ. ಕಡಲತೀರ ಹಾಳಾಗುತ್ತದೆ ಎಂಬ ಆತಂಕಗಳಿವೆ. ಮೀನುಗಾರರ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಜಾರಿಯ ಬಗ್ಗೆ ಚಿಂತಿಸಲಾಗುವುದು’ ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದಬಂದರು ಅಧಿಕಾರಿ ಕ್ಯಾಪ್ಟನ್ ಸ್ವಾಮಿ, ‘ಸಾಗರಮಾಲಾ ಯೋಜನೆಯಡಿ ₹ 274 ಕೋಟಿ ವೆಚ್ಚದಲ್ಲಿಕಾಮಗಾರಿ ನಡೆಯಲಿದೆ. ಇದರಿಂದ 880 ಮೀಟರ್ ಅಲೆ ತಡೆಗೋಡೆ, 250 ಮೀಟರ್ ಜಟ್ಟಿ ವಿಸ್ತರಣೆ ಆಗಲಿದೆ’ ಎಂದು ತಿಳಿಸಿದರು.

‘ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಂದರುಗಳ ಮೂಲಕ ವಾಣಿಜ್ಯ ಚಟುವಟಿಕೆಗಳು ವರ್ಷಕ್ಕೆ 10 ಲಕ್ಷ ಮೆಟ್ರಿಕ್ ಟನ್‌ಗಳಷ್ಟೂ ಇಲ್ಲ.ಹಾಗಾಗಿ ಕಾರವಾರದಲ್ಲಿಪೂರ್ಣ ಪ್ರಮಾಣದ ಬಂದರಾಗಿ ಮೀನುಗಾರರು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗಬೇಕು’ ಎಂದು ಪ್ರತಿಪಾದಿಸಿದರು.

ಆತಂಕಗಳು: ಮೀನುಗಾರರ ಮುಖಂಡ ಕೆ.ಟಿ.ತಾಂಡೇಲ ಮಾತನಾಡಿ, ‘ಮೀನುಗಾರಿಕಾ ಬಂದರಿನಲ್ಲಿ ಹೆಚ್ಚುದೋಣಿಗಳು ಬಂದರೆ ಈಗಲೇ ಜಾಗ ಸಾಕಾಗುತ್ತಿಲ್ಲ. ವಾಣಿಜ್ಯ ಬಂದರಿನ ವಿಸ್ತರಣೆಯಾದರೆ ಮತ್ತಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಕಾರವಾರದಲ್ಲಿ ವಾಣಿಜ್ಯ ಮತ್ತು ಮೀನುಗಾರಿಕಾ ಬಂದರು ಜೊತೆಗಿವೆ. ಮುಂದೊಂದು ದಿನ ಭದ್ರತೆಯ ಕಾರಣ ನೀಡಿ ಮೀನುಗಾರಿಕಾ ಬಂದರನ್ನು ಸ್ಥಗಿತಗೊಳಿಸಬಹುದು. ದೊಡ್ಡ ಹಡಗುಗಳು ಬರುವುದಕ್ಕಾಗಿಮೀನುಗಾರಿಕಾ ದೋಣಿಗಳ ಸಂಚಾರ ತಡೆಯಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಕಡಲವಿಜ್ಞಾನಿ ಡಾ.ವಿ.ಎನ್.ನಾಯಕ ಮಾತನಾಡಿ, ‘ಬೈತಖೋಲ್ ಪ್ರದೇಶದಿಂದ ಕಾಳಿ ನದಿಯ ತನಕ ಹೇರಳವಾಗಿ ಮೀನುಗಳು ಸಿಗುತ್ತವೆ. ಹಾಗಾಗಿಯೇ ಅಲ್ಲಿ ಹೆಚ್ಚು ಮೀನುಗಾರರು ವಾಸವಿದ್ದಾರೆ. ಕಡಲತೀರದಲ್ಲೇ ಅಲೆ ತಡೆಗೋಡೆ ನಿರ್ಮಿಸಿದರೆ ಅವರೆಲ್ಲಿಗೆಹೋಗಬೇಕು’ ಎಂದು ಕಳವಳ ವ್ಯಕ್ತಪಡಿಸಿದರು.

ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ‘ನೌಕಾನೆಲೆಯ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಪಾಸ್ ನೀಡುವುದಾಗಿ ಸೀಬರ್ಡ್ ನೌಕಾನೆಲೆಗೆ ಭೂಸ್ವಾಧೀನದ ಸಂದರ್ಭದಲ್ಲಿ ಹೇಳಲಾಗಿತ್ತು. ಆದರೆ, ಆ ಕಾರ್ಯವಾಗಿಲ್ಲ. ಅಲ್ಲಿ ಹೋಗಲು ಅವಕಾಶವಿಲ್ಲ.ಮುಂದೆ ಇಲ್ಲೂ ಅದೇ ರೀತಿಯಾಗದು ಎಂದು ಹೇಗೆ ಭರವಸೆ ಮೂಡಿಸುತ್ತೀರಿ’ ಎಂದು ಪ್ರಶ್ನಿಸಿದರು.

‘ಆರಂಭದಲ್ಲೇ ಯಾಕೆ ವಿರೋಧಿಸಿಲ್ಲ?’:‘2017ರ ಡಿ.6ರಂದು ಅಂದಿನ ಮುಖ್ಯಮಂತ್ರಿಸಿದ್ದರಾಮಯ್ಯ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬಂದರು ವಿಸ್ತರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗಲೇ ಯಾಕೆ ವಿರೋಧಿಸಲಿಲ್ಲ? ಮೀನುಗಾರರನ್ನು ಕತ್ತಲಲ್ಲಿ ಯಾಕೆ ಇಟ್ಟಿರಿ’‌ ಎಂದು ಶಾಸಕಿ ರೂಪಾಲಿ ನಾಯ್ಕ ಯೋಜನೆಯ ವಿರೋಧಿಗಳನ್ನು ಪ್ರಶ್ನಿಸಿದರು.

‘ಮೀನುಗಾರರಿಗೆ ಅನ್ಯಾಯವಾಗದಂತೆ ಕಾಮಗಾರಿ ನಡೆಸಬೇಕಿದೆ. ಕಡಲ ತೀರವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಅದರ ಬಗ್ಗೆ ಚರ್ಚಿಸೋಣ’ ಎಂದರು.

ಮೀನುಗಾರರ ವಿರೋಧ:ಜಿಲ್ಲಾಧಿಕಾರಿ ಕಚೇರಿಯ ಗೇಟಿನ ಬಳಿ ಸೇರಿದ್ದ ನೂರಾರು ಮೀನುಗಾರರು, ಯೋಜನೆಯ ವಿರುದ್ಧ ಘೋಷಣೆ ಕೂಗಿದರು. ಸಭೆಯ ನಂತರಮೀನುಗಾರರ ಬಳಿಗೆ ಬಂದ ಸಚಿವಪೂಜಾರಿ ಮೀನುಗಾರರಿಗೆ ಆತಂಕ ಬೇಡ ಎಂದರು. ಬಳಿಕಸಭೆ ಸೇರಿದ ಮೀನುಗಾರರು, ಯೋಜನೆಯ ವಿರುದ್ಧ ಹೋರಾಟ ಮುಂದುವರಿಸಲು ತೀರ್ಮಾನಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಮೀನುಗಾರರ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT