ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಜಿ ಶಿಪ್ಪಿಂಗ್ ಕೋರ್ಸ್‌ ಆರಂಭಕ್ಕೆ ಬೇಡಿಕೆ: ಕ್ರಮದ ಭರವಸೆ

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 3 ಫೆಬ್ರುವರಿ 2022, 16:47 IST
ಅಕ್ಷರ ಗಾತ್ರ

ಕಾರವಾರ: ‘ರಾಜ್ಯದಲ್ಲಿ ಹಡಗು ನಿರ್ದೇಶನಾಲಯದ (ಡಿ.ಜಿ.ಶಿಪ್ಪಿಂಗ್) ಪ್ರಮಾಣ ಪತ್ರ ನೀಡುವ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ಕೊರತೆಯಿಂದ ರಾಜ್ಯದ ಯುವಕರಿಗೆ ಆಗುತ್ತಿರುವ ಸಮಸ್ಯೆಯ ಅರಿವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ನಗರದಲ್ಲಿ ಗುರುವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೌಕಾನೆಲೆಯ ಕಮಾಂಡರ್ ಆಫ್ ಯಾರ್ಡ್‌ನ ಕಾಯಂ ನೌಕರರು, ಕೋರ್ಸ್‌ನ ಕೊರತೆಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಸಚಿವರ ಗಮನ ಸೆಳೆದರು.

‘ಐದಾರು ವರ್ಷಗಳಿಂದ ಇನ್‌ಲ್ಯಾಂಡ್ ಮಾಸ್ಟರ್ ಡ್ರೈವರ್ ಹುದ್ದೆಯ ಪರೀಕ್ಷೆ ನಡೆಸುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆಯಲ್ಲಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಈವರೆಗೆ ಪರೀಕ್ಷೆ ನಡೆಸಿಲ್ಲ. ಇದರಿಂದ ಹುದ್ದೆಗಳು ಬೇರೆ ರಾಜ್ಯದವರ ಪಾಲಾಗುತ್ತಿವೆ. ಜೊತೆಗೇ ಬಡ್ತಿಯನ್ನೂ ಪಡೆಯುತ್ತಿದ್ದಾರೆ. ಕನ್ನಡಿಗರು ಹಿಂದೆ ಉಳಿಯುತ್ತಿದ್ದಾರೆ’ ಎಂದು ದೂರಿದರು.

‘ಸುಮಾರು 200 ಮಂದಿ ಕನ್ನಡಿಗರು ಈ ರೀತಿಯ ತೊಡಕು ಎದುರಿಸುತ್ತಿದ್ದಾರೆ. ನಮ್ಮಲ್ಲಿ ಬಹುತೇಕರು ನೌಕಾನೆಲೆಯ ನಿರಾಶ್ರಿತರು. ಮುಂಬಡ್ತಿ ಹೊಂದುವ ಅರ್ಹತೆಯಿದ್ದರೂ ಡಿ.ಜಿ. ಶಿಪ್ಪಿಂಗ್‌ನ ಪ್ರಮಾಣ ಪತ್ರವಿಲ್ಲದ ಕಾರಣ ನಿರಾಕರಿಸಲಾಗುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಪುನಶ್ಚೇತನ ಕೋರ್ಸ್ ಇಲ್ಲದೆಯೇ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಳೆದ ವರ್ಷ ಕರ್ನಾಟಕದಲ್ಲಿ ಪುನಶ್ಚೇತನ ಕೋರ್ಸ್‌ ಮಾಡಿದವರಿಗೆ ಮಾತ್ರ ಪ‍ರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿ ಒಂದೇ ಒಂದು ಸಂಸ್ಥೆಯಲ್ಲಿ ಕೋರ್ಸ್ ಕಲಿಸುತ್ತಿಲ್ಲ. ಹಾಗಾಗಿ ನಮಗೆ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಲಿಲ್ಲ. ಆದರೂ ನಾವು ಪರೀಕ್ಷೆಗೆ ಅರ್ಜಿ ಸಲಿಸಿದ್ದೆವು. ಆದರೆ, ಪರೀಕ್ಷೆ ನಡೆಸುವ ಬಗ್ಗೆ ಮಾಹಿತಿ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದೇವೇಳೆ, ವೇತನ ಬಾಕಿ, ಇ ಸ್ವತ್ತು, ಕುಡಿಯುವ ನೀರು, ಆಶ್ರಯ ಮನೆ, ಶೈಕ್ಷಣಿಕ, ಪಿಂಚಣಿ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಾರ್ವಜನಿಕರು ಸಲ್ಲಿಸಿದ ಅರ್ಜಿ, ಮನವಿಗಳನ್ನು ಸಚಿವರು ಸ್ವೀಕರಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ‍ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ, ತಹಶೀಲ್ದಾರ್ ನಿಶ್ಚಲ್ ನರೋನಾ, ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಸಾರ್ವಜನಿಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT