ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಡೇಶ್ವರದ ಚಿತ್ರಣ ಬದಲಿಸಿದ ಕನಸುಗಾರ ‘ಆರ್.ಎನ್.ಶೆಟ್ಟಿ‘

ಹತ್ತಾರು ನಿರ್ಮಾಣಗಳಿಂದ ಪ್ರಸಿದ್ಧರಾಗಿದ್ದ ಉದ್ಯಮಿ ಆರ್.ಎನ್.ಶೆಟ್ಟಿ ಇನ್ನು ನೆನಪು ಮಾತ್ರ
Last Updated 17 ಡಿಸೆಂಬರ್ 2020, 13:54 IST
ಅಕ್ಷರ ಗಾತ್ರ

ಭಟ್ಕಳ: ‘ಆಧುನಿಕ ಮುರ್ಡೇಶ್ವರದ ನಿರ್ಮಾತೃ’ ಎಂದೇ ಪ್ರಸಿದ್ಧರಾಗಿದ್ದವರು ರಾಮ ನಾಗಪ್ಪ ಶೆಟ್ಟಿ (ಆರ್.ಎನ್.ಶೆಟ್ಟಿ). ಶಿರಸಿಯಲ್ಲಿ ಗುತ್ತಿಗೆದಾರನಾಗಿ ವೃತ್ತಿ ಆರಂಭಿಸಿದ ಅವರು, ಜಿಲ್ಲೆಯಲ್ಲಿ ಹತ್ತಾರು ಕಾಮಗಾರಿಗಳನ್ನು ನಿರ್ಮಿಸಿ ಪ್ರಸಿದ್ಧರಾದರು.

ಮುರ್ಡೇಶ್ವರದ ಹೆಬ್ಬಾಗಿಲ ಮನೆ ನಾಗಪ್ಪ ಶೆಟ್ಟಿ ಅವರ ಮಗನಾಗಿ 1928ರ ಆ.15ರಂದು ಜನಿಸಿದ ಆರ್.ಎನ್.ಶೆಟ್ಟಿ, 10 ಸಾವಿರಕ್ಕೂ ಹೆಚ್ಚು ಜನರಿಗೆ ತಮ್ಮ ಉದ್ದಿಮೆಗಳ ಮೂಲಕ ಉದ್ಯೋಗಾವಕಾಶ ಕಲ್ಪಿಸಿದವರು.

ರೈತ ಕುಟುಂಬದಲ್ಲಿ ಜನಿಸಿ, ಕೃಷಿ ಕಾಯಕದ ಕಷ್ಟವನ್ನು ಕಂಡ ಅವರು, ತರಗತಿಯ ಓದಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಬಾಲ್ಯದಲ್ಲೇ ದುಡಿಮೆಗೆ ಗಮನ ಹರಿಸಿದರು. ಅವರು ನಿರ್ಮಿಸಿದ ಸೇತುವೆಗಳು ಇಂದಿಗೂ ಸಂಪರ್ಕ ಕೊಂಡಿಗಳಾಗಿವೆ. 1961ರಲ್ಲಿ ಹುಬ್ಬಳ್ಳಿಯಲ್ಲಿ ‘ಆರ್.ಎನ್.ಶೆಟ್ಟಿ’ ಕಂಪನಿ ಪ್ರಾರಂಭಿಸಿದರು. ಅದರ ಮೂಲಕ ರಾಜ್ಯ ಸರ್ಕಾರದ ದೊಡ್ಡ ದೊಡ್ಡ ಸೇತುವೆ, ರಸ್ತೆ ಕಾಮಗಾರಿಗಳನ್ನು ಯಶಸ್ವಿಯಾಗಿ ನಿರ್ಮಿಸಿದರು. ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ, ಲಿಂಗನಮಕ್ಕಿ ಜಲಾಶಯ, ವಾರಾಹಿ ಜಲವಿದ್ಯುತ್ ಯೋಜನೆ ಹಾಗೂ ಶರಾವತಿ ಟೇಲರೀಸ್ ಜಲಾಶಯಗಳನ್ನು ನಿರ್ಮಿಸಿ ಅಚ್ಚರಿ ಮೂಡಿಸಿದರು.

ರಾಜ್ಯದಲ್ಲಿಯೇ ಪ್ರಥಮ ಮುರ್ಡೇಶ್ವರ ಸಿರಾಮಿಕ್ಸ್ ಅನ್ನು ‘ನವೀನ್’ ಹೆಸರಿನಲ್ಲಿ ಆರಂಭಿಸಿದರು. 1977ರಲ್ಲಿ ಹೊಟೇಲ್ ಉದ್ಯಮಕ್ಕೂ ಜಿಗಿದ ಅವರು, ಹುಬ್ಬಳ್ಳಿಯಲ್ಲಿ ನವೀನ್ ಹೋಟೆಲ್, ಮುರ್ಡೇಶ್ವರದಲ್ಲಿ ಆರ್.ಎನ್.ಎಸ್ ರೆಸಿಡೆನ್ಸಿ ಮತ್ತು ಆರ್.ಎನ್.ಎಸ್. ಗಾಲ್ಫ್ ಹೋಟೆಲ್ ತೆರೆದರು. ಮಾರುತಿ ಸುಜುಕಿ ಕಾರುಗಳ ಮಾರಾಟದ ಏಜೆನ್ಸಿ ಪಡೆದು ಮುರ್ಡೇಶ್ವರ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದರು.

ಸಂಪತ್ತು ಗಳಿಕೆಯೊಂದಿಗೇ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡರು. ಶಾಲೆ, ಕಾಲೇಜು, ದೇವಸ್ಥಾನಗಳಿಗೆ ನೆರವಾದರು. ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಪ್ರಸ್ತುತ ಆರ್.ಎನ್.ಎಸ್ ಹೆಸರಿನಲ್ಲಿ ಎಂಜಿನಿಯರಿಂಗ್, ಪಿ.ಯು., ನರ್ಸಿಂಗ್, ಪದವಿ ಕಾಲೇಜುಗಳು ಹೆಮ್ಮರವಾಗಿ ಬೆಳೆದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಆರ್.ಎನ್.ಎಸ್ ರೂರಲ್ ಪಾಲಿಟೆಕ್ನಿಕ್ ಎಂಬ ಯೋಜನೆಯಡಿ ಗ್ರಾಮೀಣ ಭಾಗದ ಸಾವಿರಾರು ಜನರಿಗೆ ಸ್ವ ಉದ್ಯೋಗದ ತರಬೇತಿ ನೀಡಿದರು.

ಭಟ್ಕಳ ಹಾಗೂ ಸುತ್ತಮುತ್ತಲಿನ ಜನರು ಚಿಕಿತ್ಸೆಗಾಗಿ ದೂರದ ಮಂಗಳೂರು, ಉಡುಪಿಯನ್ನು ಅವಲಂಬಿಸಿದ್ದರು. ಇದನ್ನು ಅರಿತು ಆರ್.ಎನ್.ಎಸ್ ಹೆಸರಿನಲ್ಲಿ ಹೈಟೆಕ್ ಆಸ್ಪತ್ರೆಯನ್ನು ಮುರ್ಡೇಶ್ವರದಲ್ಲಿ ಸ್ಥಾಪಿಸಿದರು.

ಜಗತ್ಪ್ರಸಿದ್ಧ ಮುರ್ಡೇಶ್ವರ:

ಮುರ್ಡೇಶ್ವರ ದೇವಾಲಯವನ್ನು ಸಂಪೂರ್ಣ ಶಿಲಾಮಯ ಮಾಡಲು 1978ರಲ್ಲಿ ಪಣತೊಟ್ಟ ಆರ್.ಎನ್.ಶೆಟ್ಟಿ, ಆ ಕೆಲಸವನ್ನು ನಾಲ್ಕೇ ವರ್ಷಗಳಲ್ಲಿ ಪೂರ್ಣಗೊಳಿಸಿದರು. 123 ಅಡಿ ಎತ್ತರದ ಪದ್ಮಾಸನಾರೂಢ ಶಿವ ವಿಗ್ರಹವನ್ನು ಸಿಮೆಂಟಿನಿಂದ ರಚಿಸಿ ಮುರ್ಡೇಶ್ವರದ ಚಿತ್ರಣವನ್ನೇ ಬದಲಿಸಿದರು. ಸಾವಿರಾರು ಪ್ರವಾಸಿಗರನ್ನು ಪ್ರತಿವರ್ಷ ಬರುವಂತೆ ಸೆಳೆದರು. ದೇಶದಲ್ಲೇ ಅಪರೂಪವಾದ, 249 ಅಡಿ ಎತ್ತರದ ರಾಜಗೋಪುರವನ್ನು ಮುರ್ಡೇಶ್ವರದಲ್ಲಿ ನಿರ್ಮಿಸಿದರು.

ಸಂದ ಗೌರವಗಳು:

ಅವರ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯವು 2009ರಲ್ಲಿ ಗೌರವ ಡಾಕ್ಟರೇಟ್, ಎಫ್.ಕೆ.ಸಿ.ಸಿ.ಐ.ನಿಂದ 2004ರಲ್ಲಿ ‘ಸರ್.ಎಂ.ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಕಾಸಿಯಾದಿಂದ 2006ರಲ್ಲಿ ‘ಕೈಗಾರಿಕಾ ರತ್ನ ಪ್ರಶಸ್ತಿ’, ಕೆನರಾ ಕಾಲ್ ಸೊಸೈಟಿಯಿಂದ ‘ಕೆನರಾ ರತ್ನ’ ಪುರಸ್ಕಾರಗಳು ಪ್ರದಾನವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT